ಬಳಕೆದಾರರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಿದಾಗ ಸಂಗ್ರಹಿಸುವ ದತ್ತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಪಕ್ಷಕಾರರಿಗೆ ಹಲವು ಪ್ರಶ್ನೆಗಳನ್ನು ಹಾಕಿತು.
ವ್ಯಕ್ತಿಯೊಬ್ಬರು ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಸ್ವ-ಮೌಲ್ಯಮಾಪನ ನಡೆಸಿದರೆ, ಅಲ್ಲಿ ದಾಖಲಿಸಲಾದ ದತ್ತಾಂಶ ಸರ್ಕಾರ ಮತ್ತು ಇತರೆ ಸಂಸ್ಥೆಗಳಿಗೆ ಸಿಗುವುದೇ?
ವ್ಯಕ್ತಿಯೊಬ್ಬರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಬ್ಲೂಟೂಥ್ ಆನ್ ಮಾಡಿದರೆ ಯಾವ ತರಹದ ವೈಯಕ್ತಿಕ ದತ್ತಾಂಶ ಸಿಗುತ್ತದೆ?
ಅಪ್ಲಿಕೇಶನ್‌ನಲ್ಲಿ ಸ್ವ-ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳುವುದು ಕಡ್ಡಾಯವೇ?
ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಬ್ಲೂಟೂಥ್ ಸ್ವಯಂಚಾಲಿತವಾಗಿ ಸಕ್ರಿಯವಾಗುತ್ತದೆಯೇ?
ಕೇಂದ್ರ ಸರ್ಕಾರದ ಮೇ 11ರ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಪ್ರತಿಕ್ರಿಯೆ ದತ್ತಾಂಶ (ರೆಸ್ಪಾನ್ಸ್ ಡೇಟಾ) ಪರಿಕಲ್ಪನೆ ಎಂದರೆ ಏನು?
ಯಾವ ಸಂದರ್ಭದಲ್ಲಿ ವ್ಯಕ್ತಿಯ ಸ್ಟೇಟಸ್ ಕೆಂಪು ಅಥವಾ ಕಿತ್ತಳೆಗೆ ತಿರುಗುತ್ತದೆ?
ಸರ್ಕಾರಿ ಸೇವೆಗಳನ್ನು ಪಡೆಯಲು ಕಡ್ಡಾಯವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಬಳಸಬೇಕು ಎಂಬ ಆದೇಶ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು. ಒಮ್ಮೆ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡ ಮೇಲೆ ವೈಯಕ್ತಿಕ ಮಾಹಿತಿ ನೀಡುವ ಮೂಲಕ ಸ್ವ-ಮೌಲ್ಯಮಾಪನ ಪರೀಕ್ಷೆ ನಡೆಸಬೇಕಿದೆ ಎಂದು ಅರ್ಜಿದಾರರ ಪರ ವಕೀಲ ಕೋಲಿನ್ ಗೋನ್ಸ್‌ಲವ್ಸ್ ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ನಿಮ್ಮ ವಾದ ಶೇ. 100 ರಷ್ಟು ತಪ್ಪು. ಸ್ವ-ಮೌಲ್ಯ ಮಾಪನ ಮಾಡುವಂತೆ ನಿಮ್ಮನ್ನು ಯಾರೂ ಒತ್ತಾಯಿಸುವುದಿಲ್ಲ. ಅದು ಸಂಪೂರ್ಣವಾಗಿ ಸ್ವಯಂ ಇಚ್ಛೆಗೆ ಸಂಬಂಧಿಸಿದ್ದಾಗಿದೆ” ಎಂದಿತು.
ಇದೇ ವೇಳೆ ಪೀಠವು, ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು ವೈಯಕ್ತಿಕ ದತ್ತಾಂಶಕ್ಕೆ ಕೈಹಾಕಲು ಸರ್ಕಾರಕ್ಕೆ ಅನುಮತಿ ನೀಡುವುದಕ್ಕೆ ಸಮವಲ್ಲ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಸ್ಪಷ್ಟಪಡಿಸಿದೆ.
ಮುಂದಿನ ಹತ್ತು ದಿನಗಳ ಒಳಗಾಗಿ ಮೆಮೊವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಪಕ್ಷಕಾರರಿಗೆ ಸೂಚಿಸಿರುವ ಪೀಠವು ನವೆಂಬರ್ 26ಕ್ಕೆ ವಿಚಾರಣೆ ಮುಂದೂಡಿದೆ. ಅಂದೇ ಮಧ್ಯಂತರ ಪರಿಹಾರದ ಮನವಿಯನ್ನು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.