ವಕೀಲರಿಗೆ ವಿಮೆ: 18ರಿಂದ 85 ವರ್ಷದ ಒಳಗಿನ ವಕೀಲರ ವಯೋಸಮೂಹ ಪಟ್ಟಿ ಸಲ್ಲಿಸಲು ಕೆಎಸ್‌ಬಿಸಿಗೆ ಕಾನೂನು ಇಲಾಖೆ ನಿರ್ದೇಶನ

ಕಳೆದ ವರ್ಷದ ಮಾರ್ಚ್‌ 3ರಂದು ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ ವಕೀಲರ ಅನುಕೂಲಕ್ಕಾಗಿ ದೆಹಲಿ ಸರ್ಕಾರ 2020ರಲ್ಲಿ ಜಾರಿಗೊಳಿಸಿರುವಂತೆ ರಾಜ್ಯ ಸರ್ಕಾರವೂ ವಿಮಾ ಯೋಜನೆ ರೂಪಿಸಬಹುದೇ ಎಂದು ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿತ್ತು.
Lawyers
Lawyers

ದೆಹಲಿ ಸರ್ಕಾರವು ವಕೀಲರಿಗೆ ವಿಮಾ ಯೋಜನೆ ಜಾರಿಗೆ ತಂದಿರುವಂತೆ ರಾಜ್ಯದ ವಕೀಲರುಗಳನ್ನೂ ಆ ಯೋಜನೆ ವ್ಯಾಪ್ತಿಗೆ ತರುವ ಉದ್ದೇಶದಿಂದ ವಿಮಾ ಕಂತನ್ನು ನಿಗದಿಪಡಿಸುವುದಕ್ಕಾಗಿ 18ರಿಂದ 85 ವರ್ಷದ ಒಳಗಿನ ವಕೀಲರ ವಯೋಸಮೂಹ ಪಟ್ಟಿ (ಏಜ್‌ಬ್ಯಾಂಡ್‌) ಸಲ್ಲಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಈಚೆಗೆ ನಿರ್ದೇಶಿಸಿದ್ದಾರೆ.

ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಮೂಲನಿಧಿ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಘೋಷಣೆ ಮಾಡಿದೆ. ಹೀಗಾಗಿ, ಸದರಿ ಯೋಜನೆಯನ್ನು ಜಾರಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ 18-35, 36-45, 46-50, 51-55, 55-60, 61-65, 66-70, 71-75, 76-80, 81-85 ನಡುವಿನ ವಕೀಲರ ವಯೋಸಮೂಹ ಪಟ್ಟಿ ಮಾಹಿತಿಯನ್ನು ತುರ್ತಾಗಿ ಸಲ್ಲಿಸುವಂತೆ ಕೆಎಸ್‌ಬಿ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಕಾನೂನು ಇಲಾಖೆ ಉಲ್ಲೇಖಿಸಿದೆ.

ಕೊರೊನಾ ಸಂದರ್ಭದಲ್ಲಿಯೂ ಕೆಲಸ ಮಾಡುತ್ತಿರುವ ವಕೀಲರಿಗೆ ವಿಮೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ 2020ರ ಮಾರ್ಚ್‌ನಲ್ಲಿ ಬರೆದಿದ್ದ ಪತ್ರ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.

ಕಳೆದ ವರ್ಷದ ಮಾರ್ಚ್‌ 3ರಂದು ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ ವಕೀಲರ ಅನುಕೂಲಕ್ಕಾಗಿ ದೆಹಲಿ ಸರ್ಕಾರ 2020ರಲ್ಲಿ ಜಾರಿಗೊಳಿಸಿರುವಂತೆ ರಾಜ್ಯ ಸರ್ಕಾರವೂ ವಿಮಾ ಯೋಜನೆ ರೂಪಿಸಬಹುದೇ ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿತ್ತು.

ಈ ಸಂಬಂಧ ಅಧಿಕಾರಿಗಳು, ವಿವಿಧ ವಕೀಲರ ಪರಿಷತ್‌ಗಳ ಪದಾಧಿಕಾರಿಗಳು, ಭಾರತೀಯ ಜೀವ ವಿಮಾ ಸಂಸ್ಥೆ ಮತ್ತು ನ್ಯೂ ಇಂಡಿಯಾ‌ ಇನ್ಯೂರೆನ್ಸ್‌ ಕಂಪೆನಿಯೂ ಸೇರಿದಂತೆ ನಾಲ್ಕು ಸಾರ್ವಜನಿಕ ವಲಯದ ವಿಮಾ ಕಂಪೆನಿಗಳ ಜೊತೆ ಸಭೆಯೊಂದನ್ನು ಆಯೋಜಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿತ್ತು.

“ಮೇಲೆ ಹೇಳಲಾದ ಯೋಜನೆಯು ರಾಜ್ಯದಾದ್ಯಂತ ಇರುವ ವಕೀಲರ ಸಂಘಗಳ ಅರ್ಹ ಸದಸ್ಯರಿಗೆ ಅನ್ವಯವಾಗುವುದನ್ನು ರಾಜ್ಯ ಸರ್ಕಾರ ಖಾತರಿಪಡಿಸಬೇಕು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. “ದೆಹಲಿ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ರೀತಿಯಲ್ಲಿಯೇ ಭಾರತೀಯ ಜೀವ ವಿಮಾ ಸಂಸ್ಥೆ ಅಥವಾ ಬೇರಾವುದೇ ವಿಮಾ ಕಂಪೆನಿಯ ಜೊತೆಗೂಡಿ ಏನಾದರೂ ಮಾಡಲು ಸಾಧ್ಯವಿದೆಯೇ?” ಎಂದು ನ್ಯಾಯಾಲಯ ಪ್ರಶ್ನಿಸಿತ್ತು.

Also Read
ವಕೀಲರಿಗೆ ವಿಮೆ: ದೆಹಲಿ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಯೋಜನೆ ಜಾರಿಗೊಳಿಸಬಹುದೇ? ಹೈಕೋರ್ಟ್‌ ಪ್ರಶ್ನೆ

ವಕೀಲರಿಗೆ ವಿಮೆ ಕಲ್ಪಿಸುವ ಸಂಬಂಧ ರಚನಾತ್ಮಕ ಯೋಜನೆ ರೂಪಿಸುವ ಕುರಿತು ಕಾನೂನು ವಿಚಾರಗಳ ಇಲಾಖೆಯು ಸಮಿತಿಯನ್ನೇನಾದರೂ ರಚಿಸಿದೆಯೇ ಹಾಗೂ ಆ ಸಮಿತಿಯು ಯಾವುದಾದರೂ ಶಿಫಾರಸ್ಸುಗಳನ್ನು ಮಾಡಿದೆಯೇ ಎಂಬ ಕುರಿತು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಇದೇ ವೇಳೆ ಸೂಚಿಸಿತ್ತು.

ಹೈಕೋರ್ಟ್‌ ಆದೇಶದನ್ವಯ ಕಳೆದ ವರ್ಷದ ಜೂನ್‌ 18ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ರಂಗನಾಥ್‌ ಅವರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್- ಆಯುಷ್ಮಾನ್ ಭಾರತ್ ಮತ್ತು ಟೈಲರ್ ಮೇಡ್ ಫ್ಲೋಟರ್ ಗ್ರೂಪ್ ಮೆಡಿಕ್ಲೈಮ್ ಪಾಲಿಸಿ ಮತ್ತು ನ್ಯೂ ಇಂಡಿಯಾ ಫ್ಲೆಕ್ಸಿ ಗ್ರೂಪ್ ಮೆಡಿಕ್ಲೈಮ್ ಪಾಲಿಸಿ ಒದಗಿಸಿದ ಯೋಜನೆಗಳ ಬಗ್ಗೆ ತುಲನಾತ್ಮಕ ವಿವರಣೆ ನೀಡಿದ್ದರು. ಅಲ್ಲದೆ, ದೆಹಲಿ ಸರ್ಕಾರ ವಕೀಲರಿಗೆ ಒದಗಿಸಿದ ಯೋಜನೆಯ ಬಗ್ಗೆ ವಿವರಿಸಿದ್ದರು.

Also Read
ದೆಹಲಿ ಮಾದರಿಯಲ್ಲಿ ವಕೀಲರಿಗೆ ಜೀವವಿಮೆ ಹಾಗೂ ಆರೋಗ್ಯ ವಿಮೆ: ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ

ಪ್ರತಿ ಕುಟುಂಬಕ್ಕೆ ರೂ 10,000 ಪ್ರೀಮಿಯಂ ಮೊತ್ತ ನಿಗದಿಪಡಿಸಲಾಗಿದೆ. ನವದೆಹಲಿಯಲ್ಲಿ ಸುಮಾರು 23,000 ವಕೀಲರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ನೋಂದಾಯಿಸಿಕೊಂಡಿರುವ ಒಟ್ಟು ವಕೀಲರ ಸಂಖ್ಯೆ 1,02,669 ಎಂದು ಅವರು ಮಾಹಿತಿ ನೀಡಿದ್ದನ್ನು ಇಲ್ಲಿ ನೆನೆಯಬಹುದು.

ದೆಹಲಿಯ ವಕೀಲರ ಪರಿಷತ್‌ನ ಸಲಹೆಯ ಮೇರೆಗೆ ದೆಹಲಿ ಸರ್ಕಾರವು ಮುಖ್ಯಮಂತ್ರಿ ವಕೀಲರ ಕಲ್ಯಾಣ ಯೋಜನೆ ಎಂಬ ವಿಮಾ ನೀತಿಯನ್ನು ರೂಪಿಸಿದೆ. ಇದಕ್ಕೆ 2020ರ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್‌ ಒಪ್ಪಿಗೆ ನೀಡಿತ್ತು.

Related Stories

No stories found.
Kannada Bar & Bench
kannada.barandbench.com