ಆರೋಪಿಯ ಸ್ಮಾರ್ಟ್‌ಫೋನ್ ಅಥವಾ ವಿದ್ಯುನ್ಮಾನ ಸಾಧನಗಳಿಂದ ವಶಪಡಿಸಿಕೊಳ್ಳಲಾದ ಖಾಸಗಿ ದತ್ತಾಂಶವನ್ನು ನ್ಯಾಯಾಲಯದ ಲಿಖಿತ ಅನುಮತಿ ಪಡೆಯದೇ ಮೂರನೇ ವ್ಯಕ್ತಿಗೆ ಸೋರಿಕೆ ಮಾಡುವ ಯಾವುದೇ ಹಕ್ಕನ್ನು ತನಿಖಾಧಿಕಾರಿ (ಐಒ) ಹೊಂದಿಲ್ಲ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಹೇಳಿದೆ (ವೀರೇಂದ್ರ ಖನ್ನಾ ವರ್ಸಸ್ ಕರ್ನಾಟಕ ರಾಜ್ಯ).
ಖಾಸಗಿ ದತ್ತಾಂಶವನ್ನು ಸೋರಿಕೆ ಮಾಡುವ ತನಿಖಾಧಿಕಾರಿಯ ವಿರುದ್ಧ ಕರ್ತವ್ಯ ಲೋಪ ಅಥವಾ ದುಷ್ಕೃತ್ಯದ ಕಾರಣ ನೀಡಿ ಅವರ ವಿರುದ್ಧ ಪ್ರಕ್ರಿಯೆ ಆರಂಭಿಸಬೇಕು ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯವು ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಆರೋಪಿ ವೀರೇಂದ್ರ ಖನ್ನಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಪೀಠವು ಮೇಲಿನಂತೆ ಹೇಳಿದೆ. ತಮ್ಮ ಮೊಬೈಲ್ ಅನ್‌ಲಾಕ್ ಮಾಡುವುದಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯ ಜೊತೆ ಸಹಕರಿಸುವಂತೆ ಎನ್‌ಡಿಪಿಎಸ್ ನ್ಯಾಯಾಲಯವು ಖನ್ನಾಗೆ ಸೂಚಿಸಿತ್ತು. ನ್ಯಾಯಾಲಯದ ಆದೇಶವು ಕಾನೂನು ಬಾಹಿರ ಮತ್ತು ಕಾನೂನು ಪ್ರಕ್ರಿಯೆ ಉಲ್ಲಂಘನೆಯಾಗಿದೆ ಎಂದು ಖನ್ನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
“ವ್ಯಕ್ತಿಯ ಗೌಪ್ಯತೆಗೆ ಧಕ್ಕೆ ತರದಂತೆ ಮಾಹಿತಿ ಅಥವಾ ದತ್ತಾಂಶವನ್ನು ಕಾಪಾಡುವ ಜವಾಬ್ದಾರಿ ಯಾವಾಗಲೂ ತನಿಖಾಧಿಕಾರಿಯದ್ದಾಗಿರುತ್ತದೆ. ಮೂರನೇ ವ್ಯಕ್ತಿಗೆ ಗೌಪ್ಯ ಮಾಹಿತಿ ಒದಗಿಸಿರುವುದು ಕಂಡುಬಂದಲ್ಲಿ ತನಿಖಾ ಅಧಿಕಾರಿಯ ವಿರುದ್ಧ ಕರ್ತವ್ಯ ಲೋಪ ಪ್ರಕ್ರಿಯೆ ಆರಂಭಿಸಬಹುದು" ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ತನಿಖೆಯ ಸಮಯದಲ್ಲಿ ಪಡೆದುಕೊಳ್ಳಲಾದ ದತ್ತಾಂಶವನ್ನು ಬಳಸುವುದು ಗೌಪ್ಯತೆಯ ಹಕ್ಕಿನ ಉಲ್ಲಂಘನೆಗೆ ಕಾರಣವಾಗುವುದಿಲ್ಲ ಎನ್ನುವುದನ್ನು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿದೆ. ಕೆ ಎಸ್ ಪುಟ್ಟಸ್ವಾಮಿ ಪ್ರಕರಣ ತೀರ್ಪಿನಲ್ಲಿ ಗೌಪ್ಯತೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಸ್ಮಾರ್ಟ್‌ಫೋನ್ ಅಥವಾ ಇಮೇಲ್ ಪರಿಶೀಲಿಸಬೇಕಾದರೆ ಶೋಧನಾ ವಾರೆಂಟ್ ಪಡೆಯುವುದು ಬಹುಮುಖ್ಯ ಎಂದು ನ್ಯಾಯಾಲಯ ಹೇಳಿದೆ. ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವಂತೆ ಅರ್ಜಿದಾರರಿಗೆ ವಿಚಾರಣಾಧೀನ ನ್ಯಾಯಾಲಯ ನಿರ್ದೇಶನ ಮಾಡಿದ ಮಾತ್ರಕ್ಕೆ ಸ್ಮಾರ್ಟ್‌ಫೋನ್ ಅಥವಾ ಇಮೇಲ್ ಖಾತೆ ತೆರೆಯಲು ಪಾಸ್‌ವರ್ಡ್, ಪಾಸ್‌ಕೋಡ್, ಬಯೋಮೆಟ್ರಿಕ್ಸ್ ಇತ್ಯಾದಿಗಳನ್ನು ನೀಡುವಂತೆ ಅರ್ಜಿದಾರರನ್ನು ಒತ್ತಾಯಿಸಲಾಗದು ಎಂದು ನ್ಯಾಯಾಲಯ ಹೇಳಿದೆ.