Justice Prathiba M. Singh
Justice Prathiba M. Singh 
ಸುದ್ದಿಗಳು

ವಿಮಾ ಪಾಲಿಸಿ ಮಾನಸಿಕ ಅಸ್ವಸ್ಥತೆ ಒಳಗೊಳ್ಳಬೇಕು, ದೈಹಿಕ-ಮಾನಸಿಕ ಕಾಯಿಲೆ ನಡುವೆ ತಾರತಮ್ಯ ಸಲ್ಲ: ದೆಹಲಿ ಹೈಕೋರ್ಟ್‌

Bar & Bench

ವಿಮಾ ಪಾಲಿಸಿಗಳು ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳ ಆಧಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗದು ಎಂದು ದೆಹಲಿ ಹೈಕೋರ್ಟ್‌ ಆದೇಶಿಸಿದೆ (ಶಿಖಾ ನಿಶ್ಚಲ್‌ ವರ್ಸಸ್‌ ಎನ್‌ಐಸಿಎಲ್‌).

“ಎಲ್ಲಾ ವಿಮಾ ಕಂಪೆನಿಗಳು ಮಾನಸಿಕ ಆರೋಗ್ಯ ಕಾಯಿದೆ 2017ರ (ಎಂಎಚ್‌ಎ-2017) ಸೆಕ್ಷನ್‌ 21(4) ಜಾರಿಗೆ ಬಂದ 2018ರ ಮೇ 29ರಿಂದಲೇ ಅನುಷ್ಠಾನದ ಹೊಣೆಗಾರಿಕೆ ಪ್ರದರ್ಶನ ಮಾಡಬೇಕಿದೆ. ಯಾವುದೇ ರೀತಿಯ ತಾರತಮ್ಯ ಮಾಡದೇ ಮಾನಸಿಕ ಅಸ್ವಸ್ಥತೆಯನ್ನು ವಿಮಾ ಯೋಜನೆಯ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕಿದೆ” ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ನೇತೃತ್ವದ ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ಮಾನಸಿಕ ಅಸ್ವಸ್ಥತೆಗೆ ವಿಮೆ ದೊರೆಯುವುದರ ಮಹತ್ವವನ್ನು ಒತ್ತಿ ಹೇಳಿರುವ ನ್ಯಾಯಾಲಯವು,

“… ಮಾನಸಿಕ ಕಾಯಿಲೆಗಳು ಮನುಷ್ಯನನ್ನು ದುರ್ಬಲಗೊಳಿಸುವ ಮತ್ತು ವಿನಾಶಕಾರಿ ಸ್ವರೂಪದವಾಗಿರಬಹುದು. ಇತ್ತೀಚಿನ ಸಾಂಕ್ರಾಮಿಕತೆಯು ಸಹ ಇದನ್ನು ಅನುಮಾನರಹಿತವಾಗಿ ಎತ್ತಿ ತೋರಿದೆ. ರೋಗಿಗಳ ಪ್ರತ್ಯೇಕವಾಸ, ಆರೋಗ್ಯವಂತರು ಲಾಕ್‌ಡೌನ್‌ಗೆ ಒಳಗಾಗುತ್ತಿರುವುದು, ಮನೆಯಿಂದಲೇ ಕೆಲಸ ಮಾಡಬೇಕಿರುವ ಒತ್ತಡ, ಉದ್ಯೋಗ ಕಳೆದುಕೊಂಡಿರುವವರು ಆತ್ಮವಿಶ್ವಾಸ ಕಳೆದುಕೊಂಡು ಹಲವು ರೀತಿಯ ಮಾನಸಿಕ ಉದ್ವೇಗಕ್ಕೆ ಒಳಗಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂಥ ಮಾನಸಿಕ ಸ್ಥಿತಿಗೆ ತಕ್ಷಣ ಚಿಕಿತ್ಸೆ ನೀಡಬೇಕಿದೆ. ಹೀಗಾಗಿ ಮಾನಸಿಕ ಅಸ್ವಸ್ಥತೆಗೆ ವಿಮೆ ಸೌಲಭ್ಯ ಪಡೆಯುವುದು ಮುಖ್ಯವಷ್ಟೇ ಅಲ್ಲ ಅತ್ಯಂತ ಅಗತ್ಯ” ಎಂದು ಪೀಠ ಹೇಳಿದೆ.

ಮಾನಸಿಕ ಆರೋಗ್ಯ ಕಾಯಿದೆ 2017 ಅನ್ನು ಎಲ್ಲಾ ವಿಮಾ ಕಂಪೆನಿಗಳು ಜಾರಿಗೊಳಿಸುವ ಸಂಬಂಧ ಕ್ರಮಕೈಗೊಳ್ಳುವುದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸದರಿ ಪ್ರಕರಣದಲ್ಲಿ ಅರ್ಜಿದಾರರು ಇಚ್ಛಿತ್ತ ವಿಕಲತೆ ಮತ್ತು ಭಾವನೆಗಳ ಏರಿಳಿತದಿಂದ ಬಳಲುತ್ತಿದ್ದು (ಸ್ಕಿಝೋಅಫೆಕ್ಟಿವ್ ಡಿಸಾರ್ಡರ್), ಚಿಕಿತ್ಸೆಗೆ ವ್ಯಯಿಸಿದ ಹಣ ಪಡೆಯಲು ಮುಂದಾಗಿದ್ದರು. ರಾಷ್ಟ್ರೀಯ ವಿಮಾ ಕಂಪೆನಿ ಲಿಮಿಟೆಡ್‌ (ಎನ್‌ಐಸಿಎಲ್)‌ ಮಾನಸಿಕ ಅಸ್ವಸ್ಥತೆಯನ್ನು ವಿಮಾ ಪಾಲಿಸಿ ಒಳಗೊಂಡಿಲ್ಲ ಎಂದು ಅರ್ಜಿದಾರರ ಕ್ಲೇಮನ್ನು ಕಂಪೆನಿ ವಜಾಗೊಳಿಸಿತ್ತು. ವಿಮಾ ಓಂಬುಡ್ಸ್‌ಮನ್‌ (ಸ್ವತಂತ್ರ ತನಿಖಾಧಿಕಾರಿ) ಸಹ ಕ್ಲೇಮನ್ನು ನಿರಾಕರಿಸಿದ್ದರು. ಇದನ್ನು ಒಪ್ಪದ ಅರ್ಜಿದಾರರು ಮಾನಸಿಕ ಅಸ್ವಸ್ಥತೆ ಕಾಯಿದೆ ಅಡಿ ನಿರಾಕರಣೆಯನ್ನು ಪ್ರಶ್ನಿಸಿದ್ದರು.

“ಎಂಎಚ್‌ಎ 2017 ಅನ್ನು ಎರಡು ವರ್ಷಗಳಾದರೂ ಜಾರಿಗೊಳಿಸದಿರುವುದು ಸರಿಯಾದ ಕ್ರಮವಲ್ಲ ಎಂಬುದು ಮೂಲಭೂತ ವಿಚಾರವಾಗಿದೆ. 2016ರ ಮಾರ್ಗಸೂಚಿಗಳ ಆಧಾರದಲ್ಲಿ ಎಂಎಚ್‌ಎ 2017ರ ಸೆಕ್ಷನ್‌ 21(4) ಜಾರಿ ಮುಂದೂಡುವುದು ಮಾರ್ಗಸೂಚಿಯನ್ನು ತಪ್ಪಾಗಿ ವ್ಯಾಖ್ಯಾನಿಸುವ ರೀತಿಯಾಗಿದೆ. ಕಾನೂನು ಜಾರಿಗೆ ಬಂದ ನಂತರ, ಅದರ ನಂತರ ಹೊರಡಿಸಲಾದ ಎಲ್ಲಾ ಪಾಲಿಸಿಗಳಿಗೆ ಸಂಬಂಧಿಸಿದಂತೆ, ನಿಬಂಧನೆಗಳನ್ನು ಎನ್‌ಐಸಿಎಲ್ ಮತ್ತು ಇತರ ಎಲ್ಲ ವಿಮಾ ಕಂಪನಿಗಳು ಜಾರಿಗೆ ತರಬೇಕಾಗಿತ್ತು” ಎಂದು ನ್ಯಾಯಾಲಯ ಹೇಳಿದೆ.

“ಎಂಎಚ್‌ಎ 2017 ಅರ್ಜಿದಾರರ ಹಕ್ಕುಗಳನ್ನು ಗುರುತಿಸಿದೆ ಎನ್ನುವುದನ್ನು ಪರಿಗಣಿಸಲು ವಿಮೆ ಓಂಬುಡ್ಸ್‌ಮನ್‌ ವಿಫಲರಾಗಿದ್ದು ಅವರ ತೀರ್ಮಾನವು ಕಾನೂನಿಗೆ ವಿರುದ್ಧವಾಗಿದೆ. ಎಂಎಚ್‌ಎ 2017ರ ನಿಬಂಧನೆಗಳು ಪ್ರಸ್ತುತವಲ್ಲ ಎನ್ನುವ ಅವರ ತೀರ್ಮಾನವು ಕಾನೂನಿಗೆ ವಿರುದ್ಧವಾಗಿದ್ದು, ಅಸಮರ್ಥನೀಯವಾಗಿದೆ. ಸ್ಕಿಜೋಆಫೆಕ್ಟಿವ್ ಡಿಸಾರ್ಡರ್‌ನಿಂದ ಬಳಲುತ್ತಿದ್ದ ವ್ಯಕ್ತಿಗೆ ಎಂಎಚ್‌ಎ 2017 ಮತ್ತು ಅದರ ನಿಬಂಧನೆಗಳು ಸಂಪೂರ್ಣವಾಗಿ ಅನ್ವಯಿಸುತ್ತವೆ. ಹೀಗಾಗಿ, ಅರ್ಜಿದಾರರು ಎಂಎಚ್‌ಎ 2017ರ ನಿಬಂಧನೆಗಳ ಪ್ರಕಾರ ತನ್ನ ಕ್ಲೇಮನ್ನು ಮರುಪಾವತಿ ಪಡೆಯಲು ಅರ್ಹರಾಗಿದ್ದಾರೆ” ಎಂದು ಆದೇಶಿಸಿದೆ. ಅರ್ಜಿದಾರರು ಮೊಕದ್ದಮೆ ಹೂಡುವಂತೆ ಮಾಡಿದ ಎನ್‌ಐಸಿಎಲ್‌ಗೆ 25 ಸಾವಿರ ರೂಪಾಯಿಯನ್ನು ಆಕೆಯ ವೆಚ್ಚವಾಗಿ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.