Justice Sanjay Karol
Justice Sanjay Karol 
ಸುದ್ದಿಗಳು

ಭಾರತೀಯರಿಗೆ ನ್ಯಾಯಾಂಗದಲ್ಲಿ ಅಪಾರ ನಂಬಿಕೆ ಇದೆ. ಆದರೆ ನ್ಯಾಯಾಂಗ ವ್ಯವಸ್ಥೆ ನಗರ ಕೇಂದ್ರಿತವಾಗಿರಬಾರದು: ನ್ಯಾ. ಕರೋಲ್

Bar & Bench

ಭಾರತೀಯರಿಗೆ ನ್ಯಾಯಾಂಗದಲ್ಲಿ ಅಪಾರ ನಂಬಿಕೆ ಇದೆ. ಆದರೆ ನ್ಯಾಯದಾನವನ್ನು ಕಡಿಮೆ ನಗರ ಕೇಂದ್ರಿತವಾಗಿಸುವ ಅಗತ್ಯವೂ ಇದೆ ಎಂದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ಶನಿವಾರ ಹೇಳಿದರು.

ಅಮೆರಿಕ ವಕೀಲರ ಸಂಘದ (ಎಬಿಎ) ಅಂತರರಾಷ್ಟ್ರೀಯ ಕಾನೂನು ವಿಭಾಗದ ವತಿಯಿಂದ ನವದೆಹಲಿಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ  2023ನೇ ಸಾಲಿನ ಎಬಿಎ ಇಂಡಿಯಾ ಸಮಾವೇಶದ ಎರಡನೇ ದಿನವಾದ ಶನಿವಾರ ʼಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ನ್ಯಾಯಾಂಗ ಮತ್ತು ನ್ಯಾಯಿಕ ಆಡಳಿತದ ಪಾತ್ರʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಬಹುಪಾಲು ಜನರು ವಿಶೇಷವಾಗಿ ಮೂಲಭೂತ ಅವಶ್ಯಕತೆಗಳ ಕೊರತೆ ಎದುರಿಸುತ್ತಿರುವವರ ವಾಸ್ತವತೆಯನ್ನು ಅರಿಯುವುದು ಮುಖ್ಯವಾಗಿದ್ದು ದೆಹಲಿಯಲ್ಲಿ ಕುಳಿತಿರುವಾಗ ಈ ಕಠೋರ ಸತ್ಯ ಸುಲಭವಾಗಿ ನಿರ್ಲಕ್ಷ್ಯಕ್ಕೆ ತುತ್ತಾಗುತ್ತದೆ ಎಂದು ಅವರು ಹೇಳಿದರು.

"ಜನರು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅಗಾಧ ನಂಬಿಕೆ ಇರಿಸಿಕೊಂಡಿದ್ದಾರೆ. ಬಹುಪಾಲು ಜನ ಬಡವರೇ ಆಗಿದ್ದಾರೆ ಎಂಬುದನ್ನೂ ನಾವು ಗಮನಿಸಬೇಕಾಗುತ್ತದೆ. ದೆಹಲಿಯಲ್ಲಿ ಇಂತಹ ಉತ್ತಮ ವಾತಾವರಣದಲ್ಲಿದ್ದು, ನಾವು ನೆಲದ ಕಠೋರ ವಾಸ್ತವತೆಯನ್ನು ಅರಿಯಲು ಸಾಧ್ಯವಿಲ್ಲ. ಅಂತಹ ಜನರಿಗೆ ನ್ಯಾಯಿಕ ಆಡಳಿತ ಎಂಬುದು ಮೂಲಭೂತ ಅವಶ್ಯಕತೆಯೇ ಆಗಿರುತ್ತದೆ” ಎಂದು ನುಡಿದರು.

ಆದ್ದರಿಂದ, ಭಾರತದ ಬಹುಸಂಖ್ಯಾತ ಜನ ಸಮುದಾಯ  ಎದುರಿಸುತ್ತಿರುವ ಸವಾಲುಗಳ ವಾಸ್ತವಾಂಶ ಅರಿಯಲು ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಬೇಲಾ ಎಂ ತ್ರಿವೇದಿ, ಎಸ್ ರವೀಂದ್ರ ಭಟ್ ಹಾಗೂ ಒಪಿ ಜಿಂದಾಲ್ ಗ್ಲೋಬಲ್ ವಿವಿಯ ಉಪಕುಲಪತಿ ಪ್ರೊ ಸಿ ರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.