ವಿಮೆದಾರರಿಗೆ ಅನಗತ್ಯ ಕಿರುಕುಳ, ನಷ್ಟ ಮತ್ತು ನೋವು ಉಂಟು ಮಾಡಿದ್ದಕ್ಕಾಗಿ ಟಾಟಾ ಎಐಜಿ ಜೀವ ವಿಮಾ ಕಂಪೆನಿಗೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (ಎನ್‌ಸಿಡಿಆರ್‌ಸಿ) ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ವಿಮಾ ಕಂಪೆನಿಯಿಂದ ನೇಮಕಗೊಂಡ ಖಾಸಗಿ ಏಜೆನ್ಸಿಯ ತನಿಖೆ ಪೊಲೀಸ್ ತನಿಖೆಗೆ ಬದಲಿಯಾಗದು ಎಂದು ಪ್ರಕರಣ ಇತ್ಯರ್ಥಕ್ಕೆ ನೇಮಕವಾಗಿದ್ದ ಸದಸ್ಯ ದಿನೇಶ್ ಸಿಂಗ್ ಹೇಳಿದ್ದಾರೆ. “ಅಸಹಜ ಸಾವಿನ ಸಂದರ್ಭದಲ್ಲಿ, ಡಿಡಿ ನಮೂದನ್ನು ಸರಿಯಾಗಿ ಮಾಡಿದ್ದರೆ, ಮರಣೋತ್ತರ ಪರೀಕ್ಷೆಯನ್ನು ಸರಿಯಾಗಿ ನಿರ್ವಹಿಸಲಾಗಿದ್ದರೆ, ಆಗ 'ವೈದ್ಯಕೀಯ-ಕಾನೂನು ಸೇವೆಗಳನ್ನು' ಒದಗಿಸುವ ಖಾಸಗಿ ಸಂಸ್ಥೆಯು ಪೊಲೀಸರ ತನಿಖೆಗೆ ಸಂಪೂರ್ಣ ಬದಲಿಯಾಗದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೂರುದಾರರ ಪತಿ ಒಬ್ಬ ಏಜೆಂಟ್ ಮೂಲಕ ಪ್ರತಿವಾದಿಯಿಂದ ನಾಲ್ಕು ವಿಮೆಗಳನ್ನು ಪಡೆದುಕೊಂಡಿದ್ದರು. ಹಳಿ ದಾಟುವಾಗ ರೈಲಿಗೆ ಸಿಲುಕಿ ಪತಿ ಸಾವನ್ನಪ್ಪಿದ್ದರು. ಹೀಗಾಗಿ, ವಿಮೆಗಳ ಲಾಭವನ್ನು ಪತ್ನಿ ಮತ್ತು ಪುತ್ರನಿಗೆ ವರ್ಗಾಯಿಸಲಾಗಿತ್ತು. ಆದರೆ, ಕಂಪೆನಿಯು ಸಾವನ್ನಪ್ಪಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದು ಅಪಘಾತವಲ್ಲ ಎಂದು ನಾಲ್ಕನೇ ವಿಮೆ ಮೊತ್ತ ಬಿಡುಗಡೆ ಮಾಡಲು ನಿರಾಕರಿಸಿತ್ತು. ಅಲ್ಲದೆ, ಮೊದಲ ಮೂರು ವಿಮೆಗಳನ್ನು ಮರೆಮಾಚಿ ನಾಲ್ಕನೇ ವಿಮೆಯನ್ನು ಪಡೆದುಕೊಳ್ಳಲಾಗಿದೆ ಎಂದು ಕಂಪೆನಿ ವಾದಿಸಿತ್ತು.
ವಿಮೆದಾರರು ಮಾಹಿತಿ ಬಚ್ಚಿಟ್ಟಿದ್ದಾರೆ ಎಂಬುದಕ್ಕೆ ಪ್ರಕರಣ ಇತ್ಯರ್ಥ ಮಾಡುವ ಸಂದರ್ಭದಲ್ಲಿ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಆಯೋಗ ಹೇಳಿದೆ. “ಜೀವ ವಿಮೆದಾರರಿಂದ ಹಿಂದಿನ ವಿಮೆಗಳನ್ನು ಬಹಿರಂಗಪಡಿಸದಿರುವುದು ದೂರುದಾರರ ಹಕ್ಕಿಗೆ ಮಾರಕವಲ್ಲ” ಎಂದು ಮಾಡರ್ನ್ ಇನ್ಸುಲೇಟರ್ಸ್ ಲಿಮಿಟೆಡ್ ವರ್ಸಸ್ ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಲಾಗಿದೆ.
“ಒಂದು ಕಾಲೊನಿಯಿಂದ ಮತ್ತೊಂದು ಕಾಲೊನಿಗೆ ತೆರಳುವಾಗ ಹಳಿಯಲ್ಲಿ ಎಡವಿ ಬಿದ್ದು ವೇಗದಲ್ಲಿ ಬರುತ್ತಿದ್ದ ರೈಲಿಗೆ ಸಂತ್ರಸ್ತರು ಸಿಲುಕಿ ಸಾವನ್ನಪ್ಪಿರಬಹುದು. ಹೀಗಾಗಿ, ರೈಲು ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದು” ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ, ವಿಮಾ ಕಂಪೆನಿಯು ನೇಮಿಸಿಕೊಂಡಿರುವ ಏಜೆನ್ಸಿ ಮಾಡಿರುವ ತನಿಖೆಯು ಪೊಲೀಸ್ ತನಿಖೆಗೆ ಸಮನಾಗದು ಎಂದು ಎನ್‌ಸಿಡಿಆರ್‌ಸಿ ಹೇಳಿದ್ದು, ರಾಜ್ಯ ಆಯೋಗದ ಆದೇಶವನ್ನು ಬದಿಗಿರಿಸಿದೆ.
ರಾಜ್ಯ ಆಯೋಗದ ಮುಂದೆ ದೂರು ದಾಖಲಿಸಿದ ದಿನಾಂಕದಿಂದ ಇಂದಿನವರೆಗೆ ವಾರ್ಷಿಕ ಶೇ. 9ರಷ್ಟು ಬಡ್ಡಿ ಒಳಗೊಂಡ ವಿಮಾ ಮೊತ್ತವನ್ನು ನಾಲ್ಕು ವಾರಗಳ ಒಳಗೆ ಪಾವತಿಸುವಂತೆ ಪ್ರತಿವಾದಿ ವಿಮಾ ಕಂಪೆನಿಗೆ ಆದೇಶಿಸಲಾಗಿದೆ. ಅಲ್ಲದೇ, ಒಂದು ಲಕ್ಷ ರೂಪಾಯಿ ದಂಡದ ಪೈಕಿ ರೂ.50 ಸಾವಿರವನ್ನು ದೂರುದಾರರಿಗೆ ಮತ್ತು ಉಳಿದ ರೂ.50 ಸಾವಿರವನ್ನು ರಾಜ್ಯ ಆಯೋಗದ ಗ್ರಾಹಕ ಕಾನೂನು ಸೇವಾ ಕೇಂದ್ರದ ಖಾತೆಗೆ ಜಮೆ ಮಾಡುವಂತೆ ಎನ್‌ಸಿಡಿಆರ್‌ಸಿ ನಿರ್ದೇಶಿಸಿದೆ.