ಸುದ್ದಿಗಳು

ಐಎನ್ಎಕ್ಸ್ ಮೀಡಿಯಾ ಹಗರಣ: ಆರೋಪಿಗಳಿಗೆ ದಾಖಲೆ ನೀಡಲು ಆಕ್ಷೇಪಿಸಿದ್ದ ಸಿಬಿಐ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

ಆರೋಪಿಗಳಿಗೆ ದಾಖಲೆಗಳನ್ನು ಪರಿಶೀಲಿಸಲು ವಿಶೇಷ ಸಿಬಿಐ ನ್ಯಾಯಾಲಯ ಮಾರ್ಚ್ 5 ರಂದು ಅವಕಾಶ ಮಾಡಿಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾ. ಮುಕ್ತಾ ಗುಪ್ತಾ ತೀರ್ಪು ನೀಡಿದರು.

Bar & Bench

ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಅವರ ಪುತ್ರ ಕಾರ್ತಿ ಹಾಗೂ ಇತರರು ಆರೋಪಿಗಳಾಗಿರುವ ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ದಾಖಲೆಗಳ ಪ್ರತಿಗಳನ್ನು ಆರೋಪಿಗಳ ಪರಿಶೀಲನೆಗೆ ಒದಗಿಸಲು ಅನುಮತಿ ನೀಡಿದ್ದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ (ಸಿಬಿಐ ಮತ್ತು ಐಎನ್‌ಎಕ್ಸ್‌ ಮೀಡಿಯಾ ಪ್ರೈ ಲಿ., ಮತ್ತಿತರರ ನಡುವಣ ಪ್ರಕರಣ).

ಆರೋಪಿಗಳಿಗೆ ದಾಖಲೆಗಳನ್ನು ಪರಿಶೀಲಿಸಲು ವಿಶೇಷ ಸಿಬಿಐ ನ್ಯಾಯಾಲಯ ಮಾರ್ಚ್ 5 ರಂದು ಅವಕಾಶ ಮಾಡಿಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾ. ಮುಕ್ತಾ ಗುಪ್ತಾ ತೀರ್ಪು ನೀಡಿದರು. ಈ ವರ್ಷದ ಆಗಸ್ಟ್ 27ರಂದು ತೀರ್ಪನ್ನು ಕಾಯ್ದಿರಿಸಲಾಗಿತ್ತು.

ಆರೋಪಿಗಳ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಎಲ್ಲಾ ದಾಖಲೆಗಳನ್ನು ಅಥವಾ ದಾಖಲಿಸಿದ ಹೇಳಿಕೆಗಳನ್ನು ಸಿಬಿಐಗೆ ಸಲ್ಲಿಸುವುದು ಅಥವಾ ಹಾಜರುಪಡಿಸುವುದು ಅಗತ್ಯವಾಗಿದ್ದು ಆರೋಪಿಗಳು ಕೂಡ ನಕಲು ಪ್ರತಿಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಸಿಬಿಐ ಇದನ್ನು ಪ್ರಶ್ನಿಸಲು ಇದ್ದ ಕಾರಣಗಳಲ್ಲಿ ಪ್ರಕರಣ ಭಾರಿ ಭ್ರಷ್ಟಾಚಾರಕ್ಕೆ ಸಂಬಂಧಿಸಿರುವುದಾಗಿದೆ ಎಂಬುದಾಗಿತ್ತು. ನ್ಯಾಯಸಮ್ಮತ ವಿಚಾರಣೆ ಆರೋಪಿಗಳ ಹಕ್ಕಾದರೂ, ಸಮಾಜದ ಸಾಮೂಹಿಕ ಹಿತಾಸಕ್ತಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು.

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪಿ ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ ಇನ್ನಿತರರ ವಿರುದ್ಧ ಅಕ್ಟೋಬರ್ 21, 2019ರಂದು ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪರಿಗಣಿಸಿತ್ತು. ಐಎನ್‌ಎಕ್ಸ್ ಮೀಡಿಯಾ ಮತ್ತು ಐಎನ್‌ಎಕ್ಸ್ ನ್ಯೂಸ್ ಪ್ರೈವೇಟ್ ಲಿಮಿಟೆಡ್ ಹೂಡಿಕೆಗೆ ಸಂಬಂಧಿಸಿದಂತೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ (ಎಫ್‌ಐಪಿಬಿ) ಅನುಮೋದನೆ ನೀಡುವ ಸಂದರ್ಭದಲ್ಲಿ ಚಿದಂಬರಂ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಸಿಬಿಐ ವಾದವಾಗಿದೆ.