Justices Rohinton Nariman, KM Joseph and Aniruddha Bose 
ಸುದ್ದಿಗಳು

ಪೊಲೀಸ್‌ ಠಾಣೆ, ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿ ಅಳವಡಿಕೆ; ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಪಂಜಾಬ್‌ನಲ್ಲಿ ನಡೆದಿದೆ ಎನ್ನಲಾದ ಲಾಕಪ್‌ಡೆತ್‌ ಆರೋಪದ ಹಿನ್ನೆಲೆಯಲ್ಲಿ ಸಿಸಿಟಿವಿ ಅಳವಡಿಕೆ ವಿಚಾರವನ್ನು ಸುಪ್ರೀಂ ಮರುಪರಿಶೀಲನೆಗೆ ಒಳಪಡಿಸಿದ್ದು, ರಾಜ್ಯ/ಕೇಂದ್ರಾಡಳಿತ ಪ್ರದೇಶ ಹಾಗೂ ಕೇಂದ್ರ ಸರ್ಕಾರಕ್ಕೆ ಹಲವು ಸಲಹೆ-ಸೂಚನೆ ನೀಡಿದೆ.

Bar & Bench

ಪೊಲೀಸರ ಹೊಣೆಗಾರಿಕೆ ಹೆಚ್ಚಿಸುವುದು ಮತ್ತು ಪೊಲೀಸ್‌ ಠಾಣೆಗಳಲ್ಲಿ ಪ್ರಜಾಪ್ರಭುತ್ವೀಕರಣಕ್ಕೆ ಆದ್ಯತೆ ನೀಡಿರುವ ಸುಪ್ರೀಂ ಕೋರ್ಟ್‌ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪೊಲೀಸ್‌ ಠಾಣೆಗಳಲ್ಲಿ ರಾತ್ರಿಯ ವೇಳೆಯಲ್ಲೂ ಸಮರ್ಥವಾಗಿ ಕೆಲಸ ಮಾಡಬಲ್ಲ ಸಿಸಿಟಿವಿ ಅಳವಡಿಸುವಂತೆ ಮಹತ್ವದ ಆದೇಶ ಹೊರಡಿಸಿದೆ.

ಪಂಜಾಬ್‌ನಲ್ಲಿ ನಡೆದಿದೆ ಎನ್ನಲಾದ ಲಾಕಪ್‌ಡೆತ್‌ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌, ಕೆ ಎಂ ಜೋಸೆಫ್‌ ಮತ್ತು ಅನಿರುದ್ಧ ಬೋಸ್‌ ಅವರಿದ್ದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ರಾಜ್ಯ/ಕೇಂದ್ರಾಡಳಿತ ಪ್ರದೇಶ ಹಾಗೂ ಕೇಂದ್ರ ಸರ್ಕಾರಕ್ಕೆ ಹಲವು ಪ್ರಮುಖ ನಿರ್ದೇಶಗಳನ್ನು ನೀಡಿದೆ. ಅವುಗಳು ಇಂತಿವೆ:

  • ದೇಶದ ಎಲ್ಲಾ ಪೊಲೀಸ್‌ ಠಾಣೆಗಳ ಜೊತೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ), ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಜಾರಿ ನಿರ್ದೇಶನಾಲಯ (ಇಡಿ), ಅಮಲು ಪದಾರ್ಥಗಳ ನಿಯಂತ್ರಣ ಘಟಕ (ಎನ್‌ಸಿಬಿ), ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ), ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ), ಆರೋಪಿಗಳನ್ನು ತನಿಖೆಗೆ ಒಳಪಡಿಸುವ ಎಲ್ಲಾ ಸಂಸ್ಥೆಗಳಲ್ಲೂ ಸಿಸಿಟಿವಿ ಅಳವಡಿಸುವುದರ ಜೊತೆಗೆ ಆಡಿಯೊ-ವಿಡಿಯೊ ದಾಖಲೀಕರಣಕ್ಕೆ ಒತ್ತು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ.

  • ವಿದ್ಯುತ್‌ ಮತ್ತು ಇಂಟರ್‌ನೆಟ್‌ ಸಮಸ್ಯೆ ಇರುವು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸೋಲಾರ್‌/ಪವನ ಶಕ್ತಿಯ ಮೂಲಕ ವಿದ್ಯುತ್‌ ಪೂರೈಸುವ ಜವಾಬ್ದಾರಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೆಗಲಿಗೆ.

  • ಪೊಲೀಸ್‌ ಠಾಣೆಯಲ್ಲಿ ಆರೋಪಿಗೆ ಗಂಭೀರ ಗಾಯಗಳಾದರೆ ಅಥವಾ ಲಾಕಪ್‌ಡೆತ್‌ ಸಂಭವಿಸಿದರೆ ರಾಷ್ಟ್ರೀಯ/ರಾಜ್ಯ ಮಾನವ ಹಕ್ಕುಗಳ ಆಯೋಗ, ಮಾನವ ಹಕ್ಕುಗಳ ನ್ಯಾಯಾಲಯಗಳು ಅಥವಾ ಪೊಲೀಸ್‌ ವರಿಷ್ಠಾಧಿಕಾರಿ, ಅಪರಾಧವನ್ನು ಗಂಭೀರವಾಗಿ ಪರಿಗಣಿಸುವುದಕ್ಕಾಗಿ ಸೃಷ್ಟಿಸಲಾದ ಯಾವುದೇ ಪ್ರಾಧಿಕಾರಕ್ಕೆ ದೂರು ನೀಡುವ ಹಕ್ಕು ಸಂತ್ರಸ್ತರಿಗೆ ಇರುತ್ತದೆ ಎಂಬ ಫಲಕವನ್ನು ಪೊಲೀಸ್‌ ಠಾಣೆಗಳಲ್ಲಿ ಹಾಕಬೇಕು.

  • ಸಿಸಿಟಿವಿ ತುಣುಕುಗಳನ್ನು ಕನಿಷ್ಠ ಆರು ತಿಂಗಳಿಗಿಂತ ಕಡಿಮೆ ಇಲ್ಲದ ರೀತಿಯಲ್ಲಿ ಸಂಗ್ರಹಿಸಿಡಬೇಕಿದ್ದು, ಸಂತ್ರಸ್ತರ ಹಕ್ಕುಗಳು ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಸಂಗ್ರಹಿಸಿಡಲಾದ ಆಡಿಯೊ-ವಿಡಿಯೊ ತುಣುಕುಗಳನ್ನು ಪಡೆಯುವ ಹಕ್ಕು ಸಂತ್ರಸ್ತರಿಗೆ ಇರುತ್ತದೆ ಎಂಬ ಅಂಶವನ್ನು ಫಲಕದಲ್ಲಿ ಉಲ್ಲೇಖಿಸಬೇಕು.

  • ಸಿಸಿಟಿವಿ ಕಾರ್ಯಾಚರಣೆ, ನಿರ್ವಹಣೆ ಮತ್ತು ರೆಕಾರ್ಡಿಂಗ್‌ ಜವಾಬ್ದಾರಿಯು ಸಂಬಂಧಿತ ಪೊಲೀಸ್‌ ಠಾಣೆಯ ಎಸ್‌ಎಚ್‌ಒಗೆ ಇರುತ್ತದೆ.

  • ಪೊಲೀಸ್‌ ಠಾಣೆಯ ಪ್ರವೇಶ ಮತ್ತು ನಿರ್ಗಮನ ದ್ವಾರ, ಪ್ರಮುಖ ದ್ವಾರ, ಎಲ್ಲಾ ಲಾಕಪ್‌ಗಳು, ಕಾರಿಡಾರ್‌ಗಳು, ಸ್ವಾಗತಕಾರರ ಸ್ಥಳ, ಹೊರಾಂಗಣ ಪ್ರದೇಶ, ಇನ್‌ಸ್ಪೆಕ್ಟರ್‌ ಕೊಠಡಿ, ಸಬ್‌ ಇನ್‌ಸ್ಪೆಕ್ಟರ್‌ ಕೊಠಡಿ, ಲಾಕಪ್‌ ಕೊಠಡಿಯ ಹೊರಾಂಗಣ, ಸ್ಟೇಷನ್‌ ಸಭಾಂಗಣ, ಪೊಲೀಸ್‌ ಠಾಣೆಯ ಕಾಂಪೌಂಡ್‌, ಶೌಚಾಲಯಗಳು, ಕರ್ತವ್ಯ ನಿರ್ವಹಣಾಧಿಕಾರ ಕೊಠಡಿ, ಪೊಲೀಸ್‌ ಠಾಣೆಯ ಹಿಂಬದಿಯಲ್ಲಿ ಸಿಸಿಟಿವಿ ಅಳವಡಿಸುವಂತೆ ಸೂಚನೆ.

  • ನ್ಯಾಯಮೂರ್ತಿ ರೋಹಿಂಗ್ಟನ್‌ ನಾರಿಮನ್‌ ಅವರು ಹಿರಿಯ ವಕೀಲ ಸಿದ್ಧಾರ್ಥ ದವೆ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿದ್ದು, ಉಲ್ಲಂಘನೆಯ ಮೇಲೆ ನಿಗಾ ಇಡುವುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಗೂ ಸಲಹೆ-ಸೂಚನೆ ನೀಡುವಂತೆ ನ್ಯಾಯಾಲಯ ಕೋರಿದೆ.

  • ವಿಡಿಯೊ ರೆಕಾರ್ಡಿಂಗ್‌ಗಳನ್ನು 18 ತಿಂಗಳ ಅವಧಿಯವರೆಗೂ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಕಾರ್ಡಿಂಗ್‌ ಉಪಕರಣಗಳು 18 ತಿಂಗಳ ಅವಧಿಯವರೆಗೆ ರೆಕಾರ್ಡಿಂಗ್‌ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿಲ್ಲವಾದರೆ ಲಭ್ಯವಿರುವ ಅತಿ ಹೆಚ್ಚಿನ ಅವಧಿಯ ರೆಕಾರ್ಡಿಂಗ್‌ ಸಂಗ್ರಹಿಸಿಡುವ ಉಪಕರಣಗಳನ್ನು ಖರೀದಿಸುವುದು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.

  • ತನಿಖೆಯ ವೇಳೆ ಅಪರಾಧ ಸ್ಥಳದ ವಿಡಿಯೊಗ್ರಫಿ ಬಳಸುವುದಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನ ಜಾರಿಗಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲುಸ್ತುವಾರಿ ಸಮಿತಿ ರಚಿಸುವಂತೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿದೆ.

ರಾಜ್ಯ ಮತ್ತು ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿಗಳಲ್ಲಿ ಯಾರು ಯಾರು ಇರಲಿದ್ದಾರೆ?

  • ಗೃಹ ಇಲಾಖೆ ಮತ್ತು ಹಣಕಾಸು ಇಲಾಖೆಯ ಕಾರ್ಯದರ್ಶಿ/ಹೆಚ್ಚುವರಿ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು/ಸದಸ್ಯರನ್ನು ರಾಜ್ಯ ಮಟ್ಟದ ಮೇಲುಸ್ತುವಾರಿ ಸಮಿತಿ ಒಳಗೊಳ್ಳಲಿದೆ.

  • ವಿಭಾಗೀಯ ಆಯುಕ್ತರು/ವಿಭಾಗಗಳ ಆಯುಕ್ತರು/ಪ್ರಾದೇಶಿಕ ಆಯುಕ್ತರು/ಜಿಲ್ಲಾ ವಿಭಾಗದ ಕಂದಾಯ ಆಯುಕ್ತರು. ಜಿಲ್ಲಾ ದಂಡಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ನಗರಸಭೆಯ ಅಧ್ಯಕ್ಷ/ಮೇಯರ್‌ ಅಥವಾ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿಯಲ್ಲಿರಲಿದ್ದಾರೆ.

  • ಠಾಣೆಯಲ್ಲಿ ಪೊಲೀಸರ ದೌರ್ಜನ್ಯದಿಂದ ಆರೋಪಿಗೆ ಗಂಭೀರ ಗಾಯವಾದರೆ ಅಥವಾ ಲಾಕಪ್‌ಡೆತ್ ಸಂಭವಿಸಿದರೆ ಪರಿಹಾರಕ್ಕಾಗಿ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಬಹುದಾಗಿದೆ. ಅದು ಮಾನವ ಹಕ್ಕುಗಳ ಭದ್ರತಾ ಕಾಯಿದೆ 1993ರ ಸೆಕ್ಷನ್‌ 17 ಮತ್ತು18ರ ಅಡಿ ತನ್ನ ಅಧಿಕಾರ ಚಲಾಯಿಸಿ ಪರಿಹಾರ ಕಲ್ಪಿಸಲಿದೆ. ಇದರ ಜೊತೆಗೆ ಮಾನವ ಹಕ್ಕುಗಳ ಭದ್ರತಾ ಕಾಯಿದೆ 1993ರ ಸೆಕ್ಷನ್‌ 30ರ ಅಡಿ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಮಾನವ ಹಕ್ಕುಗಳ ನ್ಯಾಯಾಲಯಗಳನ್ನು ಆರಂಭಿಸಬೇಕಿದ್ದು, ಅಲ್ಲಿಗೂ ದೂರು ನೀಡಬಹುದಾಗಿದೆ.