Justice MR Shah and Justice CT Ravikumar
Justice MR Shah and Justice CT Ravikumar 
ಸುದ್ದಿಗಳು

ಸ್ವತ್ತು ದುರಸ್ತಿಯಾಗದಿದ್ದರೆ ಅದು ಸುಸ್ಥಿತಿಯಲ್ಲಿದ್ದಾಗಿನ ಮೌಲ್ಯ ಪಾವತಿಸಬೇಕಾದದ್ದು ವಿಮಾ ಕಂಪೆನಿ ಹೊಣೆ: ಸುಪ್ರೀಂ

Bar & Bench

ಹಾನಿ ಅಥವಾ ನಾಶಗೊಂಡ ಸ್ವತ್ತನ್ನು ಹಿಂದಿನ ಸ್ಥಿತಿಗೆ ತರಲು ಅಥವಾ ಬದಲಿಸಲು ಸಾಧ್ಯವಾಗದಿದ್ದರೆ ವಿಮೆ ಮಾಡಿಸಿದ್ದ ಆಸ್ತಿ, ಸುಸ್ಥಿತಿಯಲ್ಲಿದ್ದಾಗಿನ ಮೌಲ್ಯದಷ್ಟು ಹಣ ಪಾವತಿಸುವ ಹೊಣೆ ವಿಮಾ ಕಂಪೆನಿಯದ್ದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. [ಓಸ್ವಾಲ್‌ ಪ್ಲಾಸ್ಟಿಕ್‌ ಇಂಡಸ್ಟ್ರೀಸ್‌ ಮತ್ತು ಎನ್‌ಎಐಸಿಒ ಲಿಮಿಟೆಡ್‌ನ ಕಾನೂನು ವಿಭಾಗದ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ವಿಭಾಗೀಯ ಪೀಠ  ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ತೀರ್ಪನ್ನು ಪ್ರಶ್ನಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು. ವಿಮಾ ಕಂಪನಿ ₹ 29.17 ಲಕ್ಷದಷ್ಟು ಸುಸ್ಥಿತಿಯಲ್ಲಿದ್ದಾಗಿನ ಮೌಲ್ಯದ ಬದಲು ಕೇವಲ ₹ 12.6 ಲಕ್ಷದಷ್ಟು- ಹಾನಿಗೊಳಗಾದಾಗಿನ ಮೌಲ್ಯವನ್ನು ಪಾವತಿಸಬಹುದು ಎಂದು ಆಯೋಗ ತೀರ್ಪು ನೀಡಿತ್ತು.

ಅರ್ಜಿಯಲ್ಲಿ ತಿಳಿಸಿರುವಂತೆ ಮೇಲ್ಮನವಿ ಸಲ್ಲಿಸಿರುವ ಕಂಪೆನಿಯಾದ ಓಸ್ವಾಲ್‌ ಪ್ಲಾಸ್ಟಿಕ್‌ ಇಂಡಸ್ಟ್ರೀಸ್‌ ಜುಲೈ 2, 2009ರಿಂದ ಜಾರಿಗೆ ಬರುವಂತೆ ಅಗ್ನಿ ಅವಘಡ ವಿಮೆ ಮಾಡಿಸಿತ್ತು. ಅಕ್ಟೋಬರ್ 17, 2009ರಂದು ಕಂಪೆನಿಯ ಕಾರ್ಖಾನೆ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡು ₹ 76.64 ಲಕ್ಷ ಮೌಲ್ಯದ ಅನೇಕ ವಸ್ತುಗಳು, ದಾಸ್ತಾನು ಹಾಗೂ ಯಂತ್ರೋಪಕರಣಗಳು ಸುಟ್ಟು ಹೋಗಿದ್ದವು.

ವಿಮಾ ಕಂಪೆನಿ ನೇಮಿಸಿದ್ದ ಸರ್ವೇಯರ್‌ ಒಟ್ಟು ಸ್ವತ್ತಿನ ಹಿಂದಿನ ಮೌಲ್ಯ ₹ 29.17 ಲಕ್ಷ ಆಗಲಿದ್ದು ಅವಘಡದಿಂದಾಗಿ ₹ 12.6 ಲಕ್ಷ ನಷ್ಟ ಉಂಟಾಗಿದೆ ಎಂದು ವರದಿ ಸಲ್ಲಿಸಿದ್ದರು. ವರದಿಯ ಹೊರತಾಗಿಯೂ ವಿಮಾ ಕಂಪೆನಿ ಪರಿಹಾರ ನೀಡಲು ನಿರಾಕರಿಸಿತ್ತು. ಇದರಿಂದ ಅತೃಪ್ತರಾದ ಮೇಲ್ಮನವಿದಾರ ಕಂಪೆನಿ ನಷ್ಟವಾಗಿರುವ ₹76.64 ಲಕ್ಷದಷ್ಟು ಪರಿಹಾರ ದೊರಕಿಸಿಕೊಡಬೇಕೆಂದು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ-  ಎಸ್‌ಸಿಡಿಆರ್‌ಸಿಗೆ ಮನವಿ ಮಾಡಿದರು. ಆದರೆ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 29.17 ಲಕ್ಷ ಮೊತ್ತವನ್ನು ಶೇ 9ರಷ್ಟು ಬಡ್ಡಿಯೊಂದಿಗೆ ಪಾವತಿಸುವಂತೆ ವಿಮಾ ಕಂಪೆನಿಗೆ ಸೂಚಿಸಿತು.

ಇದನ್ನು ಪ್ರಶ್ನಿಸಿ ವಿಮಾ ಕಂಪೆನಿ, ಎನ್‌ಸಿಡಿಆರ್‌ಸಿಗೆ ಮೇಲ್ಮನವಿ ಸಲ್ಲಿಸಿತು. ಮನವಿ ಪುರಸ್ಕರಿಸಿದ ಆಯೋಗ ರಾಜ್ಯ ಆಯೋಗ ನೀಡಿದ್ದ ಆದೇಶದಲ್ಲಿ ಮಾರ್ಪಾಡು ಮಾಡಿತು. ವಿಮಾ ಕಂಪೆನಿ ₹ 29.17 ಲಕ್ಷದಷ್ಟು ಸುಸ್ಥಿತಿಯಲ್ಲಿದ್ದಾಗಿನ ಮೌಲ್ಯದ ಬದಲು ಕೇವಲ ₹ 12.6 ಲಕ್ಷದಷ್ಟು ಹಾನಿಗೊಳಗಾದಾಗಿನ ಮೌಲ್ಯವನ್ನು ಪಾವತಿಸಬಹುದು ಎಂದು ತೀರ್ಪು ನೀಡಿತು. ಇದನ್ನು ಪ್ರಶ್ನಿಸಿ ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.

ವಿಮಾ ಪಾಲಿಸಿಯ ನಿಜವಾದ ವ್ಯಾಖ್ಯಾನದ ಪ್ರಕಾರ, ವಿಮಾ ಕಂಪನಿಗೆ ಎರಡು ಆಯ್ಕೆಗಳಿವೆ: ಮೊದಲನೆಯದಾಗಿ, ನಷ್ಟ ಅಥವಾ ಹಾನಿಯ ಮೊತ್ತ ಪಾವತಿಸುವ ಬದಲು ಹಾನಿಗೊಳಗಾದ ಅಥವಾ ನಾಶವಾದ ಸ್ವತ್ತನ್ನು ಮೊದಲಿನ ಸ್ಥಿತಿಗೆ ತರಬಹುದು ಇಲ್ಲವೇ ಬದಲಿಸಬಹುದು. ಎರಡನೆಯದಾಗಿ ನಷ್ಟ ಅಥವಾ ಹಾನಿಯ ಮೊತ್ತ ಪಾವತಿಸುವುದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು. ಆ ಮೂಲಕ ರಾಜ್ಯ ಆಯೋಗ ನೀಡಿದ್ದ ತೀರ್ಪನ್ನು ಮತ್ತೆ ಜಾರಿಗೆ ತಂದಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Ms_Oswal_Plastic_Industries_v__Manager__Legal_Deptt_NAICO_Ltd.pdf
Preview