ಪ್ರಪಂಚದಾದ್ಯಂತ ಇರುವ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಭಾರತ ಮಾತ್ರ ಆರೋಗ್ಯ ಸೇತು ಟ್ರ್ಯಾಕಿಂಗ್ ಅಪ್ಲಿಕೇಶನ್‌ನಂಥ ಮೊಬೈಲ್ ಅಪ್ಲಿಕೇಶನ್ ಬಳಕೆಯನ್ನು ಕಡ್ಡಾಯಗೊಳಿಸಿದೆ ಎಂದು ಹಿರಿಯ ವಕೀಲ ಕೊಲಿನ್ ಗೋನ್ಸಾಲ್ವೆಸ್ ಅವರು ಕರ್ನಾಟಕ ಹೈಕೋರ್ಟ್ ಮುಂದೆ ವಾದ ಮಂಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠದ ಮುಂದೆ ವಾದ ಮಂಡನೆ ಮಾಡಿದ ಗೋನ್ಸಾಲ್ವೆಸ್ ಪ್ರಕರಣದಲ್ಲಿ ಮಧ್ಯಂತರ ಪರಿಹಾರ ಕೋರಿದರು.
“ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಭಾರತ ಮಾತ್ರ ಈ ರೀತಿಯ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಿದೆ… ಕಾಗದದ ಮೇಲೆ ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆ ಕಡ್ಡಾಯವಲ್ಲ. ಆದರೆ, ಎಲ್ಲಾ ಸರ್ಕಾರಿ ಸಂಸ್ಥೆಗಳು, ಖಾಸಗಿ ಕಂಪೆನಿಗಳು, ಮನೆಮಾಲೀಕರು ಅಪ್ಲಿಕೇಶನ್ ಬಳಕೆಗೆ ಒತ್ತಾಯಿಸುತ್ತಾರೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳದವರಿಗೆ ದಂಡ ವಿಧಿಸಲಾಗುವುದು ಎಂಬ ಬೆದರಿಕೆಯನ್ನು ನೊಯ್ಡಾ ಹಾಕಿದೆ,” ಎಂದು ವಿವರಿಸಿದರು.
ಸರ್ಕಾರಿ ಸೇವೆಗಳನ್ನು ಪಡೆಯಲು ಕಡ್ಡಾಯವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು ಮತ್ತು ಬಳಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ನ್ಯಾಯಮೂರ್ತಿ ಕೆ ಎಸ್ ಪುಟ್ಟಸ್ವಾಮಿ (ನಿವೃತ್ತ) ಮತ್ತು ಇತರರು ವರ್ಸಸ್ ಭಾರತ ಸರ್ಕಾರದ ತೀರ್ಪನ್ನು ಆಧರಿಸಿ ಬಲವಾಗಿ ವಾದಿಸಿದ ಗೋನ್ಸಾಲ್ವೆಸ್ ಅವರು ಕೇಂದ್ರ ಸರ್ಕಾರವು 2019ರ ತೀರ್ಪಿನಂತೆ 'ಸೀಮಿತ ಉದ್ದೇಶ'ದ ಮಿತಿಯನ್ನು ಅನುಸರಿಸುತ್ತಿಲ್ಲ ಎಂದು ತಕರಾರು ಎತ್ತಿದರು.
“ಈ ಅಪ್ಲಿಕೇಶನ್ ಅನ್ನು (ಆರೋಗ್ಯ ಸೇತು) ಎಲ್ಲಾ ಕಡೆ ಬಳಸಲಾಗುತ್ತದೆ. ಇ-ಪಾಸ್ ರೀತಿಯಲ್ಲಿ ಇದನ್ನು ಬಳಸಲಾಗುತ್ತಿದ್ದು ದೇಣಿಗೆ ನೀಡಲು, ಟೆಲಿಮೆಡಿಸಿನ್‌ಗಾಗಿ ಹೀಗೆ ಅನೇಕ ಕಡೆ ಬಳಸಲಾಗುತ್ತಿದೆ. ಇದರ ಮೇಲೆ ಆರೋಗ್ಯ ಕ್ಷೇತ್ರವೂ ಆಸಕ್ತಿ ಹೊಂದಿದೆ” ಎಂದು ಹೇಳಿದರು.
ಬಳಕೆದಾರರಿಂದ ನಿರ್ದಿಷ್ಟವಾಗಿ ಸಮ್ಮತಿ ಪಡೆಯದೆ ದತ್ತಾಂಶ ನಿಯಂತ್ರಕರು ಬಳಕೆದಾರರ ದತ್ತಾಂಶಗಳನ್ನು ಮೂರನೇ ವ್ಯಕ್ತಿಗೆ (ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ) ನೀಡುವಂತಿಲ್ಲ ಎಂದು ಅವರು ವಾದಿಸಿದರು. ಇದೇ ವೇಳೆ, ಉದ್ಯೋಗಿಗಳ ಆರೋಗ್ಯ ಸ್ಥಿತಿಗತಿ, ಅವರಿರುವ ಸ್ಥಳ ಮುಂತಾದ ಅನೇಕ ಮಾಹಿತಿಗಳನ್ನು ಉದ್ಯೋಗದಾತರು ಆರೋಗ್ಯ ಸೇತುವಿನಿಂದ ಪಡೆಯಲಿದ್ದಾರೆ ಎಂದು ಅಪ್ಲಿಕೇಶನ್‌ನ ಹಲವು ನ್ಯೂನತೆಗಳನ್ನು ಗೋನ್ಸಾಲ್ವೆಸ್ ಪಟ್ಟಿ ಮಾಡಿದರು.
ಮುಂದುವರೆದು, ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲಾಗಿರುವ ಅಪಾರ ಪ್ರಮಾಣದ ದತ್ತಾಂಶವನ್ನು ಸೋರಿಕೆ ಮಾಡಲಾಗಿದೆ ಎಂದರು. ಇದಕ್ಕಾಗಿ ಅವರು ಹಲವು ಪತ್ರಿಕೆಗಳ ವರದಿಗಳನ್ನು ಅವರು ಉಲ್ಲೇಖಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯವು, “ನಾವು ಪತ್ರಿಕೆಗಳ ಲೇಖನಗಳನ್ನು ಆಧರಿಸಲಾಗದು. ಪತ್ರಿಕೆಗಳಲ್ಲಿನ ಲೇಖನಗಳನ್ನು ಅವಲಂಬಿಸುವುದು ಅಸುರಕ್ಷಿತ. ಅಪ್ಲಿಕೇಶನ್‌ನಿಂದ ದತ್ತಾಂಶ ಸೋರಿಕೆಯಾಗಿದೆ ಎಂಬುದಕ್ಕೆ ಯಾವ ದಾಖಲೆ ಇದೆ?” ಎಂದು ಪ್ರಶ್ನಿಸಿತು.
ಬಳಕೆದಾರರ ಸೋರಿಕೆಯಾದ ದತ್ತಾಂಶ ಇಂಟರ್‌ನೆಟ್‌ನಲ್ಲಿ ಲಭ್ಯವಿದೆ. ಆರೋಗ್ಯ ಸೇತುವಿನ ಗುತ್ತಿದೆದಾರರೇ ಅಪಾರ ಪ್ರಮಾಣದಲ್ಲಿ ದತ್ತಾಂಶ ಸೋರಿಕೆಯಾಗಿದೆ ಎಂಬುದನ್ನು ತೋರಿಸುತ್ತಿದ್ದಾರೆ ಎಂದು ಗೋನ್ಸಾಲ್ವೆಸ್ ಪ್ರತಿಕ್ರಿಯಿಸಿದರು.
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದ ಸುಮಾರು 10 ಸಾವಿರ ಕೋವಿಡ್ ಸೋಂಕಿತರ ದತ್ತಾಂಶ ಇಂಟರ್‌ನೆಟ್‌ನಲ್ಲಿ ಲಭ್ಯವಾಗುತ್ತಿದೆ ಎಂಬ 'ದಿ ಇಕನಾಮಿಕ್ ಟೈಮ್ಸ್' ಪತ್ರಿಕೆಯ ಲೇಖನದ ಅಂಶಗಳ ಬಗ್ಗೆ ನ್ಯಾಯಾಲಯಕ್ಕೆ ವಿವರಿಸಲಾಯಿತು. ಅಪ್ಲಿಕೇಶನ್‌ನ ನಿಯಮ ಮತ್ತು ಷರತ್ತುಗಳ ಬಗ್ಗೆ ಗಮನಸೆಳೆದ ಗೋನ್ಸಾಲ್ವೆಸ್ ಅವರು ವ್ಯಕ್ತಿಯೊಬ್ಬರು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಂಡರೆ ಸಂಗ್ರಹಿಸಿದ ಸ್ವಲ್ಪ ಮಾಹಿತಿಯು ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಸರ್ವರ್‌ನಲ್ಲಿ ಅಡಕವಾಗುತ್ತದೆ. ಅದಾಗ್ಯೂ, ಇದನ್ನು ಕೇಂದ್ರ ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ ನಿರಾಕರಿಸಿದೆ ಎಂದರು.
ಒಬ್ಬ ವ್ಯಕ್ತಿಯು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಬಳಸಿದಾಗ ಅದು ಸಂಗ್ರಹಿಸಿದ ದತ್ತಾಂಶದ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕಳೆದ ತಿಂಗಳು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಕೇಂದ್ರ ಸರ್ಕಾರವು ಡಿಸೆಂಬರ್ 15ರಂದು ತನ್ನ ವಾದ ಮಂಡಿಸಲಿದೆ.