CJI DY Chandrachud, Justice SK Kaul, Justice BR Gavai, Justice Surya Kant, Justice Sanjiv Khanna 
ಸುದ್ದಿಗಳು

'ಮುದ್ರೆರಹಿತ ಮಧ್ಯಸ್ಥಿಕೆ ಒಪ್ಪಂದ ಮಾನ್ಯವೇ?' ಏಳು ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ಮುದ್ರೆಯಿಲ್ಲದ ಮಧ್ಯಸ್ಥಿಕೆ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಎನ್ಎನ್ ಗ್ಲೋಬಲ್ ಮರ್ಕಂಟೈಲ್ ಮತ್ತು ಇಂಡೋ ಯೂನಿಕ್ ಫ್ಲೇಮ್ ನಡುವಣ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ನ್ಯಾಯಾಲಯ ಮರುಪರಿಶೀಲಿಸುತ್ತಿದೆ.

Bar & Bench

ಮುದ್ರೆರಹಿತ ಮಧ್ಯಸ್ಥಿಕೆ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಎನ್‌ಎನ್‌ ಗ್ಲೋಬಲ್‌ ಮರ್ಕಂಟೈಲ್‌ ಮತ್ತು ಇಂಡೋ ಯೂನಿಕ್‌ ಫ್ಲೇಮ್‌ ನಡುವಣ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಏಳು ಸದಸ್ಯರ ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ [ಭಾಸ್ಕರ್ ರಾಜು ಮತ್ತಿತರರು ಹಾಗೂ ಧರ್ಮರತ್ನಾಕರ ರಾಯ್‌ ಬಹದ್ದೂರ್‌ ಆರ್ಕಾಟ್‌ ನಾರಾಯಣಸ್ವಾಮಿ ಮೊದಲಿಯಾರ್‌ ಚತ್ರಂ ಮತ್ತಿತರ ಧರ್ಮದತ್ತಿ ಸಂಸ್ಥೆಗಳು ಹಾಗೂ ಇನ್ನಿತರರ ನಡುವಣ ಪ್ರಕರಣ].

ಏಪ್ರಿಲ್ 25 ರಂದು ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಮುದ್ರೆಯಿಲ್ಲದ ಮಧ್ಯಸ್ಥಿಕೆ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಎನ್‌ಎನ್‌ ಗ್ಲೋಬಲ್‌ ಮರ್ಕಂಟೈಲ್‌ ಮತ್ತು ಇಂಡೋ ಯೂನಿಕ್‌ ಫ್ಲೇಮ್‌ ನಡುವಣ ಪ್ರಕರಣದಲ್ಲಿ 3:2  ಬಹುಮತದ ತೀರ್ಪು ನೀಡಿತ್ತು.

ಈ ತೀರ್ಪನ್ನು ಒಪ್ಪುವುದಾದರೆ ಮಧ್ಯಂತರ ಕ್ರಮಗಳಿಗಾಗಿ ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆಯ ಸೆಕ್ಷನ್ 9 ರ ಅಡಿಯಲ್ಲಿ ಯಾವುದೇ ಅರ್ಜಿಗಳನ್ನು ಸಲ್ಲಿಸಲಾಗದು ಎಂದು ಹಿರಿಯ ವಕೀಲ ಅರವಿಂದ ದಾತಾರ್ ಪ್ರತಿಪಾದಿಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠ  ಪ್ರಕರಣ ಮಹತ್ವದ್ದು ಎಂದು ಅಭಿಪ್ರಾಯಪಟ್ಟಿತು.

"ಎನ್‌ಎನ್ ಗ್ಲೋಬಲ್ ಮರ್ಕೆಂಟೈಲ್ ಮತ್ತು ಇಂಡೋ ಯೂನಿಕ್ ಫ್ಲೇಮ್‌ ನಡುವಣ ಪ್ರಕರಣದ ವಿಸ್ತೃತ ಪರಿಣಾಮಗಳಿಗೆ ಸಂಬಂಧಿಸಿದಂತೆ, ಐವರು ನ್ಯಾಯಮೂರ್ತಿಗಳಿದ್ದ ಪೀಠ ನೀಡಿದ್ದ ತೀರ್ಪಿನ ಸೂಕ್ತತೆಯನ್ನು ಮರುಪರಿಶೀಲಿಸಲು ಏಳು ನ್ಯಾಯಮೂರ್ತಿಗಳ ಪೀಠದೆದುರು ಪ್ರಕರಣವನ್ನು ಇರಿಸಲಾಗುವುದು. ಅಕ್ಟೋಬರ್ 11ಕ್ಕೆ ಏಳು ನ್ಯಾಯಮೂರ್ತಿಗಳ ಪೀಠದೆದುರು ಪ್ರಕರಣವನ್ನು ಪಟ್ಟಿ ಮಾಡಿ" ಎಂದು ಅದು ಸೂಚಿಸಿತು.

ಕ್ಯುರೇಟಿವ್ ಅರ್ಜಿಗಳ ಸೀಮಿತ ವ್ಯಾಪ್ತಿಯ ಬಗ್ಗೆ ಹಿರಿಯ ವಕೀಲ ಶ್ಯಾಮ್ ದಿವಾನ್ ಕಳವಳ ವ್ಯಕ್ತಪಡಿಸಿದಾಗ, ನ್ಯಾಯಾಲಯವು " ದೇಶಾದ್ಯಂತ ಮಧ್ಯಸ್ಥಿಕೆದಾರರು ಒಪ್ಪಂದದ ಮುದ್ರೆ ಇಲ್ಲದೆ ಇರುವುದನ್ನು ನೋಡಿ ಮತ್ತೆ ಪ್ರಕರಣ ತೆರೆಯಿರಿ ಎನ್ನುವಂತಹ ಸ್ಥಿತಿಯನ್ನು ಎದುರಿಸುತ್ತಿದ್ದಾರೆ… ಆದ್ದರಿಂದ ಈ ಅನಿಶ್ಚಿತತೆ ಹೋಗಲಾಡಿಸಬೇಕಿದೆ" ಎಂದು ನುಡಿಯಿತು,

ಕಳೆದ ಜುಲೈನಲ್ಲಿ ಈ ಸಂಬಂಧ ನೋಟಿಸ್‌ ಜಾರಿ ಮಾಡಿದ್ದ ಸುಪ್ರೀಂ ಕೋರ್ಟ್‌ ಮುದ್ರೆರಹಿತ ಒಪ್ಪಂದ ಪತ್ರದಲ್ಲಿ ಮಧ್ಯಸ್ಥಿಕೆ ಒಪ್ಪಂದ ಮಾನ್ಯವೇ ಎಂಬ ಪ್ರಶ್ನೆಗೆ ಸಂಬಂಧಿಸಿದ ಕ್ಯುರೇಟಿವ್‌ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ  ವಿಚಾರಣೆ ನಡೆಸಲು ಸಮ್ಮತಿಸಿತ್ತು.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜುಲೈ 2021ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯಿಂದ ಪ್ರಕರಣ ತಲೆ ಎತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಕಾರರ ನಡುವಿನ ಭೋಗ್ಯದ ಕರಾರು ಹಾಗೂ ಅದರೊಟ್ಟಿಗಿನ ಮಧ್ಯಸ್ಥಿಕೆ ಒಪ್ಪಂದವು ಸಿಂಧು ಎಂದು ಹೇಳಿದ್ದ ಕರ್ನಾಟಕ ಹೈಕೋರ್ಟ್‌ ಮಧ್ಯಸ್ಥಿಕೆದಾರರನ್ನು ನೇಮಿಸಿತ್ತು.

ಈ ಆದೇಶವನ್ನು ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ತ್ರಿಸದಸ್ಯ ಪೀಠವು ಫೆಬ್ರವರಿ 2020ರಲ್ಲಿ ಬದಿಗೆ ಸರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ವಿಚಾರಗಳನ್ನು ತಿಳಿಸಿತು.