KK Venugopal 
ಸುದ್ದಿಗಳು

ದೇಶಕ್ಕೆ ನಾಲ್ಕು ಮೇಲ್ಮನವಿ ನ್ಯಾಯಾಲಯಗಳ ಅಗತ್ಯವಿದೆ: ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್

ಹೈಕೋರ್ಟ್, ನ್ಯಾಯಮಂಡಳಿ ಹಾಗೂ ಇತರೆಡೆಗಳ ಮೇಲ್ಮನವಿ ಪ್ರಕರಣಗಳನ್ನು ಆಲಿಸಲು ಸುಪ್ರೀಂಕೋರ್ಟ್ ಮೇಲ್ಮನವಿ ನ್ಯಾಯಾಲಯಗಳನ್ನು ರಚಿಸಬೇಕು ಎಂದು ವೇಣುಗೋಪಾಲ್ ಅಭಿಪ್ರಾಯಪಟ್ಟರು.

Bar & Bench

ಸುಪ್ರೀಂಕೋರ್ಟ್‌ನ ಪ್ರಸ್ತುತ ಪಾತ್ರವನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದ್ದು ಸಾಂವಿಧಾನಿಕ ವ್ಯಾಖ್ಯಾನದ ಸಮಸ್ಯೆಗಳನ್ನು ಒಳಗೊಂಡ ಪ್ರಕರಣಗಳ ವಿಚಾರಣೆಯನ್ನು ಮಾತ್ರವೇ ಆಲಿಸುವ ಸಂಪೂರ್ಣವಾಗಿ ಸಾಂವಿಧಾನಿಕ ನ್ಯಾಯಾಲಯವನ್ನಾಗಿ ಅದನ್ನು ಪರಿವರ್ತಿಸಬೇಕು ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಸುಪ್ರೀಂ ಕೋರ್ಟ್ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಭಾಗವಹಿಸಿದ್ದರು.

ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿರುವ ಹೈಕೋರ್ಟ್‌, ನ್ಯಾಯಮಂಡಳಿ ಹಾಗೂ ಇತರೆಡೆಗಳ ಪ್ರಕರಣಗಳ ಮೇಲ್ಮನವಿಗಳನ್ನು ಆಲಿಸಲು ನಾಲ್ಕು ಮೇಲ್ಮನವಿ ನ್ಯಾಯಾಲಯಗಳನ್ನು ರಚಿಸಬೇಕು ಎಂದು ವೇಣುಗೋಪಾಲ್ ಅಭಿಪ್ರಾಯಪಟ್ಟರು.

“ಸಾಮಾನ್ಯ ಕಾನೂನು ಇರುವ ಬಹುತೇಕ ದೇಶಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಡುವೆ ಮಧ್ಯಂತರ ಮೇಲ್ಮನವಿ ನ್ಯಾಯಾಲಯಗಳಿವೆ. ಆ ನ್ಯಾಯಾಲಯಗಳನ್ನು ದೇಶದ ಸುಪ್ರೀಂಕೋರ್ಟ್‌ ಸಮಯ ತಿನ್ನುವಂತಹ ಪ್ರಕರಣಗಳನ್ನೆಲ್ಲಾ ಹೀರಿಕೊಳ್ಳುತ್ತವೆ. ಮೇಲ್ಮನವಿ ನ್ಯಾಯಾಲಯಗಳಿಂದ ಯಾವುದೇ ಮೇಲ್ಮನವಿ ಇರುವುದಿಲ್ಲ. ನಮಗೆ ತಲಾ 15 ನ್ಯಾಯಮೂರ್ತಿಗಳಿರುವ ಅಂತಹ ನಾಲ್ಕು ನ್ಯಾಯಾಲಯಗಳ ಅಗತ್ಯವಿದೆ” ಎಂದು ಎಜಿ ಹೇಳಿದರು.

"ಆಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಬಾಕಿ ಉಳಿಯುವಿಕೆ ಕಡಿಮೆಯಾಗುತ್ತದೆ. ದೇಶದ ಸುಪ್ರೀಂ ಕೋರ್ಟ್‌ಗೆ ಈಗಿನಂತೆ 34 ನ್ಯಾಯಾಧೀಶರ ಅಗತ್ಯವಿಲ್ಲ. (ಒಮ್ಮೆ ಮೇಲ್ಮನವಿ ನ್ಯಾಯಾಲಯಗಳು ಸ್ಥಾಪನೆಯಾದ ನಂತರ) ತಲಾ 5 ನ್ಯಾಯಾಧೀಶರ 3 ಸಾಂವಿಧಾನಿಕ ಪೀಠಗಳಲ್ಲಿ 15 ನ್ಯಾಯಾಧೀಶರು ಕಾರ್ಯನಿರ್ವಹಿಸಬೇಕು ಇದರಿಂದ ತಾಳ್ಮೆಯಿಂದ ಪ್ರಕರಣಗಳನ್ನು ಆಲಿಸಲು ಮತ್ತು ಅತ್ಯುತ್ತಮ ತೀರ್ಪು ಬರೆಯಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಿದರು.

"75 ವರ್ಷಗಳಿಂದ ಕೇಳಲಾಗುತ್ತಿರುವ ಒಂದು ಪ್ರಶ್ನೆಯೆಂದರೆ, ಸುಪ್ರೀಂ ಕೋರ್ಟ್ ನಿಜವಾಗಿಯೂ ಸಾಂವಿಧಾನಿಕ ನ್ಯಾಯಾಲಯವೇ? ಕಾನೂನಿನಲ್ಲಿ ದೋಷ ಅಥವಾ ಸಮಸ್ಯೆ ಇರುವ ಹೈಕೋರ್ಟ್‌ಗಳ ಎಲ್ಲಾ ಪ್ರಕರಣಗಳನ್ನು ಇದು ವ್ಯವಹರಿಸಿದೆ. ನಾವು 2008ರಿಂದ ಕ್ರಿಮಿನಲ್‌ ಕೇಸ್‌ಗಳು ಮತ್ತು 2009ರಿಂದ ಸಿವಿಲ್ ಪ್ರಕರಣಗಳು ಬಾಕಿ ಉಳಿದಿರುವುದನ್ನು ನೋಡುತ್ತಿದ್ದೇವೆ. ಅಂದಿನಿಂದ ಇಲ್ಲಿ (ಸುಪ್ರೀಂ ಕೋರ್ಟ್) ಬಾಕಿಯಿದ್ದರೆ, ಅವು ವಿಚಾರಣಾ ನ್ಯಾಯಾಲಯಗಳಲ್ಲಿ ದಶಕಗಳಿಂದ ಬಾಕಿ ಉಳಿದಿರುತ್ತವೆ. ಹಾಗಾಗಿ ನ್ಯಾಯ ಸಿಗುವಷ್ಟರಲ್ಲಿ ಒಟ್ಟು 30 ವರ್ಷಗಳು ಕಳೆದಿರುತ್ತವೆ,’’ ಎಂದು ವೇಣುಗೋಪಾಲ್ ಹೇಳಿದರು.

"ನ್ಯಾಯವನ್ನು ಪಡೆಯುವ ಹಕ್ಕು ಮೂಲಭೂತ ಹಕ್ಕು. ಇದು ಸೂಕ್ತ ವೆಚ್ಚ ಮತ್ತು ಸಮಯದೊಳಗೆ ದೊರೆಯಬೇಕು. 30 ವರ್ಷ ಸಮಂಜಸವಾದ ಸಮಯವಲ್ಲ. ಇದನ್ನು ನಿರ್ಲಕ್ಷಿಸಿದರೆ ಯಾವುದೇ ಪ್ರಯೋಜನವಿಲ್ಲ! ವಿಚಾರಣಾ ನ್ಯಾಯಾಲಯಕ್ಕೆ ಬರುವ ದಾವೆದಾರ ಅನುಭವಿಸುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುಲಾಗುತ್ತಿದೆಯೇ" ಎಂದು ಅವರು ಪ್ರಶ್ನಿಸಿದರು. "ಸುಪ್ರೀಂ ಕೋರ್ಟ್‌ (ಪಾತ್ರದ) ಮರುವಿಮರ್ಶೆಯ ಅವಶ್ಯಕತೆಯಿದೆ. ನಾವು ಅತ್ಯಂತ ತೊಡಕಿನ ವ್ಯವಸ್ಥೆಯನ್ನು ಮೊದಲಿನಿಂದಲೂ ಪಡೆದಿದ್ದೇವೆ. ತೊಡಕನ್ನು ತೆಗೆದುಹಾಕಬೇಕಾಗಿದೆ" ಎಂದರು.