ಸುದ್ದಿಗಳು

ಖಾಲಿ ಹುದ್ದೆಗಳ ಅಸಮರ್ಪಕ ಜಾಹೀರಾತು ಉದ್ಯೋಗಾಕಾಂಕ್ಷಿಗಳ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ: ಅಲಾಹಾಬಾದ್ ಹೈಕೋರ್ಟ್

Bar & Bench

ಉದ್ಯೋಗ ಜಾಹೀರಾತನ್ನು ಸಮರ್ಪಕವಾಗಿ ಪ್ರಸಾರ ಮಾಡದಿದ್ದರೆ ಅದು ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯಯುತ ಅವಕಾಶವನ್ನು ತಡೆದು ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ರವಿ ಪ್ರತಾಪ್‌ ಮಿಶ್ರಾ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].

ಶಿಕ್ಷಣ ಇಲಾಖೆಗಾಗಿ ನೇಮಕಾತಿ ಮಾಡಿಕೊಳ್ಳುವ ಮುನ್ನ ಸೂಕ್ತ ರೀತಿಯಲ್ಲಿ ಜಾಹೀರಾತು ನೀಡದೇ ಇದ್ದುದನ್ನು ಗಮನಿಸಿ ಏಕಸದಸ್ಯ ನ್ಯಾಯಮೂರ್ತಿಗಳು ನೀಡಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಜೆ ಜೆ ಮುನೀರ್ ಅವರಿದ್ದ ಪೀಠ ಎತ್ತಿ ಹಿಡಿಯಿತು.

"ಸಂವಿಧಾನದ 14 ಮತ್ತು 16ನೇ ವಿಧಿಗಳ ಪ್ರಕಾರ ಏಕ ಸದಸ್ಯ ಪೀಠ ನೀಡಿದ ಆದೇಶದಲ್ಲಿ ನಮಗೆ ಯಾವುದೇ ದೋಷ ಕಂಡುಬಂದಿಲ್ಲ, ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶವನ್ನು ನೀಡುವಂತೆ ಅರ್ಜಿ ಆಹ್ವಾನಿಸುವ ಜಾಹೀರಾತನ್ನು ನೀಡಬೇಕು" ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ರವಿ ಪ್ರತಾಪ್ ಮಿಶ್ರಾ ಎಂಬುವವರನ್ನು ಶಾಲೆಯೊಂದರಲ್ಲಿ ಕ್ಲರ್ಕ್ ಆಗಿ ನೇಮಕ ಮಾಡಿದ ಕುರಿತು ವಿವಾದ ಉಂಟಾಗಿತ್ತು. ನೇಮಕಾತಿ ಕಡತವನ್ನು ಅನುಮೋದನೆಗಾಗಿ ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್‌ಗೆ ಕಳುಹಿಸಿದಾಗ, ಆ ಪ್ರದೇಶದಲ್ಲಿ ಕಡಿಮೆ ಪ್ರಸಾರವಿರುವ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿದೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ರವಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಏಕಸದಸ್ಯ ಪೀಠ ತಿರಸ್ಕರಿಸಿತ್ತು.

ಮೇಲ್ಮನವಿಗೆ ಅರ್ಹತೆ ಇಲ್ಲದಿರುವುದನ್ನು ಗಮನಿಸಿದ ವಿಭಾಗೀಯ ಪೀಠ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಒಪ್ಪಿದೆ. ಹುದ್ದೆ ಭರ್ತಿಗೆ ಸರಿಯಾದ ವಿಧಾನ ಅನುಸರಿಸದ ಕಾರಣ, ಎಲ್ಲಾ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ನ್ಯಾಯಯುತ ಅವಕಾಶ ನೀಡದ ಕಾರಣ ಏಕಸದಸ್ಯ ಪೀಠದ ಆದೇಶ ರಿಟ್ ಅರ್ಜಿಯನ್ನು ಸರಿ ರೀತಿಯಲ್ಲಿಯೇ ತಿರಸ್ಕರಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ.

Ravi_Pratap_Mishra_v__State_of_U_P__and_others.pdf
Preview