Lawyers 
ಸುದ್ದಿಗಳು

ರಾಜ್ಯದ ವಕೀಲರಿಗೆ ವಿಮೆ ಯೋಜನೆ: ಮೂಲ ನಿಧಿ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ನೀಡಿದ ರಾಜ್ಯ ಸರ್ಕಾರ

ವಿಮೆ ಯೋಜನೆ ಮೂಲ ನಿಧಿ ಸ್ಥಾಪಿಸಲು ಸರ್ಕಾರವು ಶೇ. 50ರಷ್ಟು ಮೊತ್ತ ನೀಡಲಿದೆ. ಉಳಿದ ಮೊತ್ತವನ್ನು ವಕೀಲರುಗಳ ಕೊಡುಗೆಯಿಂದ ಸಂಗ್ರಹಿಸಿ, ಕೆಎಸ್‌ಬಿಸಿ ಸದರಿ ನಿಧಿಯನ್ನು ನಿರ್ವಹಿಸಲು ನಿಯಮ ರಚಿಸಬೇಕು ಎಂದು ಹಣಕಾಸು ಇಲಾಖೆ ಹೇಳಿತ್ತು.

Bar & Bench

ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು ಅನುವಾಗುವಂತೆ 100 ಕೋಟಿ ರೂಪಾಯಿ ಮೂಲನಿಧಿ ಸ್ಥಾಪಿಸಲು ರಾಜ್ಯ ಸರ್ಕಾರದ ವತಿಯಿಂದ ನೆರವು ನೀಡುವ ಯೋಜನೆಗೆ ಈಚೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ.

ಮೂಲ ನಿಧಿಯನ್ನು ನಿರ್ವಹಿಸಲು ನಿಯಮ ರಚಿಸಿ, ಪೂರ್ಣ ಪ್ರಮಾಣದ ಪ್ರಸ್ತಾವಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯುವ ಷರತ್ತಿಗೆ ಒಳಪಟ್ಟು ಯೋಜನೆ ಜಾರಿಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿದೆ ಎಂದು ಕಾನೂನು ಇಲಾಖೆಯ ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿ ಆದಿನಾರಾಯಣ ಸಹಿ ಮಾಡಿರುವ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು ಅನುವಾಗುವಂತೆ ಮೂಲನಿಧಿ ಸ್ಥಾಪಿಸಲು ನೆರವು ನೀಡಲಾಗುವುದು ಎಂದು ಘೋಷಿಸಿದ್ದರು. ಇದಕ್ಕೆ ಅನುಗುಣವಾಗಿ ಮೂಲ ನಿಧಿ ಸ್ಥಾಪಿಸಲು ಸರ್ಕಾರವು ಶೇ. 50ರಷ್ಟು ಮೊತ್ತ ನೀಡಲಿದೆ. ಉಳಿದ ಮೊತ್ತವನ್ನು ವಕೀಲರುಗಳ ಕೊಡುಗೆಯಿಂದ ಸಂಗ್ರಹಿಸಿ, ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಸದರಿ ನಿಧಿಯನ್ನು ನಿರ್ವಹಿಸಲು ನಿಯಮ ರಚಿಸಬೇಕು ಎಂದು ಹೇಳಿ ಹಣಕಾಸು ಇಲಾಖೆಯು ಜೂನ್‌ 21ರಂದು ಹೇಳಿತ್ತು.

ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಮೂಲನಿಧಿ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಘೋಷಣೆ ಮಾಡಿದೆ. ಹೀಗಾಗಿ, ಸದರಿ ಯೋಜನೆಯನ್ನು ಜಾರಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ 18-35, 36-45, 46-50, 51-55, 55-60, 61-65, 66-70, 71-75, 76-80, 81-85 ನಡುವಿನ ವಕೀಲರ ವಯೋಮಾನ ಪಟ್ಟಿ ಮಾಹಿತಿಯನ್ನು ತುರ್ತಾಗಿ ಸಲ್ಲಿಸುವಂತೆ ಕೆಎಸ್‌ಬಿಸಿ ಅಧ್ಯಕ್ಷರಿಗೆ ಮಾರ್ಚ್‌ 24ರಲ್ಲಿ ಬರೆದಿರುವ ಪತ್ರದಲ್ಲಿ ಕಾನೂನು ಇಲಾಖೆ ಉಲ್ಲೇಖಿಸಿತ್ತು.