Sidharth Luthra, SG Tushar Mehta, ASG SV Raju, AM Singhvi, Menaka Guruswamy  
ಸುದ್ದಿಗಳು

ಐ- ಪ್ಯಾಕ್‌ ದಾಳಿ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರ ನಡುವೆ ತೀವ್ರ ಮಾತಿನ ಚಕಮಕಿ

ಇ ಡಿಯನ್ನು ಆಯುಧದಂತೆ ಬಳಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರು ವಾದಿಸಿದರೆ, ಸಂಸ್ಥೆಯನ್ನು ಹೆದರಿಸಲಾಗುತ್ತಿದೆ ಎಂದರು ಇ ಡಿ ಪರ ವಕೀಲರು.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್ ಪ್ಯಾಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಐ-ಪ್ಯಾಕ್‌) ಆವರಣ ಮತ್ತು ಅದರ ಸಹ-ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ತಾನು ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ ಪ. ಬಂಗಾಳ ಸರ್ಕಾರ ಅಡ್ಡಿಪಡಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆ ವಕೀಲರ ಚುಟುಕಾದ ಆದರೆ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು.

ಇ ಡಿಯನ್ನು ಆಯುಧದಂತೆ ಬಳಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂತ್ರಾ ವಾದಿಸಿದರೆ ಸಂಸ್ಥೆಯನ್ನು ಹೆದರಿಸಲಾಗುತ್ತಿದೆ ಎಂದು ಇ ಡಿಯನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಪ್ರತ್ಯುತ್ತರ ನೀಡಿದರು.

ವಿಚಾರಣೆ ವೇಳೆ ಸಂವಿಧಾನದ 32ನೇ ವಿಧಿಯಡಿ (ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಎಡತಾಕುವ ನಾಗರಿಕರ ಹಕ್ಕು) ಇ ಡಿ ಸಲ್ಲಿಸಿರುವ ಅರ್ಜಿಯ ಸ್ವೀಕಾರಾರ್ಹತೆ ಕುರಿತು ಚರ್ಚೆ ನಡೆಯಿತು. 32ನೇ ವಿಧಿಯಡಿ ಪರಿಹಾರವು ಸರ್ಕಾರಕ್ಕೆ ಸಂಬಂಧಿಸಿದಂತೆ ನಾಗರಿಕರಿಗೆ ಲಭ್ಯವಿರುವ ಹಕ್ಕಾಗಿದ್ದು, ಸರ್ಕಾರಿ ಸಂಸ್ಥೆಯಾದ ಇಡಿ ಅದನ್ನು ಬಳಸಲು ಸಾಧ್ಯವಿಲ್ಲ ಎಂದು ಪ. ಬಂಗಾಳ ಸರ್ಕಾರ ವಾದಿಸಿತು. ಕೇಂದ್ರ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಈ ವಿಷಯ ಮಹತ್ವದ ಸಂವಿಧಾನಾತ್ಮಕ ತತ್ವವನ್ನು ಒಳಗೊಂಡಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸುತ್ತಿರುವ ಮತ್ತೊಬ್ಬ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಅವರು 32ನೇ ವಿಧಿ ಕುರಿತು ನ್ಯಾಯಾಲಯದ ಮನವೊಲಿಸಿದ್ದಾರೆ ಎಂದು ಮೆಹ್ತಾ ದೂರಿದರು. ಇದಕ್ಕೆ ಆಕ್ಷೇಪಿಸಿದ ಸಿಂಘ್ವಿ  "ಅವರು ಹಾಗೆ ಹೇಳಬಾರದು.  ನ್ಯಾಯಾಲಯಗಳು ನಮ್ಮ ವಾದಗಳನ್ನು ಆದೇಶದಲ್ಲಿ ದಾಖಲಿಸಿದ್ದು, ನಿರ್ವಹಣೆ ಸಂಪೂರ್ಣವಾಗಿ ಮುಕ್ತವಾಗಿರುತ್ತದೆ ಎಂಬುದನ್ನು ಹೇಳುತ್ತದೆ. ಅವರ ಪರ ವಕೀಲರು ಅದನ್ನು ಅವರಿಗೆ ಹೇಳಬೇಕಿತ್ತು" ಎಂದು ಸಿಂಘ್ವಿ ಹೇಳಿದರು.

 ಇದರ ಜೊತೆಗೆ, ನಿಶಾಂತ್ ಕುಮಾರ್ ಸಲ್ಲಿಸಿದ ಹೊಸ ರಿಟ್ ಅರ್ಜಿಗೆ ನೋಟಿಸ್ ಜಾರಿಗೊಳಿಸುವುದಕ್ಕೆ ಲೂತ್ರಾ ಅವರೊಂದಿಗೆ ರಾಜ್ಯ ಸರ್ಕಾರದ ಪರ ವಾದ ಮಂಡಿಸುತ್ತಿರುವ ಮತ್ತೊಬ್ಬ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ವಿರೋಧ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಪ್ರಕರಣವನ್ನು ಮಾರ್ಚ್ 18ಕ್ಕೆ ಮುಂದೂಡಿತು.

ಐ-ಪ್ಯಾಕ್‌ ಆವರಣ ಮತ್ತು ಅದರ ಸಹ-ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ತಾನು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಅಲ್ಲಿಗೆ ಧಾವಿಸಿ ಕೆಲವು ಕಡತಗಳನ್ನು ಹೊತ್ತೊಯ್ದ ಆರೋಪ ಎದುರಿಸುತ್ತಿರುವ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಇ ಡಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಐ-ಪ್ಯಾಕ್‌ನ (ಐ-ಪಿಎಸಿ: ಇಂಡಿಯನ್‌ ಪೊಲಿಟಿಕಲ್‌ ಆಕ್ಷನ್‌ ಕಮಿಟಿ) ಕಚೇರಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಗೂ ಪಶ್ಚಿಮ ಬಂಗಾಳ ಚುನಾವಣೆಗೂ ನಂಟಿದೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ದೂರಿದರೆ ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಇ ಡಿ ಹೇಳಿಕೊಂಡಿತ್ತು.