CBI and Supreme Court 
ಸುದ್ದಿಗಳು

ಐಎನ್ಎಕ್ಸ್ ಮೀಡಿಯಾ: ಪಿ ಚಿದಂಬರಂಗೆ ದಾಖಲೆ ಒದಗಿಸುವುದಕ್ಕೆ ಆಕ್ಷೇಪಿಸಿದ್ದ ಸಿಬಿಐ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಈ ನಿಟ್ಟಿನಲ್ಲಿ ನವೆಂಬರ್ 2021ರಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.

Bar & Bench

ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ಆರೋಪಿಗಳಿಗೆ ಕೆಲವು ದಾಖಲೆಗಳನ್ನು ಒದಗಿಸುವುದಕ್ಕೆ ಆಕ್ಷೇಪಿಸಿ ಸಿಬಿಐ ಸಲ್ಲಿಸಿದ್ದ ಮನವಿ ಪುರಸ್ಕರಿಸಲು ಸುಪ್ರೀಂ ಕೋರ್ಟ್‌ ಈಚೆಗೆ ಅಸಮ್ಮತಿ ಸೂಚಿಸಿದೆ [ಸಿಬಿಐ ಮತ್ತು ಐಎನ್‌ಎಕ್ಸ್ ಮೀಡಿಯಾ ಪ್ರೈ ಲಿಮಿಟೆಡ್‌ ನಡುವಣ ಪ್ರಕರಣ].

ಈ ಸಂಬಂಧ ದೆಹಲಿ ಹೈಕೋರ್ಟ್ ಮತ್ತು ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪುಗಳನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಜುಲೈ 18ರಂದು ಎತ್ತಿ ಹಿಡಿದಿದೆ.

ನವೆಂಬರ್ 2021ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಲೇವಾರಿ ಮಾಡುವಾಗ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನ್ಯಾಯವಾದಿ ಪಿ ಚಿದಂಬರಂ, ಅವರ ಪುತ್ರ ಕಾರ್ತಿ ಸೇರಿದಂತೆ ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ಆರೋಪಿಗಳಿಗೆ ಪರಿಶೀಲನೆಗಾಗಿ ಪ್ರಕರಣದ ಕುರಿತಾದ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಸೂಚಿಸಿ ಅನುಮತಿ ನೀಡಲಾಗಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಮೆಟ್ಟಿಲೇರಿತ್ತು. ಇದೀಗ ಅಲ್ಲಿಯೂ ಸಿಬಿಐ ಮನವಿ ತಿರಸ್ಕೃತವಾಗಿದೆ.