ಸ್ಯಾಂಡಲ್‌ವುಡ್‌ ಮಾದಕವಸ್ತು ಹಗರಣ: ನಟಿಯರಾದ ಸಂಜನಾ, ರಾಗಿಣಿ ಪರ ವಕೀಲರು ಹೇಳಿದ್ದೇನು?

ನಟಿಯರಾದ ರಾಗಿಣಿ, ಸಂಜನಾ ಹಾಗೂ ಇತರೆ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದ್ದು ವಿಚಾರಣೆಯ ವೇಳೆ ಮಂಡನೆಯಾದ ವಾದದ ವಿವರ ಇಲ್ಲಿದೆ.
Ragini Dwivedi, Sanjjanaa Galrani
Ragini Dwivedi, Sanjjanaa Galrani
Published on

‘ಯಾವುದೇ ಆರೋಪಿಗಳು ಅದರಲ್ಲಿಯೂ ನಟಿ ಸಂಜನಾ ಸೇವಿಸಿದ ಮಾದಕವಸ್ತುವಿನ ಪ್ರಮಾಣವನ್ನು ಪ್ರಾಸಿಕ್ಯೂಷನ್‌ ಇನ್ನೂ ನಿರ್ಧರಿಸಿಲ್ಲ/ ಪತ್ತೆಮಾಡಿಲ್ಲ’ ಎಂದು ನಟಿ ಸಂಜನಾ ಪರ ಹಿರಿಯ ವಕೀಲ ಹಸ್ಮತ್‌ ಪಾಷಾ ವಾದ ಮಂಡಿಸಿದ್ದಾರೆ. ಸ್ಯಾಂಡಲ್‌ವುಡ್‌ ಮಾದಕವಸ್ತು ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಶನಿವಾರ ನಡೆದ ವಿಚಾರಣೆ ವೇಳೆ ಅವರು ʼಮಾದಕವಸ್ತು ಪ್ರಮಾಣವನ್ನು ನಿರ್ಧರಿಸದ ಹೊರತು ಜಾಮೀನು ನಿರಾಕರಿಸಲಾಗದುʼ ಎಂದು ಕೂಡ ತಿಳಿಸಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌ ನಿಗೂಢ ಸಾವು ಪ್ರಕರಣದಲ್ಲಿ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಅವರಿಗೆ ಜಾಮೀನು ನೀಡುವಾಗ ಬಾಂಬೆ ಹೈಕೋರ್ಟ್ ಎತ್ತಿಹಿಡಿದ "ಮಾದಕವಸ್ತುಗಳ ಪ್ರಮಾಣದ ಅನಿರ್ದಿಷ್ಟತೆ" ಮತ್ತು "ಮಾದಕವಸ್ತುಗಳ ವಾಣಿಜ್ಯ ಪ್ರಮಾಣವನ್ನು" ಒಳಗೊಂಡಿರುವ ಅಪರಾಧಗಳ ಅಂಶಗಳನ್ನು ಆಧರಿಸಿ ಪಾಷಾ ವಿವರಿಸಿದರು.

Also Read
ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ: ಎನ್‌ಐಎಗೆ ಪ್ರಕರಣ ಹಸ್ತಾಂತರಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ʼಅವರು ಕೇವಲ ಗ್ರಾಹಕರಾಗಿದ್ದು 6 ತಿಂಗಳ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ಮಾತ್ರ ನೀಡಬಹುದು.. 10ರಿಂದ 20 ವರ್ಷಗಳವರೆಗಿನ ಶಿಕ್ಷೆಯ ಪ್ರಶ್ನೆ ಉದ್ಭವಿಸುವುದಿಲ್ಲʼ ಎಂದು ಪಾಷಾ ಸಮರ್ಥಿಸಿಕೊಂಡರು.

ಸಂಜನಾ 50 ದಿನಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದರು ಎಂದು ಕೂಡ ಅವರು ವಿವರಿಸಿದ್ದು ಆರೋಪಿಗಳ ರಕ್ತ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ವಶ ಮತ್ತು ಮನೆಗಳ ಸಂಪೂರ್ಣ ತಪಾಸಣೆ ನಂತರವೂ ದೋಷಾರೋಪಕ್ಕೆ ಸಂಬಂಧಿಸಿದ ಯಾವುದೇ ಪುರಾವೆ ಕಂಡುಬಂದಿಲ್ಲ ಎಂದು ಅವರು ವಾದಿಸಿದರು. ರಾಗಿಣಿ ಪರ ವಕೀಲರು ಕೂಡ ಇದೇ ಬಗೆಯ ಸಮಜಾಯಿಷಿ ನೀಡಿದರು.

ಆದರೆ ʼತನಿಖೆ ಇನ್ನೂ ಬಾಕಿ ಇರುವುದರಿಂದ ಆರೋಪಿಗಳು ಬಂಧನದಲ್ಲಿದ್ದರೆ ಸೂಕ್ತʼ ಎಂಬುದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅವರ ವಾದವಾಗಿತ್ತು. ಆರೋಪಿಗಳ ವಿರುದ್ಧ ಪಿತೂರಿ ಪ್ರಕರಣವಿದ್ದು ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ಪ್ರಕರಣಕ್ಕೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿದ್ದಾರೆ.

Kannada Bar & Bench
kannada.barandbench.com