Justice BR Gavai 
ಸುದ್ದಿಗಳು

ಅನೇಕರಿಗೆ ಎರಡು ಹೊತ್ತಿನ ಊಟಕ್ಕೂ ಗತಿ ಇಲ್ಲದಿರುವಾಗ ದೇಶದ ಇಡೀ ಸಂಪತ್ತು ಕೆಲವರ ಕೈಯಲ್ಲಿದೆ: ನ್ಯಾ. ಗವಾಯಿ ಬೇಸರ

ಹುಟ್ಟಿದಾಗ ಇದ್ದ ಮಿತಿಯಲ್ಲಿಯೇ ಜನರನ್ನು ಇರಿಸಿಬಿಡುವ ಆರ್ಥಿಕ ಮತ್ತು ಸಾಮಾಜಿಕ ಚಲನಶೀಲತೆಯ ಸ್ಥಗಿತತೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದ ನ್ಯಾ. ಗವಾಯಿ ತಿಳಿಸಿದರು.

Bar & Bench

ದೇಶದ ಸಂಪೂರ್ಣ ಸಂಪತ್ತು ಕೆಲವರ ಕೈಯಲ್ಲಿ ಕೇಂದ್ರೀಕೃತವಾಗಿದ್ದು ಬಹುಪಾಲು ಜನ  ದಿನಕ್ಕೆ ಎರಡು ಹೊತ್ತಿನ ಊಟ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್ ಗವಾಯಿ ವಿಷಾದ ವ್ಯಕ್ತಪಡಿಸಿದರು.

ವರ್ಗಾವಣೀಯ ಲಿಖಿತಗಳ ಕಾಯಿದೆ (ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್‌) ಅಡಿಯ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ಭಾರತದ ಮೊದಲ ವಿಶೇಷ ಡಿಜಿಟಲ್ ನ್ಯಾಯಾಲಯ ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಾಯಿದೆ ಅಡಿಯ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ಕೇರಳದ ಆರನೇ ವಿಶೇಷ ನ್ಯಾಯಾಲಯ ಮತ್ತಿತರ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ಕೇರಳ ಹೈಕೋರ್ಟ್‌ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ನವೆಂಬರ್ 1949 ರಲ್ಲಿ ನಡೆದ ಸಂವಿಧಾನ ರಚನಾ ಸಭೆಯ ಅಂತಿಮ ಸಾಂವಿಧಾನಿಕ ಸಂವಾದದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್  ಅಂಬೇಡ್ಕರ್ ಅವರು ಆಡಿದ ಮಾತುಗಳನ್ನು ಪ್ರಸ್ತಾಪಿಸಿದ ನ್ಯಾ. ಗವಾಯಿ ಅವರು ರಾಜಕೀಯ ಸಮಾನತೆ ದೊರೆತ ಮಾತ್ರಕ್ಕೆ ಉಳಿದ ಕ್ಷೇತ್ರಗಳಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಬಗ್ಗೆ ನಾವು ಕುರುಡಾಗಬಾರದು ಎಂದರು.

ನ್ಯಾ. ಗವಾಯಿ ಅವರ ಭಾಷಣದ ಪ್ರಮುಖಾಂಶಗಳು

  • ಹುಟ್ಟಿದಾಗ ಇದ್ದ ಮಿತಿಯಲ್ಲಿಯೇ ಜನರನ್ನು ಇರಿಸಿಬಿಡುವ ಆರ್ಥಿಕ ಮತ್ತು ಸಾಮಾಜಿಕ ಚಲನಶೀಲತೆಯ ಸ್ಥಗಿತತೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

  • ಕೆಲವರ ಕೈಯಲ್ಲಷ್ಟೇ ದೇಶದ ಸಂಪೂರ್ಣ ಸಂಪತ್ತು ಇದ್ದು ಅನೇಕರಿಗೆ ಎರಡು ಹೊತ್ತಿನ ತುತ್ತು ಪಡೆಯುವುದೂ ಸಾಧ್ಯವಾಗುತ್ತಿಲ್ಲ.

  • ಈ ಅಸಮಾನತೆಗಳನ್ನು ಹೋಗಲಾಡಿಸಲು ಸಕಲ ಪ್ರಯತ್ನ ಮಾಡಬೇಕಿದ್ದು, ಹಾಗೆ ಮಾಡದಿದ್ದರೆ ನಾವು ಕಷ್ಟಪಟ್ಟು ನಿರ್ಮಿಸಿದ ಪ್ರಜಾಪ್ರಭುತ್ವದ ಸೌಧ ಕುಸಿಯುತ್ತದೆ.

  • ನ್ಯಾಯಾಂಗದ ಡಿಜಿಟಲೀಕರಣ ನ್ಯಾಯದಾನವನ್ನು ಹೆಚ್ಚು ತ್ವರಿತಗೊಳಿಸುತ್ತದೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತದೆ.

  • ಕೋವಿಡ್‌ ಸಾಂಕ್ರಾಮಿಕ ರೋಗ ಹರಡಿದ್ದಾಗ ದೇಶದ ನ್ಯಾಯಾಂಗ ಜನರಿಗೆ ತಲುಪುವಂತಾಗಲು ತಂತ್ರಜ್ಞಾನ ವಹಿಸಿದ ಪಾತ್ರ ಪ್ರಮುಖವಾದದ್ದು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ  ಪಿಣರಾಯಿ ವಿಜಯನ್, ರಾಷ್ಟ್ರದಲ್ಲಿ ಅಸ್ಪೃಶ್ಯತೆ ತೊಡೆದುಹಾಕುವುದಕ್ಕಾಗಿ ಸಂವಿಧಾನದಲ್ಲಿ 17ನೇ ಪರಿಚ್ಛೇದ ಸೇರಿಸಿದ ಸಂವಿಧಾನ ರಚನೆಕಾರರ ದೂರದೃಷ್ಟಿಯನ್ನು ಶ್ಲಾಘಿಸಿದರು. ಸಮಾಜದ ಎಲ್ಲಾ ವರ್ಗದವರನ್ನು ಮೇಲೆತ್ತಲು ಕೇರಳ ಸರ್ಕಾರ ಬದ್ಧವಾಗಿದೆ ಎಂದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಿ ಟಿ.ರವಿಕುಮಾರ್, ರಾಜೇಶ್ ಬಿಂದಾಲ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಕೇರಳ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮುಹಮ್ಮದ್‌ ಮುಷ್ತಾಕ್‌ ಮತ್ತು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ರಾಜಾ ವಿಜಯರಾಘವನ್ ವಿ ಅವರು ಉಪಸ್ಥಿತರಿದ್ದರು.