Actor Upendra and Karnataka HC
Actor Upendra and Karnataka HC 
ಸುದ್ದಿಗಳು

ನಟ ಉಪೇಂದ್ರ ವಿರುದ್ಧದ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣಕ್ಕೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

Bar & Bench

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯವರಿಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ಅವರ ವಿರುದ್ಧ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ನೀಡಿರುವ ದೂರು ಆಧರಿಸಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್‌ 3(1)(ಆರ್‌)(ಎಸ್‌) ಅಡಿ ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬಿ ಎಂ ಉಪೇಂದ್ರ ಕುಮಾರ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ನೇತೃತ್ವದ ಪೀಠವು ಈ ಆದೇಶ ಮಾಡಿದೆ.

“ಉಪೇಂದ್ರ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಹಾಯಕ ಪೊಲೀಸ್‌ ಆಯುಕ್ತರು ನೀಡಿದ್ದ ನೋಟಿಸ್‌ಗೆ ಮಧ್ಯಂತರ ತಡೆ ವಿಧಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 13ಕ್ಕೆ ಮುಂದೂಡಿದೆ.

ಕನ್ನಡ ನುಡಿಗಟ್ಟು ಬಳಕೆ ಮಾಡಿದ್ದಕ್ಕೆ ತಮ್ಮ ವಿರುದ್ಧ ಸುಳ್ಳು, ಕ್ಷುಲ್ಲಕ ಮತ್ತು ಪ್ರಚಾರದ ಉದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ತಾನು ದಲಿತರು ಅಥವಾ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಅವಮಾನಿಸಿಲ್ಲ. ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಈ ನಿಟ್ಟಿನಿಂದ ಪ್ರಕರಣದ ಮುಂದಿನ ಪ್ರಕ್ರಿಯೆಗೆ ತಡೆ ವಿಧಿಸಬೇಕು ಎಂದು ಮಧ್ಯಂತರ ಕೋರಿಕೆ ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ: ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡುವಾಗ ದಲಿತ ಸಮುದಾಯವನ್ನು ಹೀಗಳೆಯುವ ನುಡಿಗಟ್ಟೊಂದನ್ನು ಬಳಸಿದ್ದರು. ಇದರಿಂದ ದಲಿತ ಸಮುದಾಯದ ಜಾತಿ ಭಾವನೆಗಳಿಗೆ ಘಾಸಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ಅವರ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಕ್ರಮಕೈಗೊಳ್ಳಬೇಕು ಎಂದು ಸಮತಾ ಸೈನಿಕ ದಳದ ಮುಖಂಡರು ಮನವಿ ಮಾಡಿದ್ದರು. ಇದನ್ನು ಪರಿಶೀಲಿಸಿದ್ದು, ಆರೋಪ ಸತ್ಯವಾಗಿದೆ ಎಂದು ದೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಇನ್ನೊಂದಡೆ ಸಾಮಾಜಿಕ ಕಾರ್ಯಕರ್ತ ಭೈರಪ್ಪ ಹರೀಶ್‌ ಕುಮಾರ್‌ ಅವರು ನೀಡಿದ ದೂರಿನ ಅನ್ವಯ ಬೆಂಗಳೂರಿನ ಹಲಸೂರು ಗೇಟ್‌ ಠಾಣೆಯಲ್ಲಿ ಉಪೇಂದ್ರ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ನಿಷೇಧ) ಕಾಯಿದೆ ಹಾಗೂ ಐಪಿಸಿ ಸೆಕ್ಷನ್‌ಗಳಾದ 505 (1)(ಸಿ), 153ಎ, 295ಎ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲಾಗುವುದು ಎಂದು ಉಪೇಂದ್ರ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದರು. ವಕೀಲ ವಿವೇಕ್‌ ಹೊಳ್ಳ ಅವರು ಉಪೇಂದ್ರ ಅವರ ಪರವಾಗಿ ವಕಾಲತ್ತು ಹಾಕಿದ್ದಾರೆ.