ವಾಟ್ಸಾಪ್ ಭಾರತದಲ್ಲಿ ಬಳಕೆದಾರರಿಗೆ ಸೇವೆಗಳನ್ನು ನೀಡುವುದರಿಂದ, ಅದರ ವಿರುದ್ಧ ಗ್ರಾಹಕರು ನೀಡುವ ದೂರನ್ನು ದೇಶದ ಗ್ರಾಹಕ ನ್ಯಾಯಾಲಯಗಳು ಸ್ವೀಕರಿಸಬಹುದು ಎಂದು ಉತ್ತರ ಪ್ರದೇಶ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಈಚೆಗೆ ತೀರ್ಪು ನೀಡಿದೆ.
ವಾಟ್ಸಾಪ್ ವಿರುದ್ಧ ಗ್ರಾಹಕರು ಸಲ್ಲಿಸಿದ್ದ ದೂರು ಸಮರ್ಥನೀಯವಲ್ಲ (ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಲು ಬಾಧ್ಯವಲ್ಲ) ಎಂದು ಅದನ್ನು ವಜಾಗೊಳಿಸಿ ಜಿಲ್ಲಾ ಗ್ರಾಹಕ ವೇದಿಕೆ ನೀಡಿದ್ದ ತೀರ್ಪನ್ನು ರದ್ದುಗೊಳಿಸುವಾಗ ರಾಜ್ಯ ಆಯೋಗ ಈ ಅಭಿಪ್ರಾಯ ವ್ಯಕ್ತಪಡಿಸಿತು.
ರಾಜ್ಯ ಆಯೋಗದ ಅಧ್ಯಕ್ಷ ಸುಶೀಲ್ ಕುಮಾರ್ ಮತ್ತು ಸದಸ್ಯೆ ಸುಧಾ ಉಪಾಧ್ಯಾಯ ಅವರನ್ನೊಳಗೊಂಡ ಪೀಠ ಜಿಲ್ಲಾ ಆಯೋಗದ ಅಭಿಪ್ರಾಯವನ್ನು ಒಪ್ಪಲಿಲ್ಲ.
"ವಾಟ್ಸಾಪ್ ಒಂದು ಸೇವಾ ಪೂರೈಕೆದಾರ ಕಂಪನಿ. ಈ ಕಂಪನಿ ಭಾರತದಲ್ಲಿಯೂ ಸೇವೆ ಒದಗಿಸುವುದರಿಂದ ಈ ಕಂಪನಿಯನ್ನು ವಿದೇಶಿ ಕಂಪನಿ ಅದರ ವಿರುದ್ಧದ ಗ್ರಾಹಕ ದೂರನ್ನು ಸ್ವೀಕರಿಸುವುದಿಲ್ಲ ಎಂದು ಹೇಳುವಂತಿಲ್ಲ. ಹೀಗಾಗಿ ವಾಟ್ಸಾಪ್ ಬಳಸುವ ವ್ಯಕ್ತಿ ವಾಟ್ಸಾಪ್ ಗ್ರಾಹಕರಲ್ಲ ಮತ್ತು ವಾಟ್ಸಾಪ್ ವಿರುದ್ಧ ಗ್ರಾಹಕ ನೀಡುವ ದೂರನ್ನು ನಿರ್ವಹಿಸಲಾಗುವುದಿಲ್ಲ ಎಂಬ ಜಿಲ್ಲಾ ಗ್ರಾಹಕ ಆಯೋಗದ ತೀರ್ಮಾನ ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ, ಜಿಲ್ಲಾ ಗ್ರಾಹಕ ಆಯೋಗ ಹೊರಡಿಸಿದ ಆದೇಶ ರದ್ದುಗೊಳಿಸಲಾಗುವುದು” ಎಂದು ನ್ಯಾಯಾಲಯ ವಿವರಿಸಿತು.
ಲಖನೌ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಆದೇಶಗಳನ್ನು ಪ್ರಶ್ನಿಸಿ ಮಾಜಿ ಐಪಿಎಸ್ ಅಧಿಕಾರಿ ಮತ್ತು ಆಜಾದ್ ಅಧಿಕಾರ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಅಮಿತಾಭ್ ಠಾಕೂರ್ ಎರಡು ಮೇಲ್ಮನವಿ ಸಲ್ಲಿಸಿದ್ದರು. ಸುಮಾರು ಆರು ಗಂಟೆಗಳ ಕಾಲ ವಾಟ್ಸಾಪ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಪರಿಹಾರ ನೀಡುವಂತೆ ಠಾಕೂರ್ ಮನವಿ ಮಾಡಿದ್ದರು. ವಾಟ್ಸಾಪ್ ಸೇವೆಗಳಲ್ಲಿನ ವ್ಯತ್ಯಯ ತನ್ನ ಕೆಲಸದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು.
ವಾದ ಆಲಿಸಿದ ರಾಜ್ಯ ವೇದಿಕೆ ಗ್ರಾಹಕ ಸಂರಕ್ಷಣಾ ಕಾಯಿದೆ- 2019ರ ಅಡಿಯಲ್ಲಿ ತಿಳಿಸಿರುವಂತೆ, ಠಾಕೂರ್ ಅವರ ದೂರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ವಾಟ್ಸಾಪ್‌ನಿಂದ ಪರಿಹಾರ ಕೋರಿ ಅವರು ಸಲ್ಲಿಸಿದ ಅರ್ಜಿಯನ್ನು 90 ದಿನದೊಳಗೆ ಇತ್ಯರ್ಥಪಡಿಸಬೇಕು ಎಂದು ನ್ಯಾಯಾಲಯ ಜಿಲ್ಲಾ ಗ್ರಾಹಕ ವೇದಿಕೆಗೆ ಆದೇಶಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]