ಸುದ್ದಿಗಳು

ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವ ಉದ್ದೇಶವಿಲ್ಲದ ಅಜಾಗರೂಕ ಧಾರ್ಮಿಕ ಅಪಮಾನ ಅಪರಾಧವಲ್ಲ: ತ್ರಿಪುರ ಹೈಕೋರ್ಟ್‌

Bar & Bench

ಸಮುದಾಯವೊಂದರ ಭಾವನೆಯನ್ನು ಕೆರಳಿಸುವ ರೀತಿಯಲ್ಲಿ ಅಪ್ರಜ್ಞಾಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ಧರ್ಮ ನಿಂದನೆ ಮಾಡುವುದಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 295ಎ ಅಡಿ ದೂರು ದಾಖಲಿಸುವಂತಿಲ್ಲ ಎಂದು ತ್ರಿಪುರ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ (ಶ್ರೀ ದುಲಾಲ್‌ ಘೋಷ್‌ ವರ್ಸಸ್‌ ತ್ರಿಪುರ ರಾಜ್ಯ).

ಅರ್ಜಿದಾರ ದುಲಾಲ್‌ ಘೋಷ್‌ ಫೇಸ್‌ಬುಕ್‌ನಲ್ಲಿ ಭಗವದ್ಗೀತೆಗೆ ಸಂಬಂಧಿಸಿದಂತೆ ಪೋಸ್ಟ್‌ ಮಾಡಿದ್ದಕ್ಕೆ ಅವರ ವಿರುದ್ಧ ದಾಖಲಾಗಿದ್ದ ಪ್ರಥಮ ಮಾಹಿತಿ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಅಖಿಲ್‌ ಖುರೇಷಿ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ.

“ತಿಳಿಯದೆ ಅಥವಾ ಅಜಾಗರೂಕತೆಯಿಂದ ಅಥವಾ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶವಿಲ್ಲದೆ ಅಥವಾ ದುರುದ್ದೇಶಪೂರಿತವಲ್ಲದೆ ಧರ್ಮಕ್ಕೆ ಮಾಡಿದ ಅಪಮಾನಗಳು ಈ ಸೆಕ್ಷನ್‌ (295 ಎ) ವ್ಯಾಪ್ತಿಗೆ ಒಳಪಡುವುದಿಲ್ಲ”ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಿಂದೂ ಧರ್ಮದ ಬಗ್ಗೆ ಕೀಳು ಅಭಿರುಚಿಯ ಹಾಗೂ ಅವಹೇಳನಕಾರಿ ರೀತಿಯಲ್ಲಿ ಗೀತೆಯಲ್ಲಿ (ಹಿಂದೂಗಳ ಪವಿತ್ರ ಧಾರ್ಮಿಕ ಗ್ರಂಥ) ವಂಚನೆಯ ಅಂಶ ಇದೆ ಎಂಬ ಪೋಸ್ಟ್‌ ಅನ್ನು ಬೆಂಗಾಲಿಯಲ್ಲಿ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

“ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸುವ ಮೂಲಕ ಅರ್ಜಿದಾರರು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ” ಎಂದು ಘೋಷ್‌ ವಿರುದ್ಧ ದೂರುದಾರರು ಅಸಹನೆ ವ್ಯಕ್ತಪಡಿಸಿದ್ದಾರೆ. ಪವಿತ್ರ ಗ್ರಂಥದ (ಭಗವದ್ಗೀತೆ) ವಿರುದ್ಧ ಅವಹೇಳನಕಾರಿ ಪ್ರತಿಕ್ರಿಯೆ ಹಾಕುವ ಮೂಲಕ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕರು (ಎಪಿಪಿ) ವಾದಿಸಿದರು.

ಇದಕ್ಕೆ ತಕರಾರು ಎತ್ತಿರುವ ಅರ್ಜಿದಾರರು ತಮ್ಮ ಪ್ರತಿಕ್ರಿಯೆಯನ್ನು “ಉದ್ದೇಶಪೂರ್ವಕವಾಗಿ ತಿರುಚಿ ಮತ್ತು ತಪ್ಪಾಗಿ ಅರ್ಥೈಸಲಾಗಿದೆ.” ಗೀತೆಗೆ ಅಪಮಾನ ಮಾಡುವ ಮತ್ತು ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ಅಥವಾ ಯಾವುದೇ ಸಮುದಾಯ ಅಥವಾ ವರ್ಗಕ್ಕೆ ನೋಯಿಸುವ ಉದ್ದೇಶವನ್ನು ಪೋಸ್ಟ್ ಹೊಂದಿಲ್ಲ. ತಮ್ಮ ಹೇಳಿಕೆಗೆ ತಪ್ಪಾದ ಅರ್ಥ ಕಲ್ಪಿಸುವ ಮೂಲಕ ಕ್ರಿಮಿನಲ್‌ ಅಪರಾಧ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.

ಗೀತೆಯು ಮೋಸ ಅಥವಾ ವಂಚನೆಯಿಂದ ಕೂಡಿದೆ ಎಂಬ ಅರ್ಥವನ್ನು ತನ್ನ ಫೇಸ್‌ಬುಕ್‌ ಪೋಸ್ಟ್‌ ನೀಡುವುದಿಲ್ಲ. ಬದಲಾಗಿ ಅದು ವಂಚಕರನ್ನು ಉರಿಯುವ ಬಾಣಲೆ ಎಂಬ ಅರ್ಥ ನೀಡುವುದಾಗಿದೆ ವಾದಿಸಿದ್ದಾರೆ. ಆದರೆ, ಕ್ರಿಮಿನಲ್‌ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರು ತಮ್ಮ ಹೇಳಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಎಪಿಪಿ ವಾದಿಸಿದ್ದಾರೆ.

“ಸೆಕ್ಷನ್ 295ಎ ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಪ್ರಯತ್ನಕ್ಕೆ ದಂಡ ವಿಧಿಸುವುದಿಲ್ಲ. ಆದರೆ ನಿರ್ದಿಷ್ಟ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಮಾಡಿದ ಅವಮಾನಗಳು ಅಥವಾ ಪ್ರಯತ್ನಗಳಿಗೆ ಮಾತ್ರ ಇದು ದಂಡ ವಿಧಿಸುತ್ತದೆ” ಎಂದು ಸುಪ್ರೀಂ ಕೋರ್ಟ್‌ 1957ರಲ್ಲಿ ರಾಮ್ಜಿ ಲಾಲ್‌ ಮೋದಿ ವರ್ಸಸ್‌ ಉತ್ತರ ಪ್ರದೇಶ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ಎಫ್‌ಐಆರ್‌ ರದ್ದತಿಗೆ ಆದೇಶಿಸಿದೆ.

ಅರ್ಜಿದಾರರು ಬಳಸಿದ ಪದವು ಅದೇ ಅರ್ಥ ನೀಡಬಹುದು ಅಥವಾ ನೀಡದೇ ಇರಬಹುದು. ಆದರೆ, ದೂರುದಾರರು ಆರೋಪಿಸಿರುವಂತೆ ಅದು ವಂಚನೆಯ ಗ್ರಂಥ ಎಂಬ ಅರ್ಥವನ್ನು ಮಾತ್ರ ನೀಡುವುದಿಲ್ಲ ಎಂದು ಬೆಂಗಾಳಿ-ಇಂಗ್ಲಿಷ್‌ ಶಬ್ದಕೋಶವನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಹೇಳಿದೆ.