ಅತ್ಯಾಚಾರಕ್ಕೀಡಾದ ಸಂತ್ರಸ್ತೆಯನ್ನು ಕೊಲ್ಲದೆ ಜೀವಂತ ಉಳಿಸಿ ದಯೆ ತೋರಿದ್ದಾನೆ ಎಂಬ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟಿನ ಇಂದೋರ್ ಪೀಠವು ಇತ್ತೀಚೆಗೆ ಅತ್ಯಾಚಾರ ಅಪರಾಧಿಯೋರ್ವನಿಗೆ ವಿಧಿಸಲಾಗಿದ್ದ ಆಜೀವ ಪರ್ಯಂತ ಶಿಕ್ಷೆಯನ್ನು 20 ವರ್ಷಗಳ ಕಠಿಣ ಜೈಲು ಶಿಕ್ಷೆಯಾಗಿ ಮಾರ್ಪಡಿಸಿದೆ [ರಾಮು ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].
ಮೇಲ್ಮನವಿಯನ್ನು ಭಾಗಶಃ ಅನುಮತಿಸಿದ ನ್ಯಾಯಮೂರ್ತಿಗಳಾದ ಸುಬೋಧ್ ಅಭ್ಯಂಕರ್ ಮತ್ತು ಸತ್ಯೇಂದ್ರ ಕುಮಾರ್ ಸಿಂಗ್ ಅವರಿದ್ದ ಪೀಠವು ಮಹಿಳೆಯರ ಘನತೆಯ ಬಗ್ಗೆ ಗೌರವವಿಲ್ಲದ ಮತ್ತು 4 ವರ್ಷ ವಯಸ್ಸಿನ ಹೆಣ್ಣುಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗುವ ಮನಸ್ಥಿತಿಯನ್ನು ಅಪರಾಧಿಯು ಹೊಂದಿರುವುದನ್ನು ಪರಿಗಣಿಸಿದಾಗ ಆತನ ಶಿಕ್ಷೆಯನ್ನು ಇದಾಗಲೇ ಆತ ಅನುಭವಿಸಿರುವ ಶಿಕ್ಷೆಗೆ ಮಿತಿಗೊಳಿಸಲು ಈ ಪ್ರಕರಣ ಅರ್ಹವಲ್ಲ. ಆದಾಗ್ಯೂ ಸಂತ್ರಸ್ತೆಯನ್ನು ಜೀವಂತ ಬಿಟ್ಟು ದಯೆ ತೋರಿದ ಕಾರಣಕ್ಕೆ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸಬಹುದು ಎಂದಿತು.
"ಕ್ರಿಮಿನಲ್ ಮೇಲ್ಮನವಿಗೆ ಭಾಗಶಃ ಅನುಮತಿ ನೀಡಲಾಗಿದ್ದು ಮೇಲ್ಮನವಿದಾರರು ಕಾನೂನಿನ ಪ್ರಕಾರ 20 ವರ್ಷಗಳ ಜೈಲುವಾಸ ಅನುಭವಿಸಬೇಕು" ಎಂದು ನ್ಯಾಯಾಲಯ ಹೇಳಿತು.
ಹನ್ನೆರಡು ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ತನ್ನನ್ನು ದೋಷಿ ಎಂದು ಇಂದೋರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿದಾರ ರಾಮು ಅಲಿಯಾಸ್ ರಾಮ್‌ಸಿಂಗ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.