ಪೋಕ್ಸೊ ಪ್ರಕರಣ: ಬಾಲ ಮಂಜುನಾಥ ಸ್ವಾಮೀಜಿಗೆ ಊಟ, ಹಾಸಿಗೆ ಒದಗಿಸಲು ಹೈಕೋರ್ಟ್‌ ಅನುಮತಿ

ಬಾಲ ಮಂಜುನಾಥ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆಯೊಬ್ಬರು 2024ರ ಮಾರ್ಚ್‌ 7ರಂದು ಹುಲಿಯೂರುದುರ್ಗ ಠಾಣೆಗೆ ದೂರು ಸಲ್ಲಿಸಿದ್ದಾರೆ.
Karnataka High Court
Karnataka High Court
Published on

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿ ತುಮಕೂರು ಕಾರಾಗೃಹದಲ್ಲಿರುವ ಕುಣಿಗಲ್‌ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿ ಹಂಗರಹಳ್ಳಿ ಗ್ರಾಮದ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ (ಶ್ರೀಮಠದ) ಪೀಠಾಧಿಪತಿ ಬಾಲ ಮಂಜುನಾಥ ಅವರಿಗೆ ಮಠದಿಂದ ಅಥವಾ ಮನೆ ಊಟ ಹಾಗೂ ಹಾಸಿಗೆ ಒದಗಿಸಲು ಗುರುವಾರ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ.

ಮಠದಿಂದ ಅಥವಾ ಮನೆ ಊಟ ಹಾಗೂ ಹಾಸಿಗೆ ಪೂರೈಕೆಗೆ ಅನುಮತಿ ನೀಡುವಂತೆ ತುಮಕೂರು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಾಲ ಮಂಜುನಾಥ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ರಜಾಕಾಲೀನ ಏಕಸದಸ್ಯ ನಡೆಸಿತು.

ಅರ್ಜಿದಾರರು ತಮ್ಮ ಇಷ್ಟಾನಿಷ್ಟಗಳಿಗೆ ಒಳಪಟ್ಟು ಮಠದಿಂದ ಖಾಸಗಿ/ಮನೆ ಊಟವನ್ನು ತರಿಸಿಕೊಳ್ಳಬಹುದು. ಅದನ್ನು ಜೈಲು ಅಧಿಕಾರಿಗಳು ಪರೀಕ್ಷೆ ಮಾಡಬೇಕು. ನಂತರವೇ ಅರ್ಜಿದಾರರು ಸೇವನೆಗೆ ಅವಕಾಶ ಕಲ್ಪಿಸಬೇಕು. ಇನ್ನೂ ಅರ್ಜಿದಾರರ ತಮ್ಮದೇ ಆದ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ತುಮಕೂರು ಕಾರಾಗೃಹ ಅಧೀಕ್ಷಕರಿಗೆ ಪೀಠ ಸೂಚಿಸಿದೆ. ಅಗತ್ಯವಿದ್ದರೆ ಈ ಆದೇಶ ಮಾರ್ಪಾಡಿಗೆ ಜೈಲು ಅಧಿಕಾರಿಗಳು ನ್ಯಾಯಾಲಯವನ್ನು ಕೋರಬಹುದು ಎಂದೂ ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.

ಬಾಲ ಮಂಜುನಾಥ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆಯೊಬ್ಬರು 2024ರ ಮಾರ್ಚ್‌ 7ರಂದು ಹುಲಿಯೂರುದುರ್ಗ ಠಾಣೆಗೆ ದೂರು ಸಲ್ಲಿಸಿದ್ದರು. ಅದರ ಆಧಾರದ ಮೇಲೆ ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದರು. ವಿಚಾರಣಾಧೀನ ನ್ಯಾಯಾಲಯವು ಸ್ವಾಮೀಜಿಯನ್ನು ಮಾರ್ಚ್‌ 14ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಸದ್ಯ ತುಮಕೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸ್ವಾಮೀಜಿ, ಜೈಲಿನಲ್ಲಿ ಪೂರೈಸುವ ಊಟ ತಮಗೆ ಸರಿಹೊಂದುತ್ತಿಲ್ಲ. ಇದರಿಂದ ಮಠದಿಂದ ಖಾಸಗಿ/ಮನೆ ಊಟ, ಹಾಸಿಗೆ ತರಿಸಿಕೊಳ್ಳಲು ತಮಗೆ ಅನುಮತಿ ನೀಡುವಂತೆ ಜೈಲಾಧಿಕಾರಿಗಳಿಗೆ ಕೋರಿದ್ದರು. ಅದಕ್ಕೆ ಜೈಲಿನ ಅಧಿಕಾರಿಗಳು ಸಮ್ಮಿತಿಸದ್ದಕ್ಕೆ ಸ್ವಾಮೀಜಿ ಹೈಕೋರ್ಟ್‌ ಮೊರೆ ಹೋಗಿದ್ದರು.

Kannada Bar & Bench
kannada.barandbench.com