Qutub Minar
Qutub Minar 
ಸುದ್ದಿಗಳು

ಕುತುಬ್ ಮಿನಾರ್ ಬಳಿಯ ಮೊಘಲರ ಕಾಲದ ಮಸೀದಿ ಸಂರಕ್ಷಿತ ಸ್ಮಾರಕವೇ? ಪುರಾತತ್ವ ಇಲಾಖೆಗೆ ದೆಹಲಿ ಹೈಕೋರ್ಟ್‌ ಪ್ರಶ್ನೆ

Bar & Bench

ಕುತುಬ್ ಮಿನಾರ್ ಬಳಿ ಇರುವ ಮೊಘಲರ ಕಾಲದ ಮಸೀದಿ ಸಂರಕ್ಷಿತ ಸ್ಮಾರಕವೇ ಹಾಗೂ ಅಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಬಹುದೇ ಎಂಬುದನ್ನು ತಿಳಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ] ದೆಹಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ [ದೆಹಲಿ ವಕ್ಫ್ ಮಂಡಳಿಯ ವ್ಯವಸ್ಥಾಪಕ ಸಮಿತಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಮಸೀದಿಯಲ್ಲಿ ಜನ ಪ್ರಾರ್ಥನೆ ಸಲ್ಲಿಸುವುದನ್ನು ತಡೆಯುವ ಅಧಿಕಾರಿಗಳ ನಿರ್ಧಾರ ಪ್ರಶ್ನಿಸಿ ಮಸೀದಿಯ ವ್ಯವಸ್ಥಾಪಕ ಸಮಿತಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಪ್ರತೀಕ್ ಜಲನ್ ಈ ಮಾಹಿತಿ ಬಯಸಿದರು.  

“ಈ ವಾದ ಮತ್ತು ಎಎಸ್‌ಐ ಪರ ವಕೀಲರು ಸಲ್ಲಿಸಿದ ಪ್ರಾಥಮಿಕ ವಾದ ಆಧರಿಸಿ ಜನವರಿ 24, 1914ರ ಅಧಿಸೂಚನೆ ಅಡಿಯಲ್ಲಿ ಮಸೀದಿಯನ್ನು ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಸೇರಿಸಲಾಗಿದೆಯೇ? ಹಾಗಿದ್ದಲ್ಲಿ ಮಸೀದಿಯಲ್ಲಿ ಪ್ರಾರ್ಥನೆಗೆ ಅನುಮತಿ ನೀಡಿರುವುದರ ಪರಿಣಾಮಗಳು ಪರಿಗಣಿಸಬೇಕಾದ ವಿಷಯಗಳಾಗುತ್ತವೆ” ಎಂದು ಜುಲೈ 20ರಂದು ಆದೇಶ ಹೊರಡಿಸಲಾಗಿದೆ.

ಮಸೀದಿ 1914ರ ಅಧಿಸೂಚನೆಯಡಿ ಎಎಸ್‌ಐ ಸೂಚಿಸಿದಂತೆ ಸಂರಕ್ಷಿತ ಸ್ಮಾರಕದ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ದೆಹಲಿ ವಕ್ಫ್ ಮಂಡಳಿ ನೇಮಿಸಿದ ಅರ್ಜಿದಾರರ ಸಮಿತಿ  ವಾದಿಸಿದ್ದು ಮೇ 13, 2022ರವರೆಗೆ ಅಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿತ್ತು. ಅಂದಿನಿಂದ ಅಧಿಕಾರಿಗಳು ವ್ಯವಸ್ಥಾಪಕ ಸಮಿತಿ ಹೊರತುಪಡಿಸಿ ಯಾವುದೇ ಸೂಚನೆ ನೀಡದೆ ಮಸೀದಿಯಲ್ಲಿ ಪ್ರಾರ್ಥನೆ ಸ್ಥಗಿತಗೊಳಿಸಿದ್ದಾರೆ ಎಂದಿದೆ.

ವಿವಾದಾತ್ಮಕ ಮಸೀದಿ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಲಾದ ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಕುವ್ವಾತುಲ್ ಇಸ್ಲಾಂ ಮಸೀದಿಗಿಂತ ಭಿನ್ನವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ವಾದ ಆಲಿಸಿದ ಪೀಠ "ಕಕ್ಷಿದಾರರ ಪರ ವಕೀಲರು ಇಂದಿನಿಂದ ಮೂರು ವಾರಗಳಲ್ಲಿ ತಾವು ಅವಲಂಬಿಸಲು ಬಯಸುವ ಯಾವುದೇ ಪ್ರಾಧಿಕಾರಗಳ ಪ್ರತಿಗಳೊಂದಿಗೆ ತಮ್ಮ ವಾದವನ್ನು ಲಿಖಿತರೂಪದಲ್ಲಿ  ಸಲ್ಲಿಸಲು ನಿರ್ದೇಶಿಸಲಾಗಿದೆ" ಎಂದು ನ್ಯಾಯಾಲಯ ತಿಳಿಸಿದೆ.

1914ರ ಅಧಿಸೂಚನೆಗೆ ಸಂಬಂಧಿಸಿದಂತೆ ಲಭ್ಯವಿರುವ ಯಾವುದೇ ದಾಖಲೆಗಳನ್ನು ಪ್ರಕರಣದ ಮುಂದಿನ ವಿಚಾರಣೆ ನಡೆಯುವ ಅಕ್ಟೋಬರ್ 13ರೊಳಗೆ ಹಾಜರುಪಡಿಸುವಂತೆ ಎಎಸ್ಐಗೆ ನ್ಯಾಯಾಲಯ ಆದೇಶಿಸಿದೆ.