ಆವಿಷ್ಕಾರವನ್ನು ಪ್ರಾಯೋಗಿಕವಾಗಿ ಪರೀಕ್ಷಿಸದೇ ವ್ಯರ್ಥವಾಗಲು ಬಿಡಬಾರದು ಎಂದಿರುವ ಮದ್ರಾಸ್ ಹೈಕೋರ್ಟ್, ಪೇಟೆಂಟ್ ಅರ್ಜಿಯನ್ನು ಈಗಾಗಲೇ ಸ್ಥಾಪಿತವಾದ ನೈಸರ್ಗಿಕ ವಿಜ್ಞಾನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿರಸ್ಕರಿಸಲಾಗಿದ್ದರೂ, ಆವಿಷ್ಕಾರ ಮಾಡಿರುವವರು ತಮ್ಮ ಆವಿಷ್ಕಾರ ಕಾರ್ಯನಿರ್ವಹಿಸುವ ಮಾದರಿಯನ್ನುಪ್ರದರ್ಶಿಸಲು ಅವಕಾಶ ನೀಡುವಂತೆ ಪೇಟೆಂಟ್ ಕಚೇರಿಗೆ ನಿರ್ದೇಶನ ನೀಡಿದೆ [ಕಣ್ಣನ್ ಗೋಪಾಲಕೃಷ್ಣನ್ ಮತ್ತು ಪೇಟೆಂಟ್ಸ್ ನಿಯಂತ್ರಕರ ನಡುವಣ ಪ್ರಕರಣ].
"ಸೌರ ಪೂರಕ ವಿದ್ಯುತ್ ಮೂಲ" ಎಂಬ ಶೀರ್ಷಿಕೆಯ ಪೇಟೆಂಟ್ ಅರ್ಜಿ ತಿರಸ್ಕರಿಸಿದ್ದನ್ನು ಮತ್ತು ಪೇಟೆಂಟ್ ಪರಿಶೀಲನಾ ಅರ್ಜಿ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಂಶೋಧಕ ಕಣ್ಣನ್ ಗೋಪಾಲಕೃಷ್ಣನ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರು ಡಿಸೆಂಬರ್ 18ರಂದು ಈ ಆದೇಶ ನೀಡಿದರು.
ನ್ಯಾಯಾಲಯ, ಆದೇಶದ ಪ್ರತಿಯನ್ನು ಸ್ವೀಕರಿಸಿದ ನಾಲ್ಕು ವಾರಗಳ ಒಳಗೆ ಪೇಟೆಂಟ್‌ಗಳು ಮತ್ತು ವಿನ್ಯಾಸಗಳ ಸಹಾಯಕ ನಿಯಂತ್ರಕರ ಎದುರು ಪ್ರದರ್ಶನಕ್ಕೆ ಯೋಗ್ಯವಾದ ಪ್ರಾಥಮಿಕ ಮಾದರಿಯನ್ನು (ಪ್ರೊಟೊಟೈಪ್) ಗೋಪಾಲ್ ಕೃಷ್ಣನ್ ಅವರು ಒದಗಿಸಬೇಕೆಂದು ಸೂಚಿಸಿದೆ. ಸಹಾಯಕ ನಿಯಂತ್ರಕರು ಸಂಶೋಧಕರಿಗೆ ತನ್ನ ಮಾದರಿಯನ್ನು ಪ್ರದರ್ಶಿಸಲು ಅವಕಾಶ ನೀಡಿ, ನಂತರ ಪೇಟೆಂಟ್ ನೀಡಬಹುದೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಯಾವುದೇ ಮಾಡಲಾದ ಆವಿಷ್ಕಾರ ವ್ಯರ್ಥವಾಗದೆ ಉಳಿಯಬೇಕು ಹಾಗೂ ಅಂತಹ ಆವಿಷ್ಕಾರವನ್ನು ಉಳಿಸಿಕೊಳ್ಳಲು ಎಲ್ಲ ಸಾಧ್ಯವಾದ ಅವಕಾಶಗಳನ್ನೂ ನೀಡಬೇಕು ಎಂಬ ಉದ್ದೇಶದಿಂದ ಸಂವಿಧಾನದ 226ನೇ ವಿಧಿಯಡಿ ಒದಗಿಸಲಾದ ವಿವೇಚನಾಧಿಕಾರ ಬಳಸಿಕೊಂಡು ಈ ಆದೇಶ ನೀಡಲಾಗುತ್ತಿದೆ ಎಂದು ಅದು ವಿವರಿಸಿದೆ.
ಅನೇಕ ಬಾಹುಗಳು ಮತ್ತು ತೂಕ ಹೊಂದಿರುವ ಚಕ್ರಧಾರಿತ ವಿದ್ಯುತ್ ಯಾಂತ್ರಿಕ ವ್ಯವಸ್ಥೆಯನ್ನು ಗುರುತ್ವಾಕರ್ಷಣಾ ಶಕ್ತಿ ಮತ್ತು ತೇಲುವ ಶಕ್ತಿ ಆಧರಿಸಿ ವಿನ್ಯಾಸಗೊಳಿಸಲಾಗಿದ್ದು ಅವು ಚಕ್ರದಲ್ಲಿ ಅಸಮತೋಲನ ಸೃಷ್ಟಿಸಿ ನಿರಂತರವಾಗಿ ತಿರುಗುವಂತೆ ಮಾಡಿ, ಅದರಿಂದ ವಿದ್ಯುತ್ ಉತ್ಪಾದಕ ಜನರೇಟರ್ ಕಾರ್ಯನಿರ್ವಹಿಸುವಂತಾಗುತ್ತದೆ. ಈ ಯಂತ್ರ ಚಾಲನೆಗೆ ಬಂದರೆ ಸಾಂಪ್ರದಾಯಿಕ ಸೌರಶಕ್ತಿಯ ಅವಲಂಬನೆ ಇಲ್ಲದೆ ಪೂರಕ ವಿದ್ಯುತ್ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಪೇಟೆಂಟ್ ಕಚೇರಿ ಈಗಾಗಲೇ ಅವರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಎಂದು ವಾದಿಸಿತು. ಆದರೂ, ಭೌತಿಕ ಪ್ರೋಟೋಟೈಪ್ ಲಭ್ಯವಿದ್ದು, ಅದನ್ನು ಪ್ರದರ್ಶಿಸಲು ಮಾತ್ರ ಅವಕಾಶ ಕೋರುತ್ತಿರುವುದಾಗಿ ಅರ್ಜಿದಾರರು ಮಾಡಿರುವ ನಿರ್ದಿಷ್ಟ ಮನವಿಯನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.
[ತೀರ್ಪಿನ ಪ್ರತಿ]