kirit somaiya and bombay high court  facebook
ಸುದ್ದಿಗಳು

[ಐಎನ್ಎಸ್ ವಿಕ್ರಾಂತ್ ಹಣ ದುರ್ಬಳಕೆ] ಕಿರೀಟ್ ಸೋಮೈಯಗೆ ನೀಡಿದ್ದ ನಿರೀಕ್ಷಣಾ ಜಾಮೀನು ಖಾಯಂಗೊಳಿಸಿದ ಬಾಂಬೆ ಹೈಕೋರ್ಟ್

ಪ್ರಕರಣದಲ್ಲಿ ಹಣ ದುರುಪಯೋಗದ ಆರೋಪ ಸಾಬೀತುಪಡಿಸುವ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸದ್ಯಕ್ಕೆ ಸೋಮೈಯ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಮುಂಬೈ ಪೊಲೀಸರು ವಾದಿಸಿದರು.

Bar & Bench

ಮುಂಬೈ ಪೊಲೀಸರು ದಾಖಲಿಸಿದ್ದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕಿರೀಟ್‌ ಸೋಮೈಯ ಅವರಿಗೆ ನೀಡಲಾದ ಮಧ್ಯಂತರ ಪರಿಹಾರವನ್ನು ಬಾಂಬೆ ಹೈಕೋರ್ಟ್ ಬುಧವಾರ ಖಾಯಂಗೊಳಿಸಿದೆ.

ಸೋಮೈಯ ಮತ್ತು ಅವರ ಪುತ್ರ ಅವ್ಯವಹಾರ ನಡೆಸಿರುವ ಬಗ್ಗೆ ಸಾಕಷ್ಟು ಪುರಾವೆಗಳು ದೊರೆತಿಲ್ಲ ಎಂದು ಇಂದಿನ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಶಿರೀಶ್‌ ಗುಪ್ತೆ ತಿಳಿಸಿದರು. ಪೊಲೀಸ್ ಕಸ್ಟಡಿ ಅಗತ್ಯವಿದೆಯೇ ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಕೇಳಿದಾಗ, ಸದ್ಯಕ್ಕೆ ಕಸ್ಟಡಿ ಅಗತ್ಯವಿಲ್ಲ. ಅವರು ವಿಚಾರಣೆಗೆ ಹಾಜರಾಗುವುದನ್ನು ಮುಂದುವರಿಸಲು ನಾವು ಬಯಸುತ್ತೇವೆ ಎಂದು ಗುಪ್ತೆ ಸ್ಪಷ್ಟಪಡಿಸಿದರು.

ಇಲ್ಲಿಯವರೆಗೆ ಅರ್ಜಿದಾರರಿಗೆ ಸಮನ್ಸ್ ನೀಡಲಾಗಿದೆಯೇ ಎಂದು ಕೋರ್ಟ್ ಕೇಳಿದಾಗ, ಅವರಿಗೆ ಈಗಾಗಲೇ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಗುಪ್ತೆ ಹೇಳಿದರು. ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಬಯಸಿದರೆ, ಬಂಧನಕ್ಕೆ 72 ಗಂಟೆಗಳ ಮೊದಲು ಸೋಮೈಯ ಅವರಿಗೆ ತಿಳಿಸಲಾಗುವುದು ಎಂದು ಗುಪ್ತೆ ವಿವರಿಸಿದರು.

ಈ ಹಿನ್ನೆಲೆಯಲ್ಲಿ 2022ರ ಏಪ್ರಿಲ್‌ನಲ್ಲಿ ಸೋಮೈಯ ಅವರಿಗೆ ನೀಡಿದ್ದ ಮಧ್ಯಂತರ ಪರಿಹಾರವನ್ನು ಖಾಯಂಗೊಳಿಸಿ, ಅರ್ಜಿ ವಿಲೇವಾರಿ ಮಾಡಲಾಯಿತು.

ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ಅನ್ನು ನೌಕಾ ಸೇವೆಯಿಂದ ನಿವೃತ್ತಿಗೊಳಿಸಿದ ನಂತರ ಅದನ್ನು ಕಳಚಿಹಾಕದೆ ರಕ್ಷಿಸಿ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲು ಸಂಗ್ರಹಿಸಿದ್ದ ₹ 50 ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸೋಮೈಯ ಮತ್ತು ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.