Andhra Pradesh High Court, Mobile phone 
ಸುದ್ದಿಗಳು

ಪೊಲೀಸರಿಗೆ ಮೊಬೈಲ್ ನೀಡಲು ನಿರಾಕರಿಸವುದು ಅಸಹಕಾರ ಎನಿಸಿಕೊಳ್ಳದು: ಆಂಧ್ರಪ್ರದೇಶ ಹೈಕೋರ್ಟ್

ಆರೋಪಿಗಳು ತಮ್ಮ ಮೊಬೈಲ್ ಫೋನ್‌ ಪೊಲೀಸರಿಗೆ ಸಲ್ಲಿಸಲು ವಿಫಲವಾಗಿದ್ದರು. ಹೀಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ಸರ್ಕಾರ ವಾದಿಸಿತ್ತು.

Bar & Bench

ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ತನಿಖಾ ಸಂಸ್ಥೆಗೆ ಸಲ್ಲಿಸದೆ ಇರುವುದನ್ನು ಅಸಹಕಾರ ಎಂದು ಕರೆಯಲಾಗದು ಎಂಬುದಾಗಿ ಆಂಧ್ರಪ್ರದೇಶ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಅವುತ್ತು ಶ್ರೀನಿವಾಸ್ ರೆಡ್ಡಿ ಮತ್ತು ಠಾಣಾಧಿಕಾರಿ ನಡುವಣ ಪ್ರಕರಣ ].

ತೆಲುಗು ದೇಶಂ ಪಕ್ಷದ (ಟಿಡಿಪಿ) ಕಚೇರಿಯ ಮೇಲೆ 2021ರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಡೆಸಿದ ಆಪಾದಿತ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಸಂಸದ ಎನ್ ಸುರೇಶ್ ಬಾಬು ಮತ್ತು ಉದ್ಯಮಿ ಅವುಟು ಶ್ರೀನ್ವಾಸ ರೆಡ್ಡಿ ಅವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿ ವಿಆರ್‌ಕೆ ಕೃಪಾ ಸಾಗರ್ ಅವರು ಈ ವಿಚಾರ ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಮೊಬೈಲ್ ಫೋನ್ಗಳನ್ನು ಪೊಲೀಸರಿಗೆ ಸಲ್ಲಿಸಲು ವಿಫಲವಾಗಿದ್ದರು. ಹೀಗಾಗಿ ಅವರಿಗೆ ಜಾಮೀನು ನೀಡಬಾರದು. ವಾಟ್ಸಾಪ್‌ ಸಂದೇಶಗಳನ್ನು ಪಡೆಯಲು ಮತ್ತು ಅಪರಾಧದ ಗೂಗಲ್‌ ಟೈಮ್‌ಲೈನ್‌ಗಳನ್ನು ಸಂಗ್ರಹಿಸಲು ಫೋನ್‌ ಪೊಲೀಸರಿಗೆ ಅಗತ್ಯವಿದೆ ಎಂದು ಸರ್ಕಾರ ವಾದಿಸಿತ್ತು. 

 ಆದರೆ ಫೋನ್‌ ವಶಪಡಿಸಿಕೊಳ್ಳಲಾಗಲಿಲ್ಲ ಎಂಬ ಕಾರಣಕ್ಕೆ ಉಳಿದ ಎಲೆಕ್ಟ್ರಾನಿಕ್‌ ಸಾಕ್ಷ್ಯ ಪಡೆಯಲು ಹಿಂಜರಿಯುವಂತಿಲ್ಲ ಎಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿತು.

 ಸಂವಿಧಾನದ 20(3)ನೇ ವಿಧಿಯಡಿ (ಸ್ವಯಂ ದೋಷಾರೋಪಣೆ ವಿರುದ್ಧದ  ಹಕ್ಕು)  ಒದಗಿಸಲಾದ ರಕ್ಷಣೆಯ ಹಿನ್ನೆಲೆಯಲ್ಲಿ ಗ್ಯಾಜೆಟ್‌ ಆನ್‌ಲೈನ್‌ ಖಾತೆಗಳ ಪಾಸ್‌ವರ್ಡ್‌ ನೀಡುವಂತೆ ಆರೋಪಿಗೆ ಒತ್ತಾಯಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಅದು ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಸುಮಾರು 34 ಆರೋಪಿಗಳಿಗೆ ಈಗಾಗಲೇ ಹೈಕೋರ್ಟ್ ಅಥವಾ ವಿಚಾರಣಾ ನ್ಯಾಯಾಲಯಗಳು ಜಾಮೀನು ನೀಡಿರುವುದನ್ನು ಗಮನಿಸಿದ ನ್ಯಾಯಾಲಯ  ಅರ್ಜಿದಾರರ ಉದ್ಯೋಗ, ನಿವಾಸ  ಮತ್ತು ಈ ಎಲ್ಲಾ ವರ್ಷಗಳಲ್ಲಿ ಅವರು ತನಿಖೆಗೆ ಲಭ್ಯವಿರುವುದನ್ನು ಗಮನಿಸಿದಾಗ ಅವರು ವಿಚಾರಣೆಯಿಂದ ತಪ್ಪಿಸುವ ಸಾಧ್ಯತೆಯಿಲ್ಲ ಎಂಬುದನ್ನು ಅದು ಸೂಚಿಸುತ್ತದೆ ಎಂದು ಪೀಠ ಹೇಳಿದೆ.

ಅರ್ಜಿದಾರರ ಪರ ಹಿರಿಯ ವಕೀಲರಾದ ಸಿದ್ದಾರ್ಥ್ ದವೆ, ಪಿ ವೀರಾರೆಡ್ಡಿ ಮತ್ತು ಪಿ ಸುಧಾಕರ ರೆಡ್ಡಿ ವಾದ ಮಂಡಿಸಿದ್ದರು. ಸರ್ಕಾರವನ್ನು ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಸಿ ಲಕ್ಷ್ಮೀ ನಾರಾಯಣ ಪ್ರತಿನಿಧಿಸಿದ್ದರು.