ಚಿತ್ರದುರ್ಗದ ಮುರುಘಾ ಮಠದಲ್ಲಿ ಅಡುಗೆ ಸಹಾಯಕಿಯಾಗಿದ್ದ ಮಹಿಳೆಯ ಇಬ್ಬರು ಪುತ್ರಿಯರು ನೀಡಿದ ದೂರಿನ ಮೇರೆಗೆ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣಕ್ಕೆ ತಡೆ ನೀಡಿರುವ ಮಧ್ಯಂತರ ಆದೇಶವೇ ಅಂತಿಮ ಆದೇಶ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ಮೊದಲನೇ ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸ್ವಾಮೀಜಿ ಸೇರಿದಂತೆ ಮೂವರು ಈಚೆಗೆ ಖುಲಾಸೆಯಾಗಿದ್ದಾರೆ.
ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ವಜಾಗೊಳಿಸುವಂತೆ ಕೋರಿ ಡಾ. ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಬೇರೊಂದು ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಅನ್ವಯಿಸಿದ್ದ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ, ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆಯ ವಿವಿಧ ಸೆಕ್ಷನ್, ಸಾಮೂಹಿ ಅತ್ಯಾಚಾರ (ಐಪಿಸಿ ಸೆಕ್ಷನ್ 378DA) ಮತ್ತು ಸಾಕ್ಷ್ಯ ನಾಶ (ಐಪಿಸಿ ಸೆಕ್ಷನ್ 201) ವಜಾಗೊಳಿಸಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಅದರ ಮೇಲೆಯೇ ಮತ್ತೆ ನಡೆಯಲಾಗುತ್ತದೆಯೇ? ಇಷ್ಟೇ ವಿಚಾರ ಸರಳವಾಗಿದೆ. ಅದನ್ನೇ ಮತ್ತೆ ನಡೆಸಬಹುದಾ ಹೇಳಿ. ಈ ಪ್ರಕರಣದ ವಿಚಾರಣೆ ಬಾಕಿ ಇದೆಯೇ” ಎಂದು ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಅವರನ್ನು ಪ್ರಶ್ನಿಸಿತು.
ಆಗ ಶ್ರೀನಿವಾಸ್ ಅವರು “ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆಯು ಕಾಲಮಿತಿಯಲ್ಲಿ ನಡೆಯಲಿ. ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ಶಿವಮೂರ್ತಿ ಮುರುಘಾ ಶರಣರು ಕಸ್ಟಡಿಯಲ್ಲಿರಲಿ” ಎಂದರು.
ಅದಕ್ಕೆ ಪೀಠವು “ಕಸ್ಟಡಿ, ಏಕೆ? ಮುಂಚೆ ಈ ನ್ಯಾಯಾಲಯವು ಶರಣರನ್ನು ಕಸ್ಟಡಿಗೆ ನೀಡಿತ್ತೇ? ಅವರು ಕಸ್ಟಡಿಯಲಿದ್ದಾರೆ ಎಂಬ ತೃಪ್ತಿ ನಿಮಗಾಗಬೇಕೆ?” ಎಂದರು.
ಆಗ ಶ್ರೀನಿವಾಸ್ ಅವರು “ಅಹಂ ನಮಗಿಲ್ಲ” ಎಂದರು. ಅದಕ್ಕೆ ಪೀಠವು “ಮತ್ತೆ, ಬದಿಗೆ ಸೇರಿಸಿರುವ ಆರೋಪಗಳನ್ನು ಅನ್ವಯಿಸುವುದು ಅಸಾಧ್ಯ ಎಂದು ಈಗಾಗಲೇ ಬೇರೆ ಪ್ರಕರಣದಲ್ಲಿ ಹೇಳಲಾಗಿದೆ. ಹೀಗಾಗಿ, ಈ ಪ್ರಕರಣದಲ್ಲಿ ಅದನ್ನು ಸೇರಿಸಿ, ಆರೋಪ ನಿಗದಿ ಮಾಡಲಾಗುತ್ತದೆಯೇ? ಇಷ್ಟೇ ವಿಷಯ ಇಲ್ಲಿರುವುದು” ಎಂದರು.
ಆಗ ಶ್ರೀನಿವಾಸ್ ಅವರು “ಸ್ವಾಮೀಜಿ ಅವರು ಈ ಪ್ರಕರಣದ ಮುಂದುವರಿದ ಭಾಗವಾಗಿ ದೂರುದಾರರು ಮತ್ತು ಕೆಲವು ಸಾಕ್ಷಿಗಳ ವಿರುದ್ಧ ಪ್ರತಿಯಾಗಿ ಪ್ರಕರಣ ದಾಖಲಿಸಿದ್ದಾರೆ. ಆ ಮೂಲಕ ಸಾಕ್ಷಿಗಳನ್ನು ಪ್ರಭಾವಿಸುವ ಸಾಧ್ಯತೆ ಇರುವುದರಿಂದ..” ಎಂದರು. ಅದಕ್ಕೆ ಪೀಠವು ಮತ್ತೊಮ್ಮೆ “ಕೈಬಿಟ್ಟಿರುವ ಆರೋಪಗಳನ್ನು ಸುಪ್ರಿಂ ಕೋರ್ಟ್ ಎತ್ತಿಹಿಡಿದಿದೆ. ಈಗ ಅವುಗಳನ್ನು ಸೇರಿಸುವಂತೆ ನೀವು ಕೇಳುವುದೂ ತಪ್ಪು, ನಾವು ಮಾಡುವುದೂ ತಪ್ಪು” ಎಂದಿತು.
ಸ್ವಾಮೀಜಿ ಪರ ವಕೀಲರಾದ ಎಚ್ ಕೆ ಪವನ್, ಎಸ್ ಹೊನ್ನಪ್ಪ ಮತ್ತು ಪ್ರಸಿದ್ಧ ರಾಜು “ಅತ್ಯಾಚಾರ ಆರೋಪ ಇಲ್ಲಿ ಅನ್ವಯಿಸುವುದಿಲ್ಲ ಎಂಬುದರ ಕುರಿತು ಹಿರಿಯ ವಕೀಲರು ಸ್ಪಷ್ಟನೆ ನೀಡಲಿದ್ದಾರೆ. ಹೀಗಾಗಿ, ವಿಚಾರಣೆ ಮುಂದೂಡಬೇಕು” ಎಂದು ಮನವಿ ಮಾಡಿದರು.
ಈ ನಡುವೆ, ಶ್ರೀನಿವಾಸ್ ಅವರು “ದೂರುದಾರೆಯರು ಮತ್ತು ಕೆಲವು ಸಾಕ್ಷಿಗಳ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಫ್‌ಐಆರ್ ಮತ್ತು ಆರೋಪ ಪಟ್ಟಿಯನ್ನು ಸಮನ್ವಯ ಪೀಠ ವಜಾ ಮಾಡಿದೆ. ಇದರ ಸಂಬಂಧಿತ ಆದೇಶದ ಪ್ರತಿಯನ್ನು ಮುಂದಿನ ವಿಚಾರಣೆಗೆ ಸಲ್ಲಿಸಲಾಗುವುದು” ಎಂದರು. ಅದಕ್ಕೆ ಸ್ವಾಮೀಜಿ ಪರ ವಕೀಲರು “ನಾವು ಈಗಾಗಲೇ ಆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನೋಟಿಸ್ ಜಾರಿಯಾಗಿದೆ” ಎಂದರು.
ಆಗ ಪೀಠವು ದೂರುದಾರೆ ಮತ್ತು ಸಾಕ್ಷಿಗಳ ವಿರುದ್ಧದ ಪ್ರತಿದೂರು ಹಾಗೂ ಆರೋಪ ಪಟ್ಟಿ ವಜಾ ಮಾಡಿರುವ ಆದೇಶ ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಅದಕ್ಕೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ಈಗಾಗಲೇ ಅದನ್ನು ಪೀಠಕ್ಕೆ ಸಲ್ಲಿಸಲಾಗಿದೆ ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ತಡೆ ನೀಡಿರುವ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿತು.
ಮೊದಲಿಗೆ ದಾಖಲಾಗಿದ್ದ ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶರಣರು, ರಶ್ಮಿ ಮತ್ತು ಪರಮಶಿವಯ್ಯ ಅವರನ್ನು ಚಿತ್ರದುರ್ಗದ ವಿಚಾರಣಾಧೀನ ನ್ಯಾಯಾಲಯ ಖುಲಾಸೆಗೊಳಿಸಿತ್ತು. ತನಿಖಾಧಿಕಾರಿಯು ಆರೋಪ ಪಟ್ಟಿ ಸಲ್ಲಿಸುವಾಗ ಮಠದ ಬಸವಾದಿತ್ಯ (ಮರಿಸ್ವಾಮಿ) ಮತ್ತು ವಕೀಲ ಗಂಗಾಧರ್ ವಿರುದ್ಧ ಆರೋಪ ಕೈಬಿಟ್ಟಿದ್ದರು.