ಕರ್ನಾಟಕದ ಶೇ 68ರಷ್ಟು ಹಾಲು ಕಲಬೆರಕೆ ಎಂದಿದ್ದ ಅಕ್ಷಯಕಲ್ಪ ಜಾಹೀರಾತಿಗೆ ಏಕಪಕ್ಷೀಯ ಮಧ್ಯಂತರ ತಡೆ (ಎಕ್ಸ್‌ಪಾರ್ಟೆ ಆಡ್ ಇಂಟೆರಿಮ್ ಇಂಜಂಕ್ಷನ್) ನೀಡಿ ಬೆಂಗಳೂರು ನ್ಯಾಯಾಲಯವೊಂದು ಇತ್ತೀಚೆಗೆ ಆದೇಶ ಹೊರಡಿಸಿದೆ.
ತಿಪಟೂರಿನ ಸಾವಯವ ಹಾಲು ಉತ್ಪನ್ನ ಕಂಪೆನಿಯಾದ ಅಕ್ಷಯಕಲ್ಪ ಫಾರ್ಮಸ್ ಅಂಡ್ ಫುಡ್ಸ್ ಪ್ರೈ ಲಿಮಿಟೆಡ್‌ಗೆ ಸಂಬಂಧಪಟ್ಟವರು ನ್ಯಾಯಾಲಯಕ್ಕೆ ಹಾಜರಾಗುವವರೆಗೆ ಕರ್ನಾಟಕ ಸಹಕಾರ ಹಾಲು ಉತ್ಪನ್ನ ಒಕ್ಕೂಟ (ಕೆಎಂಎಫ್) ಆಕ್ಷೇಪಿಸಿರುವ ಜಾಹೀರಾತುಗಳನ್ನು ಅಕ್ಷಯಕಲ್ಪ ಅಥವಾ ಆ ಕಂಪೆನಿ ಮೂಲಕ ಹಕ್ಕು ಚಲಾಯಿಸುವವರು ಪ್ರಸಾರ ಮಾಡುವಂತಿಲ್ಲ ಎಂದು ಬೆಂಗಳೂರಿನ ಸಿಸಿಎಚ್ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ವಾಣಿಜ್ಯ ನ್ಯಾಯಾಲಯ ಆದೇಶಿಸಿದೆ.
ಪ್ರಸ್ತುತ ತುಮಕೂರು ಜಿಲ್ಲೆಯ ತಿಪಟೂರು, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ಗಳಿಂದ ಅಕ್ಷಯಕಲ್ಪ ಕಂಪೆನಿ ಕಾರ್ಯನಿರ್ವಹಿಸುತ್ತಿದೆ. ಅದು ಸಾವಯವ ಹಾಲು ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದೆ. ಕಂಪೆನಿ ಕಳೆದ ಜನವರಿಯಲ್ಲಿ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿ ದೇಶದ ಶೇ 68ರಷ್ಟು ಹಾಲು ಕಲಬೆರಕೆ ಎಂದು ಘೋಷಿಸಿತ್ತು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದ ಕೆಎಂಎಫ್ ತಾನು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಹಾಲು ಮಾರಾಟದಲ್ಲಿ ಶೇ 80ರಷ್ಟು ಪಾಲು ಹೊಂದಿರುವುದಾಗಿ ತಿಳಿಸಿತ್ತು. ಅಲ್ಲದೆ 6658 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುವ ತಾನು 1,947 ಕೋಟಿ ರೂಪಾಯಿ ಮೊತ್ತವನ್ನು ತನ್ನ ಉತ್ಪನ್ನಗಳ ಜಾಹೀರಾತಿಗೆ ವಿನಿಯೋಗಿಸುತ್ತೇನೆ. ಹೀಗಾಗಿ ದೋಷಯುಕ್ತ ಜಾಹೀರಾತಿನಿಂದ ಕರ್ನಾಟಕದ ಪ್ರಧಾನ ಹಾಲು ಉತ್ಪಾದಕನಾಗಿರುವ ತನ್ನ ಉತ್ಪನ್ನಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅರೆ ಸರ್ಕಾರಿ ಸಂಸ್ಥೆಯಾಗಿರುವ ಕೆಎಂಎಫ್ ಅಳಲು ತೋಡಿಕೊಂಡಿತ್ತು.
“ಹಾಲು ಕಲಬೆರಕೆ ಕುರಿತ ರಾಷ್ಟ್ರೀಯ ಸಮೀಕ್ಷೆ-2011ನ್ನು ಆಧರಿಸಿ ಜಾಹೀರಾತು ನೀಡಿರುವುದಾಗಿ ಅಕ್ಷಯಕಲ್ಪ ಹೇಳಿಕೊಂಡಿದೆ. ಆದರೆ ಭಾರತೀಯ ಆಹಾರ ಸುರಕ್ಷೆ ಮತ್ತು ಮಾನದಂಡ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇದೊಂದು ಕ್ಷಿಪ್ರ ಸಮೀಕ್ಷೆಯಾಗಿದೆ ಎಂದು ಸ್ಪಷ್ಟನೆ ನೀಡಿದೆ. ಓದುಗರನ್ನು ದಾರಿ ತಪ್ಪಿಸುವ ಉದ್ದೇಶದಿಂದಲೇ ದೋಷಪೂರಿತ ಜಾಹೀರಾತನ್ನು ಅಕ್ಷಯಕಲ್ಪ ಪ್ರಕಟಿಸಿದೆ. ತನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಋಣಾತ್ಮಕ ಪ್ರಚಾರ ಮಾಡುವ ಉದ್ದೇಶದಿಂದಲೇ ಸ್ಪಷ್ಟವಲ್ಲದ ಸುದ್ದಿಯನ್ನು ಅದು ಬಳಸಿಕೊಂಡಿದೆ” ಎಂಬುದು ಕೆಎಂಎಫ್ ವಾದವಾಗಿತ್ತು.
ಅಕ್ಷಯಕಲ್ಪ ಕಂಪೆನಿಯ ಸಿಇಒ ಶಶಿಕುಮಾರ್ ಅವರನ್ನು ಎರಡನೇ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಕೆಎಂಎಫ್ ಪರವಾಗಿ ಜಸ್ಟ್ ಲಾ ಸಂಸ್ಥೆಯ ವಕೀಲರು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆ ಡಿ. 3ರಂದು ನಡೆಯಲಿದೆ.