ಥರ್ಡ್ ಪಾರ್ಟಿ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸದೆ ಇದ್ದರೂ ವಾಹನ ಮಾಲೀಕ ಸಾವನ್ನಪ್ಪಿದ್ದರೆ ಆ ಮಾಲೀಕನ ಉತ್ತರಾಧಿಕಾರಿ ಮೋಟಾರು ವಾಹನ ಕಾಯಿದೆ- 1988 ರ ಸೆಕ್ಷನ್ 163ಎ ಅಡಿಯಲ್ಲಿ ನೋ ಫಾಲ್ಟ್ ಪರಿಹಾರ ಪಡೆಯಲು ಅರ್ಹರೇ ಎಂಬುದಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಸುಪ್ರೀಂ ಕೋರ್ಟ್ ವರ್ಗಾಯಿಸಿದೆ [ವಾಕಿಯಾ ಆಫ್ರಿನ್ (ಅಪ್ರಾಪ್ತೆ) ಮತ್ತು ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನಡುವಣ ಪ್ರಕರಣ ].
ಸೆಕ್ಷನ್ 163ಎ ಪ್ರಕಾರ, ಅಧಿಕೃತ ವಿಮಾದಾರರಿಂದ ವಿಮೆ ಮಾಡಿಸಿಕೊಂಡ ಮೋಟಾರು ವಾಹನದ ಮಾಲೀಕರು, ಮೋಟಾರು ವಾಹನ ಅಪಘಾತದಿಂದ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾಗಿದ್ದಾಗ, ಅಪಘಾತಕ್ಕೀಡಾದವರ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ಪಾವತಿಸಲು ಹೊಣೆಗಾರರು.
ಅಪಘಾತದಲ್ಲಿ ಥರ್ಡ್ ಪಾರ್ಟಿ ತೊಂದರೆಗೀಡಾಗಿದ್ದರೆ ಮಾತ್ರ ನೋ ಫಾಲ್ಟ್ ಪರಿಹಾರ ಅನ್ವಯಿಸುತ್ತದೆ ಅಂದರೆ ಥರ್ಡ್ ಪಾರ್ಟಿ ವಾಹನ ಒಳಗೊಂಡಿರದ ಅಪಘಾತ ಪ್ರಕರಣಗಳಿಗೆ ವಿಮೆ ಅನ್ವಯಿಸುವುದಿಲ್ಲ ಎಂಬ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ವಿಭಾಗೀಯ ಪೀಠ ಒಪ್ಪಲಿಲ್ಲ.
"ಹೊಣೆಗಾರಿಕೆ ಎಂಬುದು ಮೂಲಭೂತವಾಗಿ ಮಾಲೀಕರದ್ದೇ ಆಗಿರುತ್ತದೆ ಆದರೆ ವಿಮೆದಾರರು/ಮಾಲೀಕರ ಜೊತೆಗೆ ಈ ಸೆಕ್ಷನ್ ಅಧಿಕೃತ ವಿಮಾದಾರರನ್ನು ಸಹ ಹೊಣೆಗಾರರನ್ನಾಗಿ ಮಾಡುತ್ತದೆ. ಆದ್ದರಿಂದ, ಅಪಘಾತದಲ್ಲಿ ಭಾಗಿಯಾದ ವಾಹನದ ಹೆಸರಿನಲ್ಲಿ ಮಾನ್ಯವಾದ ಪಾಲಿಸಿ ನೀಡಿದ್ದಾಗ, ಸೆಕ್ಷನ್ 163 ಎ ಅಡಿಯಲ್ಲಿನ ಕ್ಲೇಮ್ ಮೋಟಾರು ಅಪಘಾತದ ಕಾರಣದಿಂದಾಗಿ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ ನಿರ್ಲಕ್ಷ್ಯವನ್ನು ಸಾಬೀತುಪಡಿಸುವ ಯಾವುದೇ ಅವಶ್ಯಕತೆ ಇಲ್ಲದೆ ಪ್ರತಿಯೊಂದು ಕ್ಲೇಮ್ ಅನ್ನು ಒಳಗೊಳ್ಳಲಿದ್ದು ಅದು ಥರ್ಡ್ ಪಾರ್ಟಿಯ ಕ್ಲೇಮ್‌ಗೆ ಸೀಮಿತವಾಗಿರದು" ಎಂಬುದನ್ನು ಪ್ರಸ್ತಾಪಿಸಿದ ನ್ಯಾಯಾಲಯ ಈ ದೃಷ್ಟಿಕೋನ ಉಳಿದ ಸಮನ್ವಯ ಪೀಠದ ತೀರ್ಪುಗಳೊಂದಿಗೆ ಮಖಾಮುಖಿಯಾಗುವುದರಿಂದ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಿತು.
ಟೈರ್ ಸ್ಫೋಟಗೊಂಡ ಪರಿಣಾಮ ವಾಹನ ಗೋಡೆಗೆ ಡಿಕ್ಕಿ ಹೊಡೆದು ತನ್ನ ಹೆತ್ತವರು ಸಾವನ್ನಪ್ಪಿದ್ದರಿಂದ ತನಗೆ ಪರಿಹಾರ ನೀಡಬೇಕೆಂದು ಅಪ್ರಾಪ್ತ ವಯಸ್ಸಿನ ಬಾಲಕಿ ಕೋರಿದ್ದರು.
ಆದರೆ ಪರಿಹಾರ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿಮಾ ಕಂಪೆನಿ ಅಪ್ರಾಪ್ತ ಮಗು ಮೃತ ವಾಹನ ಮಾಲೀಕರ ಆಸ್ತಿಯ ಏಕೈಕ ವಾರಸುದಾರ ಎಂದು ಹೇಳಿತ್ತು. ಪರಿಹಾರ ನೀಡಿದರೆ ಅಪಘಾತ ಮಾಡಿದವರು (ಉತ್ತರಾಧಿಕಾರಿಯಾಗಿ ಮತ್ತು ಬೇರೆ ವಾಹನ (ಥರ್ಡ್ ಪಾರ್ಟಿ) ಅಪಘಾತಕ್ಕೀಡಾಗಿಲ್ಲದೆ ಇರುವ ಕಾರಣ) ಮತ್ತು ಪರಿಹಾರದ ಫಲಾನುಭವಿ ಇಬ್ಬರೂ ಹೊಣೆಗಾರರಾಗುವ ಅಸಹಜ ಪರಿಸ್ಥಿತಿಗೆ ಕಾರಣವಾಗುತ್ತದೆ ಎಂದು ವಾದಿಸಿತ್ತು.