Supreme Court, Refugees 
ಸುದ್ದಿಗಳು

ಆಫ್ಘನ್‌, ಬಾಂಗ್ಲಾ, ಪಾಕ್‌ ಮುಸ್ಲಿಮೇತರರಿಗೆ ಪೌರತ್ವ: ಗೃಹ ಇಲಾಖೆ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಐಯುಎಂಎಲ್‌ ಮನವಿ

ಒಂದು ನಿರ್ದಿಷ್ಟ ವರ್ಗದ ಜನರನ್ನು ತಮ್ಮ ಧರ್ಮದ ಕಾರಣದಿಂದ ಅಸಮಾನವಾಗಿ ಪರಿಗಣಿಸುವುದರಿಂದ ಕೇಂದ್ರ ಗೃಹ ಇಲಾಖೆಯ ಆದೇಶವು ಸಂವಿಧಾನದ 14ನೇ ವಿಧಿಯಡಿ ಊರ್ಜಿತವಾಗುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Bar & Bench

ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದು ಭಾರತದಲ್ಲಿ ನೆಲೆಸಿರುವ ಮುಸ್ಲಿಮೇತರ ಸಮುದಾಯದವರಿಗೆ ವಿವಿಧ ರಾಜ್ಯಗಳ 13 ಜಿಲ್ಲೆಗಳಲ್ಲಿ ಪೌರತ್ವ ಕಲ್ಪಿಸುವಂತೆ ಮೇ 28ರಂದು ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಆದೇಶಕ್ಕೆ ತಡೆ ನೀಡುವಂತೆ ಭಾರತೀಯ ಮುಸ್ಲಿಮ್‌ ಲೀಗ್‌ ಒಕ್ಕೂಟ (ಐಯುಎಂಎಲ್‌) ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.

ಪೌರತ್ವ ಕಾಯಿದೆ 1955ರ ಸೆಕ್ಷನ್‌ಗಳಾದ 5 ಮತ್ತು 6ರ ಅಡಿ ಪೌರತ್ವ ಕೋರಿ ಸಲ್ಲಿಸುವ ಮನವಿಗಳನ್ನು ಪರಿಗಣಿಸಲು 16 ಜಿಲ್ಲಾ ದಂಡಾಧಿಕಾರಿಗಳಿಗೆ 2016ರಲ್ಲಿ ಅಧಿಕಾರ ನೀಡಲಾಗಿತ್ತು. ಈಗ ಗುಜರಾತ್‌, ರಾಜಸ್ಥಾನ, ಛತ್ತೀಸಗಢ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲಾ ದಂಡಾಧಿಕಾರಿಗಳಿಗೆ ಅಧಿಕಾರ ನೀಡುವ ಮೂಲಕ ಈ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

“ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಕೆಳಗೆ ಉಲ್ಲೇಖಿಸಲಾಗಿರುವ ರಾಜ್ಯಗಳ ಜಿಲ್ಲೆಗಳಲ್ಲಿ ನೆಲೆಸಿದ್ದರೆ ಅವರಿಗೆ ಪೌರತ್ವ ಕಾಯಿದೆ 1955 ಅಡಿ ಅಧಿಕಾರ ಚಲಾಯಿಸಿ ಪೌರತ್ವ ಕಾಯಿದೆ ಸೆಕ್ಷನ್‌ 5ರ ಅಡಿ ಭಾರತದ ಪೌರ ಎಂದು ನೋಂದಣಿ ಮಾಡಲು ಅಧಿಕಾರ ಕಲ್ಪಿಸಲಾಗಿದೆ ಅಥವಾ ಸೆಕ್ಷನ್‌ 6ರ ಅಡಿ ಸ್ವಾಭಾವಿಕವಾಗಿ ಅವರು ಭಾರತದ ಪ್ರಜೆ ಎಂದು ಘೋಷಿಸಲ್ಪಡುವ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ ನಿರ್ದೇಶಿಸಿದೆ” ಎಂದು ಕೇಂದ್ರ ಗೃಹ ಇಲಾಖೆಯ ಮೇ 28ರ ಆದೇಶದಲ್ಲಿ ತಿಳಿಸಿದೆ.

ವಿಚಾರಣೆಗೆ ಬಾಕಿ ಇರುವ ಸಿಎಎ ಪ್ರಕರಣಕ್ಕೆ ಸಂಬಂಧಿಸಿದಂತೆ ಐಯುಎಂಎಲ್‌ ಅರ್ಜಿ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಪೌರತ್ವ ಕಾಯಿದೆಯ ನಿಬಂಧನೆಗಳ ಅಡಿ ಧರ್ಮದ ಆಧಾರದ ಮೇಲೆ ಅರ್ಜಿದಾರರ ವರ್ಗೀಕರಣಕ್ಕೆ ಅನುಮತಿಸಲಾಗದು ಎಂದು ಮನವಿದಾರರು ವಾದಿಸಿದ್ದಾರೆ.

ಪೌರತ್ವ ಕಾಯಿದೆಯ ಸೆಕ್ಷನ್‌ 5 (1)(ಎ)-(ಜಿ) ಪ್ರಕಾರ ನೋಂದಣಿಯ ಮೂಲಕ ವ್ಯಕ್ತಿಯು ಪೌರತ್ವ ಪಡೆಯಲು ಅರ್ಹತೆ ಹೊಂದಿದ್ದರೆ ಕಾಯಿದೆಯ ಸೆಕ್ಷನ್‌ 6ರ ಪ್ರಕಾರ ಸ್ವಾಭಾವಿಕವಾಗಿ ಯಾವುದೇ ವ್ಯಕ್ತಿ (ಕಾನೂನುಬಾಹಿರ ವಲಸಿಗನಾಗಿರಬಾರದು) ಪೌರತ್ವ ಪಡೆಯಲು ಮನವಿ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ. “ಹೀಗಿರುವಾಗ ಎರಡು ನಿಬಂಧನೆಗಳ ಅನ್ವಯತೆಯನ್ನು ಕುಗ್ಗಿಸಲು ಪ್ರತಿವಾದಿ ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಕಾನೂನುಬಾಹಿರವಾಗಿದೆ” ಎಂದು ಐಯುಎಂಎಲ್‌ ಮನವಿಯಲ್ಲಿ ಉಲ್ಲೇಖಿಸಿದೆ.

ಒಂದು ನಿರ್ದಿಷ್ಟ ವರ್ಗದ ಜನರನ್ನು ತಮ್ಮ ಧರ್ಮದ ಕಾರಣದಿಂದ ಅಸಮಾನವಾಗಿ ಪರಿಗಣಿಸುವುದರಿಂದ ಕೇಂದ್ರ ಗೃಹ ಇಲಾಖೆಯ ಆದೇಶವು ಸಂವಿಧಾನದ 14ನೇ ವಿಧಿಯಡಿ ಊರ್ಜಿತವಾಗುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ನಿರ್ದಿಷ್ಟ ವರ್ಗದ ಅಂದರೆ ತಮ್ಮ ಧರ್ಮದ ಅಧಾರದಲ್ಲಿ ನೋಂದಣಿ ಮತ್ತು ಸ್ವಾಭಾವಿಕವಾಗಿ ಪೌರತ್ವ ಪಡೆಯಲು ಅರ್ಹತೆ ಗಿಟ್ಟಿಸಲು ಜನರಿಗೆ ಅವಕಾಶ ಮಾಡಿಕೊಡುವುದರಿಂದ ಕೇಂದ್ರ ಗೃಹ ಇಲಾಖೆಯ ಆದೇಶವು ಸಂವಿಧಾನದ 14ನೇ ವಿಧಿಯ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಸಿಎಎ 2019ಕ್ಕೆ (ಪೌರತ್ವ ತಿದ್ದುಪಡಿ ಕಾಯಿದೆಗೆ) ತಡೆ ನೀಡುವ ಅಗತ್ಯವಿಲ್ಲ. ಏಕೆಂದರೆ ಇನ್ನಷ್ಟೇ ತಿದ್ದುಪಡಿ ಕಾಯಿದೆ ಅಡಿ ನಿಯಮಗಳನ್ನು ರೂಪಿಸಿಬೇಕಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಭರವಸೆ ನೀಡಿತ್ತು ಎಂದು ಐಯುಎಂಎಲ್‌ ನೆನೆಪಿಸಿದೆ.

“ ತಿದ್ದುಪಡಿ ಕಾಯಿದೆ, ವಿದೇಶಿ ಆದೇಶ 1948ರ ಆದೇಶ 3ಎ, ಪಾಸ್‌ಪೋರ್ಟ್‌ (ಭಾರತ ಪ್ರವೇಶ) ನಿಯಮಗಳು 1950ರ ನಿಯಮ 4(ಎಚ್‌ಎ) ಸ್ಪಷ್ಟಪಡಿಸುವುದೇನೆಂದರೆ ಈ ಮೂರು ಕಾನೂನುಗಳ ಹಿಂದಿನ ಉದ್ದೇಶ ಒಂದೇ ಆಗಿದೆ. ಯಾವುದನ್ನು ನೇರವಾಗಿ ಮಾಡಲಾಗುವುದಿಲ್ಲವೋ ಅದನ್ನು ಪರೋಕ್ಷವಾಗಿ ಸಹ ಮಾಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹಲವು ಆದೇಶಗಳಲ್ಲಿ ಹೇಳಿದೆ. ಹೀಗಾಗಿ, 28.5.2021ರಂದು ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು” ಎಂದು ಕೋರಲಾಗಿದೆ.

ಆಕ್ಷೇಪಿಸಲಾಗಿರುವ ಆದೇಶವನ್ನು ಆಧರಿಸಿ ಪೌರತ್ವ ಕಲ್ಪಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ಒಂದು ವೇಳೆ ಸುಪ್ರೀಂ ಕೋರ್ಟ್‌ ಸಿಎಎ ಅನ್ನು ವಜಾಗೊಳಿಸಿದರೆ “ಈಗಿನ ಆದೇಶದ ಅನ್ವಯ ನೀಡಲಾದ ಪೌರತ್ವವನ್ನು ಹಿಂಪಡೆಯುವುದು ಅಸಾಧ್ಯವಾದ ಕೆಲಸವಾಗಲಿದ್ದು, ಅದನ್ನು ಜಾರಿಗೊಳಿಸುವುದು ಕಷ್ಟವಾಗಲಿದೆ” ಎಂದು ಐಯುಎಂಎಲ್‌ ವಾದಿಸಿದೆ.

“ತಿದ್ದುಪಡಿ ಕಾಯಿದೆಯು ನ್ಯಾಯಾಲಯದ ನಿರ್ಣಯಕ್ಕೆ ಒಳಪಟ್ಟಿದ್ದು, ಅದನ್ನು ನ್ಯಾಯಾಲಯ ನಿರ್ಧರಿಸುವವರೆಗೆ ನ್ಯಾಯದಾನದ ದೃಷ್ಟಿಯಿಂದ ಈಗಿನ ಆದೇಶದ ಪ್ರಕ್ರಿಯೆಯೂ ಒಳಗೊಂಡಂತೆ ತಿದ್ದುಪಡಿ ಕಾಯಿದೆಯ ಅಡಿ ಅಕ್ರಮ ವಲಸಿಗರಿಗೆ ಪೌರತ್ವ ಕಲ್ಪಿಸಬಾರದು” ಎಂದು ಮನವಿಯಲ್ಲಿ ಕೋರಲಾಗಿದೆ.

ಆಕ್ಷೇಪಕ್ಕೆ ಒಳಪಟ್ಟಿರುವ ಕೇಂದ್ರದ ಗೃಹ ಇಲಾಖೆಯ ಆದೇಶವು ಪಂಜಾಬ್‌ ಮತ್ತು ಹರಿಯಾಣದ ಗೃಹ ಕಾರ್ಯದರ್ಶಿಗಳಿಗೆ ಪೌರತ್ವ ಕಲ್ಪಿಸುವ ಮನವಿಗಳನ್ನು ಪರಿಗಣಿಸುವುದಕ್ಕೂ ಅವಕಾಶ ಮಾಡಿಕೊಟ್ಟಿದೆ.

2019ರಲ್ಲಿ ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೊಳಿಸಲಾಗಿದ್ದು, 2014ರ ಡಿಸೆಂಬರ್ 31ರ ಒಳಗೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಮೇತರರಾದ ಹಿಂದೂ, ಸಿಖ್‌, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್‌ ಸಮುದಾಯವರಿಗೆ ಪೌರತ್ವ ಕಲ್ಪಿಸುವ ಅವಕಾಶ ಮಾಡಿಕೊಡಲಾಗಿದೆ.