A1
ಸುದ್ದಿಗಳು

ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪ, ಚುನಾವಣೆಯನ್ನು ಮುಂದೂಡುವಂತಿರಬಾರದು: ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಾರ್ಡ್‌ಗಳನ್ನು ರಚಿಸುವ ಕುರಿತ ಅಧಿಸೂಚನೆಗಳನ್ನು ಬದಿಗೆ ಸರಿಸುವಂತೆ ಕೋರಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ರಾಜ್ಯ ಚುನಾವಣಾ ಆಯೋಗ ವಾರ್ಡ್‌ಗಳನ್ನು ರೂಪಿಸಿರುವ ವಿಧಾನವನ್ನು ಕೆಲ ಅತೃಪ್ತ ಧ್ವನಿಗಳು ಆಕ್ಷೇಪಿಸಿರುವ ಮಾತ್ರಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ತಾನು ತಡೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ. [ಅನಂತ್ ಬಾಬುರಾವ್ ಗೋಲೈಟ್ ಮತ್ತು ಮಹಾರಾಷ್ಟ್ರ ಚುನಾವಣಾ ಆಯೋಗ ಇನ್ನಿತರರ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ವಿವಿಧ ತೀರ್ಪುಗಳನ್ನು ಆಧರಿಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಆರ್ ವಿ ಘುಗೆ ಅವರಿದ್ದ ಪೀಠ ಚುನಾವಣಾ ಪ್ರಕ್ರಿಯೆ ಮತ್ತು ಅದರ ಪ್ರಗತಿಯನ್ನು ಸುಲಭಗೊಳಿಸಲು ಅನುವಾಗುವಂತೆ ರಿಟ್ ನ್ಯಾಯಾಲಯಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿತು. ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪ ಚುನಾವಣೆಯನ್ನು ಪೂರ್ಣಗೊಳಿಸಲು ಅನುಕೂಲಕರವಾಗಿರಬೇಕೇ ವಿನಾ ಅದನ್ನು ಮುಂದೂಡಬಾರದು ಎಂದು ತಿಳಿಸಿತು.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಾರ್ಡ್‌ಗಳನ್ನು ರಚಿಸುವ ಕುರಿತ ಅಧಿಸೂಚನೆಗಳನ್ನು ಬದಿಗೆ ಸರಿಸುವಂತೆ ಕೋರಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ವೇಳೆ ಈ ಕೆಳಗಿನ ಅಂಶಗಳನ್ನು ಆಧರಿಸಿ ಚುನಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು:

  1. ಮಹಾರಾಷ್ಟ್ರ ಮುನ್ಸಿಪಲ್ ಕೌನ್ಸಿಲ್‌ಗಳು, ನಗರ ಪಂಚಾಯತ್‌ಗಳು ಮತ್ತು ಕೈಗಾರಿಕಾ ಟೌನ್‌ಶಿಪ್ ಕಾಯಿದೆಯ ಸೆಕ್ಷನ್ 21ರ ಪ್ರಕಾರ, ಅರ್ಜಿದಾರರು ಆಯಾ ಜಿಲ್ಲಾ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಅವರು ಪರಿಹಾರ ಕೋರಬಹುದು.

  2. ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಆದೇಶಗಳನ್ನು ರವಾನಿಸಲು ಅಥವಾ ನಿರ್ದೇಶನಗಳನ್ನು ನೀಡಲು ನಿರಾಕರಿಸುವ ಮೂಲಕ ಅನಿವಾರ್ಯವಾಗಿ ಚುನಾವಣೆಗಳನ್ನು ಅನಿರ್ದಿಷ್ಟವಾಗಿ ಮುಂದೂಡುವ ಅಧಿಕಾರ ಚಲಾಯಿಸುವಾಗ ಹೈಕೋರ್ಟ್‌ಗಳು ತಮ್ಮ ಮೇಲೆ ಸ್ವಯಂ ಹೇರಿದ ಮಿತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಸುಪ್ರೀಂ ಕೋರ್ಟ್‌ಸೂಚಿಸಿದೆ.

  3. ಸುರೇಶ್ ಮಹಾಜನ್ ಮತ್ತು ಮಧ್ಯಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಸಾಂವಿಧಾನಿಕ ಬಾಧ್ಯತೆ ಮಾತ್ರವಲ್ಲ ಅದು ಸಾಂವಿಧಾನಿಕ ನ್ಯಾಯಾಲಯಗಳು ಸೇರಿದಂತೆ ರಾಜ್ಯ ಸರ್ಕಾರದ ಹೊಣೆಗಾರಿಕೆಯೂ ಆಗಿದೆ. ಅಂತಹ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವಿಳಂಬ ಮಾಡುವುದು ಸಾಧ್ಯವಿಲ್ಲ

ಹಾಗಾಗಿ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದ ನ್ಯಾಯಾಲಯ ಅರ್ಜಿಗಳನ್ನು ವಜಾಗೊಳಿಸಿತು.