ಸಂಬಂಧಪಟ್ಟ ರಾಜ್ಯ ಸರ್ಕಾರದ ಸಮ್ಮತಿ ಪಡೆಯದ ಹೊರತು ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಅಲ್ಲಿ ತನ್ನ ಅಧಿಕಾರ ಮತ್ತು ಕಾರ್ಯವ್ಯಾಪ್ತಿ ಚಲಾಯಿಸಲು ಸಾಧ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ತನಿಖೆಯ ನಂತರ ಸಮ್ಮತಿಯನ್ನು ಪಡೆದುಕೊಂಡರೆ ಹಾಗೂ ಪೂರ್ವಾನುಮತಿಯಿಲ್ಲದೆ ತನಿಖೆ ಕೈಗೊಂಡ ಕಾರಣಕ್ಕೆ ಆರೋಪಿಯು ಪೂರ್ವಾಗ್ರಹ ಹೊಂದಿಲ್ಲದೆ ಹೋದ ಪಕ್ಷದಲ್ಲಿ ಆಗ ತನಿಖೆಯು ಅಮಾನ್ಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದೆಹಲಿ ವಿಶೇಷ ಪೊಲೀಸ್ ಅಧಿಷ್ಠಾನ ಕಾಯಿದೆಯ (ಡಿಎಸ್‌ಪಿಇ ಕಾಯಿದೆ) ಸೆಕ್ಷನ್ 6ರ ಪ್ರಕಾರ ತನಿಖೆ ನಡೆಸುವ ಸಿಬಿಐ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದಿರಬೇಕೆಂದು ಆದೇಶಿಸುತ್ತದೆ. ಇದು ಸಂವಿಧಾನದ ಒಕ್ಕೂಟ ರಾಜ್ಯಗಳಿಗೂ ಅನ್ವಯವಾಗುವಂತಿದೆ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
"ಡಿಎಸ್‌ಪಿಇ ಕಾಯಿದೆಯ ಸೆಕ್ಷನ್ 5ರ ಪ್ರಕಾರ ಕೇಂದ್ರ ಸರ್ಕಾರಕ್ಕೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಎಸ್‌ಪಿಇ ಸದಸ್ಯರ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಅನುವು ಮಾಡಿಕೊಟ್ಟರೂ, ಸೆಕ್ಷನ್ 6ರ ಅಡಿ ಸಂಬಂಧಪಟ್ಟ ರಾಜ್ಯದ ವ್ಯಾಪ್ತಿಯಲ್ಲಿ ಅಂತಹ (ಅಧಿಕಾರ ಮತ್ತು ಕಾರ್ಯವ್ಯಾಪ್ತಿ) ವಿಸ್ತರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡದ ಹೊರತು ಅನುಮತಿ ದೊರೆಯದು. ನಿಸ್ಸಂಶಯವಾಗಿ, ಸಂವಿಧಾನದ ಮೂಲ ರಚನೆಗಳಲ್ಲಿ ಒಂದಾಗಿರುವ ನಿಬಂಧನೆಗಳು ಸಂವಿಧಾನದ ಒಕ್ಕೂಟ ಸ್ವರೂಪಕ್ಕೆ ಅನುಗುಣವಾಗಿರುತ್ತವೆ” ಎಂದು ತೀರ್ಪು ತಿಳಿಸಿದೆ.
ಆದರೆ, ಪ್ರಸ್ತುತ ಪ್ರಕರಣದಲ್ಲಿ ಡಿಎಸ್‌ಪಿಇ ಕಾಯಿದೆಯ ಸೆಕ್ಷನ್ 6ರ ಅಡಿ ಪೂರ್ವಾನುಮತಿ ಪಡೆಯುವ ನಿಟ್ಟಿನಲ್ಲಿ ಆರೋಪಿಗಳು ತಮ್ಮ ಪೂರ್ವಾಗ್ರಹಕ್ಕೆ ಸಂಬಂಧಿಸಿದಂತೆ ಯಾವುದೇ ಮನವಿ ಮಾಡಿಲ್ಲ ಎಂದು ನ್ಯಾಯಾಲಯ ತಿಳಿಸಿದ್ದು ಹೀಗಾಗಿ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡದೇ ಇರಲು ನಿರ್ಧರಿಸಿದೆ.
ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಫೆರ್ಟಿಕೊ ಮಾರ್ಕೆಟಿಂಗ್ ಅಂಡ್ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್ ನಡುವೆ ನಡೆದ ಇಂಧನ ಪೂರೈಕೆ ಒಪ್ಪಂದ (ಎಫ್‌ಎಸ್‌ಎ) ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಾಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಖಾಸಗಿ ವ್ಯಕ್ತಿಗಳ ವಿರುದ್ಧದ ಭ್ರಷ್ಟಾಚಾರ ತಡೆ ಕಾಯಿದೆಯಡಿ ಪ್ರಕರಣಗಳನ್ನು ತನಿಖೆ ಮಾಡಲು ಉತ್ತರಪ್ರದೇಶ ಸರ್ಕಾರ 1989ರಲ್ಲಿ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿತ್ತು. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದ ಪ್ರಕರಣಗಳಾದರೆ ಅಂತಹ ತನಿಖೆಗೆ ರಾಜ್ಯ ಸರ್ಕಾರವು ಪ್ರತ್ಯೇಕ ಪ್ರಕರಣದ ಆಧಾರದಲ್ಲಿ ತನಿಖೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸುತ್ತದೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರಲ್ಲಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಹಗರಣದಲ್ಲಿ ಪಾಲ್ಗೊಂಡ ಆರೋಪ ಎದುರಿಸುತ್ತಿರುವ ಇಬ್ಬರು ಸರ್ಕಾರಿ ಅಧಿಕಾರಿಗಳಾದ ರಾಮ್‌ಜಿ ಸಿಂಗ್ ಮತ್ತು ಯೋಗೇಂದ್ರನಾಥ್ ಪಾಂಡೆ ಅವರನ್ನು ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 19ರ ಅಡಿ ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಅನುಮತಿ ನೀಡಿತ್ತು. ತರುವಾಯ, ಡಿಎಸ್‌ಪಿಇ ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಇಬ್ಬರು ಸರ್ಕಾರಿ ನೌಕರರ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಬಿಐಗೆ ಪೋಸ್ಟ್-ಫ್ಯಾಕ್ಟೋ ಒಪ್ಪಿಗೆ ಸೂಚಿಸಿತ್ತು.