

ದೇಶದ ಗಮನಸೆಳೆದಿದ್ದ ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೇರಿ ಮೂವರನ್ನು ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯವು ನಿರ್ದೋಷಿಗಳು ಎಂದು ಬುಧವಾರ ತೀರ್ಪು ನೀಡಿದೆ.
ಮುರುಘಾ ಶರಣರ ವಿರುದ್ಧ ಇನ್ನೊಂದು ಪ್ರಕರಣವು ವಿಚಾರಣೆಗೆ ಬಾಕಿ ಇದ್ದು, ಕರ್ನಾಟಕ ಹೈಕೋರ್ಟ್ ಅದಕ್ಕೆ ತಡೆ ನೀಡಿದೆ. ಈ ಮಧ್ಯೆ, ಸ್ವಾಮೀಜಿಯು ಜಾಮೀನನ ಮೇಲೆ ಹೊರಗಿದ್ದಾರೆ. ಅವರನ್ನು ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿರುವುದನ್ನು ಇಲ್ಲಿ ನೆನೆಯಬಹುದು.
ಮಠದ ಹಾಸ್ಟೆಲ್‌ನಲ್ಲಿ ನೆಲೆಸಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಸ್ವಾಮೀಜಿ ಅವರು ಸೇಬಿನ ಹಣ್ಣಿಗೆ ಮಾದಕ ವಸ್ತು ಲೇಪಿಸಿ ನೀಡಿ, ಅತ್ಯಾಚಾರ ಎಸಗಿದ್ದರು ಎಂದು ದೂರು ನೀಡಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಎರಡನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ್ ಚನ್ನಬಸಪ್ಪ ಹಡಪದ ಅವರು ಇಂದು ತೀರ್ಪು ಪ್ರಕಟಿಸಿದರು. ನವೆಂಬರ್ 18ರಂದು ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು. ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
"ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರು, ಎರಡನೇ ಆರೋಪಿ ರಶ್ಮಿ, ನಾಲ್ಕನೇ ಆರೋಪಿ ಪರಮಶಿವಯ್ಯ ಅವರನ್ನು ನ್ಯಾಯಾಲಯವು ನಿರ್ದೋಷಿಗಳು ಎಂದು ತೀರ್ಪು ನೀಡಿದೆ" ಎಂದು ಸ್ವಾಮೀಜಿ ಪರ ವಕೀಲ ಕೆಬಿಕೆ ಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಕರಣದಲ್ಲಿ ಸ್ವಾಮೀಜಿ ಒಳಗೊಂಡು ಐವರು ಆರೋಪಿಗಳಿದ್ದರು.
ಸ್ವಾಮೀಜಿ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಮತ್ತು ವಕೀಲ ಕೆಬಿಕೆ ಸ್ವಾಮಿ ಅವರು “ಮಕ್ಕಳ ಕಲ್ಯಾಣ ಕೇಂದ್ರ ಅಥವಾ ಬೇರೆ ಯಾವುದೇ ಕಡೆಯಲ್ಲಿರದ ಮಕ್ಕಳು 32 ದಿನಗಳ ಬಳಿಕ ತಡವಾಗಿ ದೂರು ನೀಡಿದ್ದಾರೆ. ಹಾಗಿದ್ದರೆ 32 ದಿನ ಅವರು ಎಲ್ಲಿದ್ದರು? ತನಿಖಾಧಿಕಾರಿಯು ಮಕ್ಕಳು ಸ್ವಾಮೀಜಿಯ ವಿಶ್ರಾಂತಿ ಕೊಠಡಿಗೆ ತೆರಳುವ ಸ್ಥಳದ ವಿಡಿಯೊ ದಾಖಲೆ ಹಾಜರುಪಡಿಸಿಲ್ಲ. ನೆಲಮಹಡಿಯಿಂದ ಮಕ್ಕಳು ಸ್ವಾಮೀಜಿ ಇರುವಲ್ಲಿಗೆ ಬರುತ್ತಿದ್ದರು ಎಂದು ಹೇಳಿರುವುದಕ್ಕೆ ಯಾವುದೇ ಆಧಾರವಿಲ್ಲ. ಇಡೀ ಪ್ರಕರಣವು ದುರುದ್ದೇಶ ಮತ್ತು ಪಿತೂರಿಯಿಂದ ಕೂಡಿದ್ದು, ಸ್ವಾಮೀಜಿಯ ವರ್ಚಸ್ಸಿಗೆ ಹಾನಿ ಉಂಟು ಮಾಡುವ ಏಕೈಕ ಉದ್ದೇಶ ಹೊಂದಿದೆ” ಎಂದು ಪ್ರಬಲವಾಗಿ ವಾದಿಸಿದ್ದರು.
ವಿದ್ಯಾರ್ಥಿನಿಯರು ನೀಡಿದ್ದ ದೂರಿನ ಅನ್ವಯ 2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 376(2)(ಎನ್), 376(3), 149ರ ಅಡಿ ಮುರುಘಾ ಶರಣರು ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್‌ಗಳಾದ 3(1) (ಡಬ್ಲ್ಯು) (1)(2), 3(2) (V) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿನ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಹಾಗೂ ಮಠದ ಬಸವಾದಿತ್ಯ (ಮರಿಸ್ವಾಮಿ) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳಾಗಿದ್ದರು. ಮಠದ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಅವರು ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದರು. ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ಸಂತ್ರಸ್ತೆಯರು ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಳೆದ ವರ್ಷದ ಮಾರ್ಚ್‌ನಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಮುರುಘಾ ಶರಣರು ಮತ್ತು ಇತರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ, ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆ ಅಡಿ ಪ್ರಕರಣವನ್ನು ರದ್ದುಪಡಿಸಿತ್ತು. ಇದಕ್ಕೂ ಮುನ್ನ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಅನ್ವಯಿಸಿದ್ದನ್ನು ಹೈಕೋರ್ಟ್‌ನ ಮತ್ತೊಂದು ಪೀಠ ರದ್ದುಪಡಿಸಿತ್ತು.
ನ್ಯಾ. ನಾಗಪ್ರಸನ್ನ ಅವರು “ಪ್ರಾಸಿಕ್ಯೂಷನ್ ಬಿಂಬಿಸಿದ್ದನ್ನು ಆಧರಿಸಿ ಆರೋಪ ನಿಗದಿ ಮಾಡುವಾಗ ವಿಶೇಷ ನ್ಯಾಯಾಲಯವು ಕೇವಲ ಅಂಚೆ ಕಚೇರಿಯಂತೆ ವರ್ತಿಸಬಾರದಿತ್ತು. ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ-1988ರ ಸೆಕ್ಷನ್‌ಗಳಾದ 3(ಎಫ್), 3(ಸಿ), 3(5) ಮತ್ತು 7 ಮುರುಘಾ ಮಠಕ್ಕೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ನ ಸಮನ್ವಯ ಪೀಠ ಆದೇಶದಲ್ಲಿ ಹೇಳಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ–1989ರ ಸೆಕ್ಷನ್‌ಗಳಾದ 3(1)(ಡಬ್ಲ್ಯು)(i)(ii), 3(2)(v)(v-a) ಇಲ್ಲಿ ಅನ್ವಯಿಸುವುದಿಲ್ಲ. ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆ–2015ರ ಸೆಕ್ಷನ್ 75 ಅನ್ನು ತಪ್ಪಾಗಿ ಮುರುಘಾ ಶರಣರಿಗೆ ಅನ್ವಯಿಸಲಾಗಿದ್ದು, ಇದು ಪ್ರಕರಣದಲ್ಲಿ ಎರಡನೇ ಆರೋಪಿ ಬಸವಶ್ರೀಗೆ ಅನ್ವಯಿಸುತ್ತದೆ. ಮುರುಘಾ ಶ್ರೀ ವಿರುದ್ಧ ತಪ್ಪಾಗಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ವರದಿಯಾಗುವುದಕ್ಕೂ ಮುನ್ನ 3.5 ವರ್ಷಗಳ ಹಿಂದೆ ಸಾಕ್ಷ್ಯ ನಾಶಪಡಿಸಲಾಗಿದ್ದು, ಐಪಿಸಿ ಸೆಕ್ಷನ್ 201ರ ಅಡಿ ತಪ್ಪಾಗಿ ಸಾಕ್ಷ್ಯ ನಾಶ ಆರೋಪ ಹೊರಿಸಲಾಗಿದೆ” ಎಂದು ಆದೇಶಿಸಿತ್ತು.
ಇದೇ ವೇಳೆ ನ್ಯಾಯಾಲಯವು “ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 376(2)ಎನ್ ಮತ್ತು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ–2012ರ ಸೆಕ್ಷನ್ 4 ಮತ್ತು 6ರ ಅಡಿ ಆರೋಪ ಮುಂದುವರಿಯಲಿವೆ” ಎಂದಿತ್ತು.
ಪ್ರಕರಣದ ಹಿನ್ನೆಲೆ: ‘ಮುರುಘಾ ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಿದ್ದರು. ಆನಂತರ ಮತ್ತಿಬ್ಬರು ಬಾಲಕಿಯರು ಮುರುಘಾ ಶರಣರ ವಿರುದ್ದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಪ್ರಕರಣ ವಿಚಾರಣೆಗೆ ಬಾಕಿ ಇದೆ.