ವಿದ್ಯಾರ್ಥಿನಿಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಕಾಲೇಜು ಅಧಿಕಾರಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವ ವೇಳೆ ಮಣಿಪುರ ಹೈಕೋರ್ಟ್, ʼಅತ್ಯಾಚಾರ ಕುರಿತಂತೆ ಭಾರತೀಯ ಮಹಿಳೆಯರು ಸಾಮಾನ್ಯವಾಗಿ ಕಥೆ ಕಟ್ಟುವುದಿಲ್ಲ. ಬ್ಲಾಕ್‌ಮೇಲ್ ಅಥವಾ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅತ್ಯಾಚಾರದ ಆರೋಪ ಮಾಡುವುದಿಲ್ಲʼ ಎಂದು ಅಭಿಪ್ರಾಯಪಟ್ಟಿದೆ [ಯುಮ್ನಮ್ ಸುರ್ಜಿತ್ ಕುಮಾರ್ ಸಿಂಗ್ ಮತ್ತು ಪ್ರಭಾರ ಅಧಿಕಾರಿ ಇನ್ನಿತರರ ನಡುವಣ ಪ್ರಕರಣ].
ಜಿಗುಪ್ಸೆ, ಮುಜುಗರ ಮತ್ತು ಅವಮಾನದ ಭಾವನೆಗಳನ್ನು ಹಾಗೂ ಲೈಂಗಿಕ ದೌರ್ಜನ್ಯದಿಂದ ಸಂತ್ರಸ್ತರಾದ ವ್ಯಕ್ತಿಯೊಬ್ಬರು ಜೀವಮಾನವಿಡೀ ಅನುಭವಿಸುವ ಆಘಾತ ಗಮನಿಸಿದರೆ, ಅವರು ಅತ್ಯಾಚಾರ ಪ್ರಕರಣದಲ್ಲಿ ಯಾರನ್ನಾದರೂ ಸುಳ್ಳೇ ಸಿಕ್ಕಿಸುವ ಸಾಧ್ಯತೆ ಇಲ್ಲ ಎಂದು ನ್ಯಾ. ಮುರಳೀಧರನ್ ತಿಳಿಸಿದರು.
“ಭಾರತೀಯ ಸಮಾಜದಲ್ಲಿ ಅತ್ಯಾಚಾರ ಸಂತ್ರಸ್ತರಿಗೆ ಅಂಟಿಕೊಳ್ಳುವ ಕಳಂಕದ ಕಾರಣಕ್ಕೆ ಸಾಮಾನ್ಯವಾಗಿ ಸುಳ್ಳು ಆರೋಪ ಮಾಡುವುದಿಲ್ಲ. ಭಾರತೀಯ ಮಹಿಳೆಯರು ʼಅತ್ಯಾಚಾರ ಕುರಿತಂತೆ ಸಾಮಾನ್ಯವಾಗಿ ಕಥೆ ಕಟ್ಟುವುದಿಲ್ಲ. ಬ್ಲಾಕ್‌ಮೇಲ್ ಅಥವಾ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅತ್ಯಾಚಾರದ ಆರೋಪ ಮಾಡುವುದಿಲ್ಲ” ಎಂದು ನ್ಯಾಯಾಲಯ ನುಡಿಯಿತು.
ಸಂತ್ರಸ್ತೆಯನ್ನು ಪಿಕ್‌ನಿಕ್‌ಗೆಂದು ಕರೆದುಕೊಂಡು ಹೋಗಿದ್ದ ಶಿಕ್ಷಕರಲ್ಲಿ ಇಬ್ಬರು ವಾಪಸ್ ಬರುವಾಗ ಆಕೆಗೆ ಅಮಲು ಬರುವ ಪದಾರ್ಥವನ್ನು ನೀಡಿದ್ದರು. ಮೂರನೇ ಆರೋಪಿ ಕಾರು ಚಲಾಯಿಸಿದ್ದ. ನಂತರ ಆಕೆಯನ್ನು ಪ್ರಮುಖ ಆರೋಪಿ, ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರ ಮನೆಗೆ ಡ್ರಾಪ್ ಮಾಡಿದರು. ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ಮೇಲೆ ಅತ್ಯಾಚಾರ ಮಾಡಲಾಯಿತು ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.
ಆದರೆ ಪ್ರಧಾನ ಆರೋಪಿ ಮತ್ತು ಸಂತ್ರಸ್ತೆ ಐದು ವರ್ಷಗಳಿಂದ ಪ್ರಣಯ ಸಂಬಂಧದಲ್ಲಿದ್ದು ಮದುವೆಯಾಗಲು ಪಿಕ್‌ನಿಕ್ ದಿನದಂದು ಓಡಿ ಹೋಗಲು ನಿರ್ಧರಿಸಿದ್ದರು. ಮರುದಿನ ಮದುವೆ ಮಾತುಕತೆಗೆಂದು ಸಂತ್ರಸ್ತೆಯ ಮನೆಗೆ ತೆರಳಿದ್ದಾಗ ಸಂತ್ರಸ್ತೆಯ ಸಹೋದರಿ ಇದ್ದಕ್ಕಿದ್ದಂತೆ ಆಕೆಯನ್ನು ಥಳಿಸಿ ಸುಳ್ಳು ಪ್ರಕರಣ ದಾಖಲಿಸುವಂತೆ ಆಕೆಗೆ ಹೇಳಿದ್ದಳು ಹೀಗಾಗಿ ನಿರೀಕ್ಷಣಾ ಜಾಮೀನು ಕೋರಬೇಕಾಯಿತು ಎಂದು ಅರ್ಜಿದಾರರು ವಾದಿಸಿದ್ದರು.
ಪ್ರಧಾನ ಆರೋಪಿ ತನ್ನ ಅಧೀನ ಸಿಬ್ಬಂದಿಯೊಂದಿಗೆ ಸಂಚು ರೂಪಿಸಿ, ಸಂತ್ರಸ್ತೆಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬುದು ದಾಖಲೆಗಳ ಮೂಲಕ ಮೇಲ್ನೋಟಕ್ಕೆ ಸಾಬೀತಾಗಿದೆ. ಅರ್ಜಿದಾರ ಸುರ್ಜಿತ್‌ಕುಮಾರ್ ತನ್ನ ಸ್ವಂತ ವಿದ್ಯಾರ್ಥಿನಿಯ ವಿರುದ್ಧ ಘೋರ ಅಪರಾಧವನ್ನು ಎಸಗಿದ್ದಾನೆ. ಇದು ವಿದ್ಯಾರ್ಥಿ- ಶಿಕ್ಷಕರ ನಡುವಿನ ಬಾಂಧವ್ಯಕ್ಕೆ ಕಳಂಕ. ಇದಕ್ಕೆ ಯಾವುದೇ ವಿನಾಯಿತಿ ನೀಡಬಾರದು. ಆರೋಪಿಯು 'ಪರಾರಿಯಾಗಿರುವಾಗ' ಅಥವಾ 'ಘೋಷಿತ ಅಪರಾಧಿ' ಆಗಿದ್ದರೆ, ನಿರೀಕ್ಷಣಾ ಜಾಮೀನು ನೀಡುವ ಪ್ರಶ್ನೆಯೇ ಇಲ್ಲ ಎಂದು ಲವೇಶ್ ಮತ್ತು ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು.
ಪ್ರಕರಣ ಸುಳ್ಳು ಎಂದು ನ್ಯಾಯಾಲಯಕ್ಕೆ ಮನದಟ್ಟಾದರೆ ಮಾತ್ರ ನಿರೀಕ್ಷಣಾ ಜಾಮೀನು ನೀಡಬಹುದು. ಆರೋಪಿಗಳು ಇದೇ ರೀತಿಯ ಅಥವಾ ಇತರ ಅಪರಾಧಗಳನ್ನು ಪುನರಾವರ್ತಿಸುವ ಸಾಧ್ಯತೆ ಇದ್ದು ಜಾಮೀನು ನೀಡಿದರೆ ಸಾರ್ವಜನಿಕರ ಮೇಲೆ ಪರಿಣಾಮ ಬೀರಿ ಬಂಧನದಿಂದ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತು.