ಕರ್ನಾಟಕ ಹೈಕೋರ್ಟ್‌ 
ಸುದ್ದಿಗಳು

ಸಂತ್ರಸ್ತೆಗೆ ಬೆದರಿಕೆ ಪ್ರಕರಣ: ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧದ ವಿಚಾರಣಾಧೀನ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಸ್ವಾಮೀಜಿ ವಿರುದ್ಧ ಹುಲಿಯೂರು ದುರ್ಗ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಆಧಾರರಹಿತ ಮತ್ತು ಕಾನೂನುಬಾಹಿರವಾಗಿದೆ. ಮೇಲ್ನೋಟಕ್ಕೆ ಇದು ದುರುದ್ದೇಶಪೂರಿತ ಮತ್ತು ಸುಳ್ಳಿನಿಂದ ಕೂಡಿದೆ ಎಂದು ಆಕ್ಷೇಪ.

Bar & Bench

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಪ್ರಕರಣದಲ್ಲಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕುಣಿಗಲ್‌ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ (ಶ್ರೀ ಮಠ) ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ನ್ಯಾಯಿಕ ಪ್ರಕ್ರಿಯೆ ಮುಂದುವರಿಸುವುದಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ಬಾಲ ಮಂಜುನಾಥ ಸ್ವಾಮೀಜಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಸ್ವಾಮೀಜಿ ಪರ ವಕೀಲೆ ಲೀಲಾ ಪಿ.ದೇವಾಡಿಗ ಅವರು “ಸ್ವಾಮೀಜಿ ವಿರುದ್ಧ ಹುಲಿಯೂರು ದುರ್ಗ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಆಧಾರರಹಿತ ಮತ್ತು ಕಾನೂನುಬಾಹಿರವಾಗಿದೆ. ಮೇಲ್ನೋಟಕ್ಕೆ ಇದು ದುರುದ್ದೇಶಪೂರಿತ ಮತ್ತು ಸುಳ್ಳಿನಿಂದ ಕೂಡಿದೆ. ಸ್ವಾಮೀಜಿಯ ವ್ಯಕ್ತಿತ್ವ ಮತ್ತು ಕೀರ್ತಿಗೆ ಧಕ್ಕೆ ತರುವಂತಿದೆ” ಎಂದು ಬಲವಾಗಿ ಆಕ್ಷೇಪಿಸಿದರು. 

“ಸ್ವಾಮೀಜಿ ಸಂತ್ರಸ್ತ ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ ದೂರಿನಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ. ಪ್ರಾಸಿಕ್ಯೂಷನ್‌ ವಿನಾಕಾರಣ ದೂರಿನ ವ್ಯಾಪ್ತಿಯಿಂದ ಆಚೆಗೆ ಸಲ್ಲದ ಆರೋಪಗಳನ್ನು ಹೊರಿಸುತ್ತಿದೆ. ಆದ್ದರಿಂದ, ಎಫ್‌ಐಆರ್ ರದ್ದುಪಡಿಸಬೇಕು ಮತ್ತು ಕುಣಿಗಲ್‌ನ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು (ಹಿರಿಯ ವಿಭಾಗ) ಮತ್ತು ಸಿಜೆಎಂ ಕೋರ್ಟ್‌ನಲ್ಲಿ ಇರುವ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದರು.

ಇದನ್ನು ಪುರಸ್ಕರಿಸಿದ ಪೀಠ ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ: ಹುಲಿಯೂರು ದುರ್ಗ–ಮಾಗಡಿ ರಸ್ತೆಯಲ್ಲಿರುವ ಕಾಡು ಶನೇಶ್ವರ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿದ್ದ ಮಂಜುನಾಥ ಸ್ವಾಮೀಜಿ ವಿರುದ್ಧ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ 2024ರ ಮಾರ್ಚ್‌ 7ರಂದು ನೀಡಲಾದ ದೂರಿನ ಅನುಸಾರ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ–2012) ಪ್ರಕರಣ ದಾಖಲಾಗಿತ್ತು.

ದೂರು ನೀಡಿದ ಬಾಲಕಿಗೆ ಸ್ವಾಮೀಜಿ ಸಾಕ್ಷ್ಯ ಒದಗಿಸದಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ, ಭಾರತೀಯ ದಂಡ ಸಂಹಿತೆ–1860ರ ಸೆಕ್ಷನ್‌ 195ಎ (ಸುಳ್ಳು ಸಾಕ್ಷ್ಯ ನೀಡುವಂತೆ ವ್ಯಕ್ತಿಗೆ ಬೆದರಿಕೆ) 120ಬಿ (ಕ್ರಿಮಿನಲ್ ಪಿತೂರಿ) ಮತ್ತು 506 (ಕ್ರಿಮಿನಲ್‌ ಬೆದರಿಕೆ) 34 (ಸಾಮಾನ್ಯ ಉದ್ದೇಶದಿಂದ ಹಲವು ವ್ಯಕ್ತಿಗಳು ಕೂಡಿ ಮಾಡಿದ ಅಪರಾಧ) ಅನುಸಾರ ಪ್ರಕರಣ ದಾಖಲಿಸಲಾಗಿದೆ.