“ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವವರ ರೀತಿಯಲ್ಲಿ ಐಪಿಎಸ್ ಅಧಿಕಾರಿ ರೂಪಾ ವರ್ತಿಸುತ್ತಿದ್ದಾರೆ” ಎಂಬುದು ಸೇರಿದಂತೆ ಪ್ರಕಟಣೆ ಆಧರಿಸಿದ ಮಾಧ್ಯಮಗಳ ವರದಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವುದನ್ನು ವಜಾ ಮಾಡಲು ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮಾರ್ಚ್ 18ಕ್ಕೆ ಮುಂದೂಡಿದೆ.
ರೂಪಾ ಹೂಡಿರುವ ಮಾನಹಾನಿ ಪ್ರಕರಣದ ಸಂಬಂಧ ಜನವರಿ 13ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ರೂಪಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ಮ್ಯಾಜಿಸ್ಟ್ರೇಟ್ ಸಂಜ್ಞೇ ಪರಿಗಣಿಸುವುದಕ್ಕಾಗಿ ಸಲ್ಲಿಸಲಾಗಿರುವ ದಾಖಲೆಗಳನ್ನು ರೋಹಿಣಿ ಸಿಂಧೂರಿ ಸಲ್ಲಿಕೆ ಮಾಡಿಲ್ಲ. ಮ್ಯಾಜಿಸ್ಟ್ರೇಟ್ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಲಾಗಿದೆ. ದೂರುದಾರೆಯಾಗಿ ಖಾಸಗಿ ದೂರು ದಾಖಲಿಸಿರುವ ದಾಖಲೆ ಮಾತ್ರ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಪ್ರತಿವಾದಿ (ರೂಪಾ) ದಾಖಲಿಸಿರುವ ಖಾಸಗಿ ದೂರನ್ನು ಸಲ್ಲಿಸಿಲ್ಲ” ಎಂದರು.
“ಸಂಜ್ಞೇ ಪರಿಗಣಿಸಿರುವ ಆದೇಶವು ಮರುಪರಿಷ್ಕರಿಸಬಹುದಾದ ಆದೇಶ. ಸಮನ್ವಯ ಪೀಠವು ಸಿಆರ್‌ಪಿಸಿ ಸೆಕ್ಷನ್ 482ರ ಅಧಿಕಾರ ಬಳಕೆ ಮಾಡಲಾಗದು ಎಂದಿದೆ. ರೋಹಿಣಿ ಅವರು ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು” ಎಂದರು.
ಆಗ ರೋಹಿಣಿ ಪ್ರತಿನಿಧಿಸಿರುವ ವಕೀಲ ಎಸ್ ಎ ಬೆಳ್ಳಿಯಪ್ಪ ಅವರು “ರೂಪಾ ದಾಖಲಿಸಿರುವ ದೂರನ್ನು ಆಧರಿಸುವುದಿಲ್ಲ. ಆದರೆ, ಆ ಸಂಬಂಧದ ದಾಖಲೆಗಳೆಲ್ಲವೂ ನಮ್ಮ ಬಳಿ ಇವೆ. ಕಾಲಾವಕಾಶ ನೀಡಿದರೆ ಅವುಗಳನ್ನೂ ಸಲ್ಲಿಸುತ್ತೇವೆ. ರೋಹಿಣಿ ಹೂಡಿರುವ ಮಾನಹಾನಿ ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯವು ಈ ಹಿಂದೆ ಸಂಜ್ಞೇ ಪರಿಗಣಿಸಿರುವುದನ್ನು ರೂಪಾ ಇದೇ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ” ಎಂದರು.
ವಿಚಾರಣೆಯ ಒಂದು ಹಂತದಲ್ಲಿ ರವಿಶಂಕರ್ ಅವರನ್ನು ಕುರಿತು ಪೀಠವು “ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿ ಸಿಆರ್‌ಪಿಸಿ ಸೆಕ್ಷನ್ 482 ಅಡಿ ಸಲ್ಲಿಸುವ ಅರ್ಜಿಗಳನ್ನು ಪ್ರತಿದಿನ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ” ಎಂದರು.
ಅಂತಿಮವಾಗಿ ಉಭಯ ಪಕ್ಷಕಾರರ ಕೋರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ರೋಹಿಣಿ ಸಿಂಧೂರಿಯವರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್ ರೂಪಾ ಅವರು ತನ್ನ ವಿರುದ್ಧ ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೂಪಾಗೆ ಇದೊಂದು ಅಭ್ಯಾಸವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಹುದ್ದೆಗಳಲ್ಲಿ ಇದೇ ರೀತಿಯ ಆಧಾರರಹಿತ ಆರೋಪ ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆಯಲು ಹಾಗೂ ತಾನು ದ್ವೇಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಕೀಳುಮಟ್ಟದ ಪ್ರವೃತ್ತಿಯನ್ನು ರೂಪಾ ಪ್ರದರ್ಶಿಸುತ್ತಿದ್ದಾರೆ. ಯಾವಾಗಲೂ ಸುದ್ದಿಯಲ್ಲಿರಬೇಕು ಎಂದು ಬಯಸುವ ರೂಪಾ, ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಅದಕ್ಕೆ ಬೇಕಾದ ಪೋಸ್ಟ್ ಹಾಕುವ ಮೂಲಕ ಸುದ್ದಿಯ ಕೇಂದ್ರಬಿಂದುವಾಗಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
ಮುಂದುವರಿದು, “ಜವಾಬ್ದಾರಿಯುತ ಸ್ಥಾನದಲ್ಲಿರುವ ರೂಪಾ ಒಳ್ಳೆಯ ಕೆಲಸಗಳತ್ತ ಗಮನಹರಿಸುವುದನ್ನು ಬಿಟ್ಟು ಅಥವಾ ಇನ್ನೊಬ್ಬರನ್ನ ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡುವುದೇ ಅವರ ಪ್ರಾಥಮಿಕ ಕೆಲಸ ಎಂದು ತೋರುತ್ತದೆ. ಅದರಲ್ಲೂ ತನ್ನ ವಿರುದ್ಧ ಯಾವುದೋ ವೈಯಕ್ತಿಕ ಹಗೆ ಇಟ್ಟುಕೊಂಡು ಸುಳ್ಳು, ವೈಯಕ್ತಿಕ ನಿಂದನೆ ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಹಾಗೂ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್ ಶಾಟ್‌ಗಳ ಮೂಲಕ ಸಂಗ್ರಹಿಸಿರುವ ಫೋಟೊಗಳನ್ನು ತನ್ನ ತೇಜೋವಧೆ ಮಾಡಲು ರೂಪಾ ಬಳಸಿದ್ದಾರೆ. ಈ ಫೋಟೊಗಳನ್ನು ಕೆಲವು ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎನ್ನುವ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ, ಆ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ರೂಪಾ ಅವರನ್ನು ಆಗ್ರಹಿಸುತ್ತೇನೆ ಎಂದು ವಿವರಿಸಿದ್ದರು.
ಸೇವಾ ನಡತೆ ನಿಯಮಗಳ ಉಲ್ಲಂಘನೆಗಾಗಿ ರೂಪಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಿದ್ದೇನೆ. ಅಲ್ಲದೇ, ಐಪಿಸಿ ವಿವಿಧ ಸೆಕ್ಷನ್‌ಗಳ ಅನ್ವಯ ರೂಪಾ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದ್ದರು.
ಇದನ್ನು ಆಧರಿಸಿ ರೂಪಾ ಅವರು ಮಾನಹಾನಿ ಪ್ರಕರಣ ಹೂಡಿದ್ದು, ಸ್ವಯಂ ಹೇಳಿಕೆಯನ್ನೂ ದಾಖಲಿಸಿದ್ದರು. ಇದರ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇ ಪರಿಗಣಿಸಿತ್ತು. ಇದನ್ನು ರೋಹಿಣಿ ಸಿಂಧೂರಿ ಈಗ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.