[ಸಂವಿಧಾನ ದಿನ] ದುರುದ್ದೇಶಪೂರಿತ ದಾಳಿಗಳಿಂದ ನ್ಯಾಯಾಂಗವನ್ನು ರಕ್ಷಿಸಿ: ವಕೀಲರಿಗೆ ಸಿಜೆಐ ರಮಣ ಕರೆ

ವಕೀಲರು ಮತ್ತು ನ್ಯಾಯಮೂರ್ತಿಗಳು ದೊಡ್ಡ ಕುಟುಂಬದ ಭಾಗ. ವಕೀಲರ ಪರಿಷತ್ತು ಯಾವುದು ಸರಿಯೋ ಅದರ ಪರ ಮತ್ತು ಯಾವುದು ತಪ್ಪೋ ಅದರ ವಿರುದ್ಧ ನಿಲ್ಲಬೇಕು ಎಂದು ಸಿಜೆಐ ಎನ್‌ ವಿ ರಮಣ ಹೇಳಿದರು.
CJI NV Ramana
CJI NV Ramana

ನ್ಯಾಯಾಂಗವನ್ನು ಕೇಂದ್ರೀಕರಿಸಿ, ದುರುದ್ದೇಶಪೂರಿತವಾಗಿ ನಡೆಸಲಾಗುವ ದಾಳಿಗಳಿಂದ ನ್ಯಾಯಾಂಗವನ್ನು ರಕ್ಷಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ವಕೀಲರಿಗೆ ಕರೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್ತು ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. “ನ್ಯಾಯಮೂರ್ತಿಗಳು ಮತ್ತು ಸಂಸ್ಥೆಗೆ ವಕೀಲರು ಸಲಹೆ ನೀಡಬೇಕು. ನಾವೆಲ್ಲರೂ ಅಂತಿಮವಾಗಿ ದೊಡ್ಡ ಕುಟುಂಬದ ಭಾಗ. ನ್ಯಾಯಾಂಗವನ್ನು ಕೇಂದ್ರೀಕರಿಸಿದ ದುರುದ್ದೇಶಪೂರಿತ ದಾಳಿಗಳಿಂದ ಸಂಸ್ಥೆಯನ್ನು ರಕ್ಷಿಸಬೇಕು. ಯಾವುದು ಸರಿಯೋ ಅದರ ಪರವಾಗಿ ಮತ್ತು ಯಾವುದು ತಪ್ಪೋ ಅದರ ವಿರುದ್ಧವಾಗಿ ನಿಲ್ಲುವುದರಿಂದ ಹಿಂದೆ ಸರಿಯಬೇಡಿ” ಎಂದು ವಕೀಲರಿಗೆ ಸಿಜೆಐ ಕಿವಿಮಾತು ಹೇಳಿದರು.

“ಸ್ವಾತಂತ್ರ್ಯ ಹೋರಾಟ ಮತ್ತು ಆನಂತರ ಸಂವಿಧಾನದ ಕರಡು ರೂಪಿಸುವಲ್ಲಿ ಅವಿಭಾಜ್ಯವಾಗಿ ಕೆಲಸ ಮಾಡುವ ಮೂಲಕ ಅಪಾರ ಕೊಡುಗೆ ನೀಡಿದ ಕಾನೂನು ಸಮುದಾಯದ ಭಾಗವಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗುತ್ತದೆ. ಜನರ ಹಿತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ಅಪಾರ ಕೆಲಸ ಮಾಡಿದ ಖ್ಯಾತನಾಮರಾದ ವಕೀಲರಾದ ಮಹಾತ್ಮ ಗಾಂಧೀಜಿ, ಡಾ. ಬಿ ಆರ್‌ ಅಂಬೇಡ್ಕರ್‌, ಜವಾಹರಲಾಲ್‌ ನೆಹರೂ, ಲಾಲಾ ಲಜಪತ್‌ ರಾಯ್‌, ಸರ್ದಾರ್‌ ಪಟೇಲ್‌ ಮತ್ತು ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್‌ ಅವರನ್ನು ಯಾರೂ ಮರೆಯಲಾಗದು. ಇಲ್ಲಿರುವ ನಾವೆಲ್ಲರೂ ಆ ಭವ್ಯ ಪರಂಪರೆಯ ಉತ್ತರಾಧಿಕಾರಿಗಳು” ಎಂದು ಸಿಜೆಐ ನೆನಪಿಸಿದರು.

“ಸಂವಿಧಾನ ದಿನಾಚರಣೆ ಮಾಡುವ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ನಿರ್ಮಾತೃಗಳಿಗೆ ನಮನ ಸಲ್ಲಿಸುವುದರ ಜೊತೆಗೆ ಸ್ವತಂತ್ರ ಭಾರತದ ನಾಗರಿಕರನ್ನು ಅಭಿನಂದಿಸುವುದು ಬಹುಮುಖ್ಯ ಎಂದು ನನಗನ್ನಿಸುತ್ತದೆ. ಕೇವಲ ಮತ್ತೊಂದು ಲಿಖಿತ ದಾಖಲೆಯಾಗಬಹುದಾಗಿದ್ದ ಸಂವಿಧಾನಕ್ಕೆ ಕಳೆದ ಏಳು ದಶಕಗಳಿಂದ ತಮ್ಮ ಕಾರ್ಯಚಟುವಟಿಕೆಯ ಮೂಲಕ ದಾವೆದಾರರು, ವಕೀಲರು, ನ್ಯಾಯಮೂರ್ತಿಗಳು, ಶಾಸನ ರೂಪಿಸುವವರು, ಉದ್ಯಮಿಗಳು, ಕೆಲಸಗಾರರು ಮತ್ತು ಇನ್ನೂ ಹಲವರು ಜೀವ ತುಂಬಿದ್ದಾರೆ” ಎಂದು ಅವರು ಜನತೆಯನ್ನು ಶ್ಲಾ‍‍ಘಿಸಿದರು.

Also Read
ನ್ಯಾಯಾಂಗ ನಿಂದನೆ ಅಧಿಕಾರವನ್ನು ಶಾಸಕಾಂಗದ ಕಾಯಿದೆಯಿಂದಲೂ ತೆಗೆದುಹಾಕಲಾಗದು: ಸುಪ್ರೀಂಕೋರ್ಟ್

“ಸಂವಿಧಾನ ಮತ್ತು ಕಾನೂನಿನ ಬಗ್ಗೆ ಅಪಾರ ಜ್ಞಾನ ಹೊಂದಿರುವ ನಾವುಗಳು ಸಮಾಜದಲ್ಲಿ ಇತರೆ ಜನರು ನಿರ್ವಹಿಸುವ ಪಾತ್ರದ ಕುರಿತು ಅವರಿಗೆ ತಿಳಿವಳಿಕೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ... ಸಕಾರಣದಿಂದ ಈ ವೃತ್ತಿಯನ್ನು ಗೌರವಾನ್ವಿತ ವೃತ್ತಿ ಎಂದು ಕರೆಯಲಾಗುತ್ತದೆ. ಬೇರೆ ವೃತ್ತಿಗಳ ರೀತಿಯಲ್ಲಿಯೇ ಇದಕ್ಕೆ ತಜ್ಞತೆ, ಅನುಭವ ಮತ್ತು ಬದ್ಧತೆ ಬೇಕು. ಇದರ ಜೊತೆಗೆ ಪ್ರಾಮಾಣಿಕತೆ, ಸಾಮಾಜಿಕ ಸಮಸ್ಯೆಗಳ ಅರಿವು, ಸಾಮಾಜಿಕ ಜವಾಬ್ದಾರಿ, ನಾಗರಿಕ ನಡತೆಯೂ ಅತ್ಯಗತ್ಯ. ನೀವುಗಳು (ವಕೀಲರು) ಸಮಾಜದ ಮಾರ್ಗದರ್ಶಕರು ಮತ್ತು ನಾಯಕರು” ಎಂದರು.

ಸಂವಿಧಾನ ಸಭೆಯು 1949ರ ನವೆಂಬರ್‌ 26ರಂದು ಔಪಚಾರಿಕವಾಗಿ ಸಂವಿಧಾನವನ್ನು ಒಪ್ಪಿಕೊಂಡಿತು. 1950ರ ಜನವರಿ 26ರಂದು ಸಂವಿಧಾನವು ಅಸ್ತಿತ್ವಕ್ಕೆ ಬಂದಿತು. 2015ರಲ್ಲಿ ಭಾರತ ಸರ್ಕಾರವು ಅಧಿಕೃತವಾಗಿ ʼಸಂವಿಧಾನ ದಿನʼ ಎಂದು ಈ ದಿನವನ್ನು ಆಚರಿಸಲು ನಿರ್ಧರಿಸುವುದಕ್ಕೂ ಮುನ್ನ ಕಾನೂನು ಸಮುದಾಯದವರು ʼಕಾನೂನು ದಿನʼ ಎಂದು ಈ ದಿನವನ್ನು ಆಚರಣೆ ಮಾಡುತ್ತಿದ್ದರು.

Related Stories

No stories found.
Kannada Bar & Bench
kannada.barandbench.com