Sameer Wankhede with Bombay High Court
Sameer Wankhede with Bombay High Court 
ಸುದ್ದಿಗಳು

ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್‌ ನೀಡುವುದು ಎನ್‌ಸಿಬಿ ತನಿಖಾ ತಂಡದ ಉದ್ದೇಶ: ಸಮೀರ್ ವಾಂಖೆಡೆ ಆರೋಪ

Bar & Bench

ಕೆಲ ವರ್ಷಗಳ ಹಿಂದೆ ಮುಂಬೈನಿಂದ ಗೋವಾಕ್ಕೆ ಹೊರಟಿದ್ದ ಕಾರ್ಡೀಲಿಯಾ ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ವಿಶೇಷ ತನಿಖಾ ತಂಡ (ಎಸ್‌ಇಟಿ) ಬಾಲಿವುಡ್‌ ನಟ ಆರ್ಯನ್‌ ಖಾನ್‌ರನ್ನು ಆರೋಪಮುಕ್ತಗೊಳಿಸಲು ಯತ್ನಿಸುತ್ತಿದೆ ಎಂದು ಎನ್‌ಸಿಬಿಯ ಮಾಜಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಗುರುವಾರ ಬಾಂಬೆ ಹೈಕೋರ್ಟ್‌ನಲ್ಲಿ ಆರೋಪಿಸಿದ್ದಾರೆ.

ತಾನು ಆರಂಭದಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದ ತನಿಖೆ ಬಗ್ಗೆ ಶಂಕೆ ವ್ಯಕ್ತಪಡಿಸುವ ಉದ್ದೇಶ ಎಸ್‌ಇಟಿ ವರದಿಯದ್ದಾಗಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ದೂರಿದ್ದಾರೆ.

ಲಂಚ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ರದ್ದುಗೊಳಿಸುವಂತೆ ಕೋರಿ ವಾಂಖೆಡೆ ಅವರು ಸಲ್ಲಿಸಿದ್ದ ಮನವಿಗೆ ಪೂರಕವಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಅಕ್ಟೋಬರ್ 2, 2021ರಂದು ಮುಂಬೈ- ಗೋವಾ ಐಷಾರಾಮಿ ಹಡಗಿನಲ್ಲಿ ಮಾದಕ ವಸ್ತು ನಿಯಂತ್ರಣ ದಳದ ಶೋಧ ಕಾರ್ಯಾಚರಣೆ ನಡೆದಿತ್ತು. ಬಳಿಕ ವಾಂಖೆಡೆ ನೇತೃತ್ವದ ಎನ್‌ಸಿಬಿ ಮುಂಬೈ ಘಟಕ ಆರ್ಯನ್‌ ವಿರುದ್ಧ ಮಾದಕವಸ್ತು ಪ್ರಕರಣ ದಾಖಲಿಸಿತು. ಇದರೊಂದಿಗೆ ಆರ್ಯನ್‌ ಸೇರಿದಂತೆ 20 ಮಂದಿಯ ಬಂಧನವಾಯಿತು. ಅಕ್ಟೋಬರ್ 28, 2021 ರಂದು ಆರ್ಯನ್‌ ಅವರಿಗೆ ಜಾಮೀನು ದೊರೆಯಿತು. ಅದಾಗಿ ಕೆಲ ತಿಂಗಳುಗಳ ಬಳಿಕ ಆರ್ಯನ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಲಾಯಿತು.  ಬಳಿಕ ತನಿಖೆಯನ್ನು ಎಸ್‌ಇಟಿಗೆ ವರ್ಗಾಯಿಸಲಾಯಿತು.

ಈ ಮಧ್ಯೆ ಆರ್ಯನ್‌ ಅವರನ್ನು ಬಂಧಿಸದೇ ಇರುವುದಕ್ಕೆ ಅವರ ತಂದೆ ಶಾರೂಖ್‌ ಖಾನ್‌ ಅವರಿಗೆ ₹25 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ವಾಂಖೆಡೆ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತು. ಕೆಲ ದಿನಗಳ ಬಳಿಕ ವಾಂಖೆಡೆ ಅವರಿಗೆ ಹೈಕೋರ್ಟ್‌ ಮಧ್ಯಂತರ ರಕ್ಷಣೆ ನೀಡಿತು.

ವಾಂಖೆಡೆ ಅವರ ಮೇಲ್ವಿಚಾರಣೆಯಲ್ಲಿ ನಡೆದ ತನಿಖೆ ಲೋಪದೋಷ ಮತ್ತು ಅಕ್ರಮಗಳಿಂದ ಕೂಡಿದೆ ಎಂದು ಎನ್‌ಸಿಬಿ ವಿಶೇಷ ತನಿಖಾ ತಂಡ ಗಮನ ಸೆಳೆದಿತ್ತು. ಈ ಆಧಾರದಲ್ಲಿ ತಾನು ಎಫ್‌ಐಆರ್‌ ದಾಖಲಿಸಿದ್ದಾಗಿ ಸಿಬಿಐ ತಿಳಿಸಿತ್ತು.