ಚಾಲಕ ಪಾನಮತ್ತನಾಗಿದ್ದರೆ ವಿಮಾ ಪಾಲಿಸಿಯಲ್ಲಿ ಪರಿಹಾರದ ಅವಕಾಶವಿರಲಿ ಅಥವಾ ಬಿಡಲಿ, ವಿಮಾ ಕಂಪೆನಿ ಅಪಘಾತಕ್ಕೀಡಾದ ಸಂತ್ರಸ್ತರು/ ಮೂರನೇ ಪಾರ್ಟಿಗೆ ಆರಂಭದಲ್ಲಿ ಪರಿಹಾರ ನೀಡಲು ಬಾಧ್ಯಸ್ಥನಾಗಿರುತ್ತದೆ ಎಂದು ಕೇರಳ ಹೈಕೋರ್ಟ್ ಸೋಮವಾರ ಹೇಳಿದೆ [ಮುಹಮ್ಮದ್ ರಶೈದ್ ಅಲಿಯಾಸ್ ರಶೀದ್ ಮತ್ತು ಗಿರಿವಾಸನ್ ಇಕೆ ಇನ್ನಿತರರ ನಡುವಣ ಪ್ರಕರಣ].
ಕುಡಿದು ವಾಹನ ಚಲಾಯಿಸಿ ಅಪಘಾತ ಸಂಭವಿಸಿದಾಗ ವಿಮಾ ಪಾಲಿಸಿಯಲ್ಲಿ ಪರಿಹಾರದ ಅವಕಾಶವಿಲ್ಲದಿದ್ದರೂ ವಿಮಾದಾರನು (ವಿಮಾ ಕಂಪೆನಿ) ಮೂರನೇ ವ್ಯಕ್ತಿಗೆ ಪರಿಹಾರ ನೀಡಬೇಕು. ಬಳಿಕ ಚಾಲಕ ಮತ್ತು ಮಾಲೀಕನಿಂದ ಆ ಹಣವನ್ನು ಹಿಂಪಡೆಯಬಹುದು ಎಂದು ನ್ಯಾ. ಸೋಫಿ ಥಾಮಸ್ ತೀರ್ಪು ನೀಡಿದರು.
ಕುಡಿದ ಸ್ಥಿತಿಯಲ್ಲಿ ವಾಹನ ಚಲಾಯಿಸುವುದು ನಿಯಮಗಳ ಉಲ್ಲಂಘನೆ ಎಂದು ವಿಮಾ ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳು ಸೂಚಿಸಿದರೂ ಕೂಡ ವಿಮಾ ಕಂಪೆನಿ ಪರಿಹಾರ ನೀಡಲು ಹೊಣೆಗಾರನಾಗಿರುತ್ತದೆ. ನಿಸ್ಸಂದೇಹವಾಗಿ, ಚಾಲಕ ಅಮಲೇರಿದ ಸ್ಥಿತಿಯಲ್ಲಿದ್ದು ಆತನ ಪ್ರಜ್ಞೆ ಮತ್ತು ಇಂದ್ರಿಯಗಳು ದುರ್ಬಲಗೊಂಡಿರುತ್ತವೆ. ಇದರಿಂದ ಆತ ವಾಹನ ಚಲಾಯಿಸಲು ಅನರ್ಹನಾಗಿರುತ್ತಾನೆ. ಆದರೆ ಪಾಲಿಸಿಯ ಅಡಿಯಲ್ಲಿ ಹೊಣೆಗಾರಿಕೆಯು ಶಾಸನಬದ್ಧವಾಗಿದ್ದು ಕಂಪೆನಿ ಸಂತ್ರಸ್ತನಿಗೆ ಪರಿಹಾರ ನೀಡುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಅಪಘಾತ ಉಂಟು ಮಾಡಿದ ವಾಹನ ವಿಮಾ ಕಂಪೆನಿಯೊಂದಿಗೆ (ಪ್ರಕರಣದಲ್ಲಿ ಪ್ರತಿವಾದಿ) ಅಧಿಕೃತವಾಗಿ ವಿಮೆ ಮಾಡಿಸಿದ್ದು ಪರಿಹಾರ ಬಯಸಿದವರು (ಮೇಲ್ಮನವಿದಾರ) ಮೂರನೇ ಪಾರ್ಟಿಯಾಗಿರುವುದರಿಂದ ಕಂಪೆನಿಯು ಮೊದಲಿಗೆ ಅವರಿಗೆ ಪರಿಹಾರ ನೀಡಲು ಬಾಧ್ಯಸ್ಥನಾಗಿರುತ್ತದೆ. ಆದರೆ, ಕಂಪೆನಿಯು ಬಳಿಕ ಚಾಲಕ ಮತ್ತು ಮಾಲೀಕರಿಂದ (ಪ್ರಕರಣದಲ್ಲಿ 1 ಮತ್ತು 2 ನೇ ಪ್ರತಿವಾದಿಗಳು) ಅದನ್ನು ವಸೂಲಿ ಮಾಡಲು ಅದು ಅರ್ಹವಾಗಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ನೀಡಿದ ಪರಿಹಾರ ಅಸಮರ್ಪಕವಾಗಿದೆ ಎಂದು ಆಕ್ಷೇಪಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಪೀಠ ಈ ತೀರ್ಪು ನೀಡಿತು. ಮೇಲ್ಮನವಿದಾರರು 2013ರಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಆಗ ಮೊದಲ ಪ್ರತಿವಾದಿ ಚಲಾಯಿಸುತ್ತಿದ್ದ ಕಾರು ಆಟೋಗೆ ಡಿಕ್ಕಿ ಹೊಡೆದು ಮೇಲ್ಮನವಿದಾರ ಅಪಘಾತಕ್ಕೀಡಾಗಿದ್ದರು. ವೃತ್ತಿಯಲ್ಲಿ ಚಾಲಕರಾಗಿದ್ದ ಅವರು ತಿಂಗಳಿಗೆ ₹ 12,000 ಆದಾಯ ಗಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ₹ 4 ಲಕ್ಷ ಪರಿಹಾರ ಕೋರಿ ನ್ಯಾಯಮಂಡಳಿಯನ್ನು ಸಂಪರ್ಕಿಸಿದರು. ಆದರೆ ನ್ಯಾಯಮಂಡಳಿ ₹ 2.4 ಲಕ್ಷ ಮಾತ್ರ ನೀಡಿತು. ಹೀಗಾಗಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಮಾ ಸಂಸ್ಥೆಯು ಕಾರು ಚಾಲಕ ಪಾನಮತ್ತನಾಗಿ ಚಾಲನೆ ಮಾಡಿ ಅಪಘಾತ ಉಂಟಾಗಿರುವುದರಿಂದ ಪರಿಹಾರ ನೀಡಲು ನಿರಾಕರಿಸಿತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಮೂಲ ಪರಿಹಾರದ ಜೊತೆಗೆ ಆದಾಯ ಗಳಿಕೆಯಲ್ಲಿ ನಷ್ಟ ಉಂಟಾಗಿದ್ದಕ್ಕೆ ₹39,000 ಪ್ರತ್ಯೇಕ ಪರಿಹಾರವನ್ನು ಶೇ 7ರಷ್ಟು ಬಡ್ಡಿಯೊಂದಿಗೆ ಮೇಲ್ಮನವಿದಾರನ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ವಿಮಾ ಕಂಪೆನಿಗೆ ನಿರ್ದೇಶಿಸಿದೆ. ಈ ಠೇವಣಿ ಮೊತ್ತವನ್ನು ಕಾರಿನ ಚಾಲಕ ಮತ್ತು ಮಾಲೀಕರಿಂದ ವಸೂಲಿ ಮಾಡುವಂತೆ ಅದು ಹೇಳಿದೆ.