ರೂಪಾ-ರೋಹಿಣಿ ಸಂಘರ್ಷ: ರೂಪಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

“ಆರೋಪಿ ರೂಪಾ ಅವರ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಸಾಕಷ್ಟು ದಾಖಲೆಗಳು ಇವೆ. ಹೀಗಾಗಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಪ್ರಕ್ರಿಯೆ ಮುಂದುವರಿಸುವುದು ಅಗತ್ಯ” ಎಂದು ನ್ಯಾಯಾಲಯವು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
IAS Rohini Sindhuri and IPS Roopa Moudgil
IAS Rohini Sindhuri and IPS Roopa Moudgil

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿದ್ದ ದಾವೆಯನ್ನು ಪರಿಗಣಿಸಿರುವ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ಅವರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಲು ಶುಕ್ರವಾರ ಆದೇಶಿಸಿದ್ದು, ರೂಪಾ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ 24ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಬಿ ಸಿ ಚಂದ್ರಶೇಖರ್‌ ಅವರು ಐಪಿಸಿ ಸೆಕ್ಷನ್‌ 500ರ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ ಮಾಡಿದ್ದು, ಏಪ್ರಿಲ್‌ 26ಕ್ಕೆ ವಿಚಾರಣೆ ಮುಂದೂಡಿದ್ದಾರ.

“ಆರೋಪಿ ರೂಪಾ ಅವರ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಸಾಕಷ್ಟು ದಾಖಲೆಗಳು ಇವೆ. ಹೀಗಾಗಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಪ್ರಕ್ರಿಯೆ ಮುಂದುವರಿಸುವುದು ಅಗತ್ಯ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

“ದೂರುದಾರೆ ರೋಹಿಣಿ ಸಿಂಧೂರಿ ಅವರು ಸ್ವಯಂ ಹೇಳಿಕೆ ದಾಖಲಿಸಿದ್ದಲ್ಲದೇ ಪೂರಕವಾಗಿ ಏಳು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 1-3 ದಾಖಲೆಗಳು ರೂಪಾ ಅವರ ಫೇಸ್‌ಬುಕ್ ಪೋಸ್ಟ್‌ನ ಸ್ಕ್ರೀನ್‌ಶಾಟ್‌, ನಾಲ್ಕನೇ ದಾಖಲೆಯು ಪೋಸ್ಟ್‌ಗಳ ಸಿ ಡಿಯಾಗಿದ್ದು, ಆರನೇ ದಾಖಲೆಯು ಭಾರತೀಯ ಸಾಕ್ಷ್ಯ ಕಾಯಿದೆ ಸೆಕ್ಷನ್‌ 65(ಬಿ) ಅಡಿ ಸರ್ಟಿಫಿಕೇಟ್‌ ಆಗಿದೆ. ಏಳನೇ ದಾಖಲೆಯು ಆರೋಪಿಯು ಮಾಡಿರುವ ಆರೋಪಗಳು ಪ್ರಕಟಗೊಂಡಿರುವ ಕನ್ನಡ ಪ್ರಭ ಪತ್ರಿಕೆಯ ಮುಖಪುಟದ ರೂಪದಲ್ಲಿದೆ. ಇವುಗಳನ್ನು ಪರಿಶೀಲಿಸಿದಾಗ ಆರೋಪಿ ರೂಪಾ ಅವರು ರೋಹಿಣಿ ವಿರುದ್ಧ ಫೇಸ್‌ಬುಕ್‌ ಮತ್ತು ಮುದ್ರಣ ಮಾಧ್ಯಮದಲ್ಲಿ ಮಾನಹಾನಿ ಆರೋಪ ಮಾಡಿದ್ದಾರೆ. ಆರೋಪಿ ಮಾಡಿರುವ ಆರೋಪಗಳು ಸತ್ಯವಲ್ಲವಾದರೆ ಅದು ದೂರುದಾರೆಯ ಘನತೆಗೆ ಧಕ್ಕೆ ಉಂಟು ಮಾಡಲಿವೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“ಆರೋಪಿ ರೂಪಾ ಅವರು 1-7ನೇ ದಾಖಲೆಗಳಲ್ಲಿರುವಂತೆ ಮಾಡಿರುವ ಆರೋಪಗಳು ಐಪಿಸಿ ಸೆಕ್ಷನ್‌ 499ರ ಅಡಿ ಬರುತ್ತವೆ. ಇದು ಐಪಿಸಿ ಸೆಕ್ಷನ್‌ 500ರ ಅಡಿ ಅಪರಾಧವಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

Also Read
ರೂಪ ವಿರುದ್ಧ ರೋಹಿಣಿ ಮಾನನಷ್ಟ ಮೊಕದ್ದಮೆ; ಒಂದು ಕೋಟಿ ರೂ ಪರಿಹಾರಕ್ಕೆ ಕೋರಿಕೆ

ಡಿ.ರೂಪಾ ಮೌದ್ಗಿಲ್ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾರ್ಚ್‌ 3ರಂದು ಖಾಸಗಿ ದೂರು ದಾಖಲಿಸಿದ್ದರು.

ಅಲ್ಲದೆ, ಮಾನಹಾನಿ ಮಾಡಿ ಮಾನಸಿಕ ಯಾತೆ ಉಂಟು ಮಾಡಿರುವುದಕ್ಕಾಗಿ ಡಿ ರೂಪಾ ಅವರಿಂದ ಒಂದು ಕೋಟಿ ರುಪಾಯಿಯನ್ನು ಪರಿಹಾರವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.

Attachment
PDF
Rohini Sindhuri Vs Roopa Moudgil.pdf
Preview

Related Stories

No stories found.
Kannada Bar & Bench
kannada.barandbench.com