ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡಿದ ಮತ್ತು ಯುಕ್ರೇನ್ನ ಆಕ್ರಮಿತ ಪ್ರದೇಶಗಳಿಂದ ರಷಿಯಾಕ್ಕೆ ಮಕ್ಕಳನ್ನು ಅಕ್ರಮವಾಗಿ ವರ್ಗಾಯಿಸಿದ ಯುದ್ಧಾಪರಾಧಕ್ಕೆ ರಷಿಯಾ ಅಧ್ಯಕ್ಷ ಪುಟಿನ್ ಹೊಣೆಗಾರರು ಎಂದಿರುವ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಅವರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ.
ಪುಟಿನ್ ಮತ್ತು ರಷಿಯಾದ ಮಕ್ಕಳ ಹಕ್ಕುಗಳ ಕಮಿಷನರ್ ಮರಿಯಾ ಲ್ವೊವಾ-ಬೆಲೋವಾ ಅವರಿಗೆ ಐಸಿಸಿಯ ವಿಚಾರಣಾ ಪೂರ್ವ ಎರಡನೇ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ ಎಂದು ಐಸಿಸಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕನಿಷ್ಠ ಫೆಬ್ರವರಿ 24, 2022 ರಿಂದ ಯುಕ್ರೇನಿನ ಆಕ್ರಮಿತ ಪ್ರದೇಶದಲ್ಲಿ ಅಪರಾಧ ಎಸಗಲಾಗಿದೆ. ರೋಮ್ ಕಾನೂನಿನ 8(2)(ಎ) (vii) ಮತ್ತು 8(2)(ಬಿ) (viii) ವಿಧಿಯಡಿ ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡಿದ ಮತ್ತು ಯುಕ್ರೇನ್ನ ಆಕ್ರಮಿತ ಪ್ರದೇಶಗಳಿಂದ ರಷಿಯಾಕ್ಕೆ ಮಕ್ಕಳನ್ನು ಅಕ್ರಮವಾಗಿ ವರ್ಗಾಯಿಸಿದ ಯುದ್ಧಾಪರಾಧಕ್ಕೆ ರಷಿಯಾ ಅಧ್ಯಕ್ಷ ಪುಟಿನ್ ಹೊಣೆಗಾರರು ಎಂದು ವಿವರಿಸಲಾಗಿದೆ.
ಮೇಲೆ ತಿಳಿಸಲಾದ ಅಪರಾಧಗಳಿಗೆ ಸಂಬಂಧಿಸಿದಂತೆ (i) ನೇರವಾಗಿ, ಜಂಟಿಯಾಗಿ ಇತರರೊಂದಿಗೆ ಮತ್ತು/ಅಥವಾ ಇತರರ ಮೂಲಕ ಕೃತ್ಯ ಎಸಗಿದ್ದಕ್ಕಾಗಿ ರೋಮ್ ಕಾನೂನಿನ 25 (3) (ಎ) ವಿಧಿಯ ಪ್ರಕಾರ ಮತ್ತು (ii) ಕೃತ್ಯ ಎಸಗಿದ ಮತ್ತು ಕೃತ್ಯ ಎಸಗಲು ಅನುಮತಿ ನೀಡಿದ ಸಿವಿಲ್ ಮತ್ತು ಮಿಲಿಟರಿ ಅಧೀನ ಅಧಿಕಾರಿಗಳ ವಿರುದ್ಧ ಸೂಕ್ತ ನಿಯಂತ್ರಣ ಸಾಧಿಸಲು ವಿಫಲವಾದ ಕಾರಣ ಪುಟಿನ್ ವೈಯಕ್ತಿಕ ಕ್ರಿಮಿನಲ್ ಹೊಣೆಗಾರರು ಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂಬುದಾಗಿ ಪ್ರಕಟಣೆ ಘೋಷಿಸಿದೆ.
ಮಕ್ಕಳ ಹಕ್ಕುಗಳ ಕಮಿಷನರ್ ಮಾರಿಯಾ ಲ್ವೋವಾ-ಬೆಲೋವಾ ಅವರಿಗೆ ಸಂಬಂಧಿಸಿದಂತೆಯೂ ಇದೇ ರೀತಿಯ ಆದೇಶ ನೀಡಲಾಗಿದ್ದು ಯುಕ್ರೇನಿನ ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡುವ ಮತ್ತು ಆಕ್ರಮಿತ ಪ್ರದೇಶಗಳಿಂದ ಜನರನ್ನು ಅಕ್ರಮವಾಗಿ ಕರೆದೊಯ್ದ ಯುದ್ಧಾಪರಾಧಕ್ಕೆ ಪ್ರತಿಯೊಬ್ಬ ಶಂಕಿತನೂ ಜವಾಬ್ದಾರ ಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ಅದು ಹೇಳಿದೆ.
ಸಂತ್ರಸ್ತರು ಮತ್ತು ಸಾಕ್ಷಿಗಳನ್ನು ರಕ್ಷಿಸುವುದಕ್ಕಾಗಿ ಮತ್ತು ತನಿಖೆಯನ್ನು ಜತನ ಮಾಡುವ ಸಲುವಾಗಿ ವಾರಂಟ್‌ಗಳನ್ನು ಸಾಮಾನ್ಯವಾಗಿ ರಹಸ್ಯವಾಗಿಡಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಆದರೆ ಪ್ರಸಕ್ತ ಪ್ರಕರಣದಲ್ಲಿ ಈ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಹೆಚ್ಚಿನ ಯುದ್ಧಾಪರಾಧಗಳ ತಡೆಗೆ ಕಾರಣವಾಗಬಲ್ಲದು ಎನ್ನುವ ನಿಟ್ಟಿನಲ್ಲಿ ವಾರಂಟ್‌ಅನ್ನು ಬಹಿರಂಗಗೊಳಿಸಿರುವುದಾಗಿ ಅದು ಹೇಳಿದೆ. ಐಸಿಸಿ ಪ್ರಾಸಿಕ್ಯೂಟರ್ ಕರೀಮ್ ಎ ಖಾನ್ ಕೆ ಸಿ (ಕಿಂಗ್ಸ್ ಕೌನ್ಸೆಲ್) ಸಲ್ಲಿಸಿದಅರ್ಜಿಗಳಿಗೆ ಸಂಬಂಧಿಸಿದಂತೆ ವಾರಂಟ್ ಹೊರಡಿಸಲಾಗಿದೆ.