ವೈಟ್ ಟಾಪಿಂಗ್ ರಸ್ತೆಗಳು ವೈಜ್ಞಾನಿಕವಾಗಿವೆಯೇ, ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ನಿರ್ದೇಶನ ನೀಡಿದೆ.
ಬೆಂಗಳೂರು ಮಹಾನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಹಾಗೂ ಮಳೆನೀರು ಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಕೋರಮಂಗಲದ ನಿವಾಸಿ ವಿಜಯ್ ಮೆನನ್ 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ನೀವು ಎಲ್ಲೆಡೆ ವೈಟ್ ಟಾಪಿಂಗ್ ರಸ್ತೆಗಳನ್ನು ಮಾಡುತ್ತಿದ್ದೀರಿ, ಹಾಗಾಗಿ ಆ ರಸ್ತೆಗಳು ವೈಜ್ಞಾನಿಕವಾಗಿ ಎಷ್ಟು ಸೂಕ್ತ ಎಂಬ ಬಗ್ಗೆ ನೀವೆ ವಿವರಣೆ ನೀಡಬೇಕು. ಏಕೆಂದರೆ ವೈಟ್ ಟಾಪಿಂಗ್ ರಸ್ತೆಗಳು ಸೂಕ್ತವಲ್ಲ ಎಂಬ ಹಲವು ವರದಿಗಳಿವೆ. ಸಾಮಾನ್ಯ ಡಾಂಬರು ರಸ್ತೆಯಲ್ಲಿ ಮಳೆ ನೀರು ಬಿದ್ದರೆ ಅದು ಮಣ್ಣಿನಲ್ಲಿ ಹಿಂಗಿ ಹೋಗುತ್ತದೆ. ಆದರೆ ವೈಟ್ ಟಾಪಿಂಗ್‌ನಲ್ಲಿ ಹಾಗೆ ಆಗುವುದಿಲ್ಲ. ಆದ್ದರಿಂದ ವೈಟ್ ಟಾಪಿಂಗ್ ರಸ್ತೆ ವೈಜ್ಞಾನಿಕವಾಗಿ ಸರಿಯೇ? ತಪ್ಪೇ ತಿಳಿಸಿ” ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು.
ಇದಕ್ಕೆ ಬಿಬಿಎಂಪಿ ಪರ ವಕೀಲರು “ಮುಂದಿನ ವಿಚಾರಣೆ ವೇಳೆಗೆ ಉತ್ತರ ನೀಡಲಾಗುವುದು. ಅಲ್ಲಿಯವರೆಗೆ ಸಮಯ ನೀಡಬೇಕು” ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ, ಬಿಬಿಎಂಪಿ ಸಲ್ಲಿಕೆ ಮಾಡಿದ ಪ್ರಮಾಣಪತ್ರದಲ್ಲಿ ಗುಂಡಿಗಳನ್ನು ಮುಚ್ಚುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದನ್ನು ಪೀಠ ಗಮನಿಸಿತು. “ನೀವು ರಸ್ತೆ ಗುಂಡಿಗಳನ್ನು ಮುಚ್ಚುವ ದುರಸ್ತಿ ಕಾರ್ಯವನ್ನು ಮೇಲಿಂದ ಮೇಲೆ ಕೈಗೊಳ್ಳುತ್ತೀರೋ ಅಥವಾ ಮುಂಗಾರು ಮಳೆ ಬಂದಾಗ ಮಾತ್ರ ಮಾಡುತ್ತೀರೋ” ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು.
ಮುಂದುವರಿದು ನ್ಯಾಯಾಲಯವು “ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ಕಾಲ ಕಾಲಕ್ಕೆ ಮಾಡುತ್ತೀರೋ ಅಥವಾ ಮುಂಗಾರು ಮಳೆ ಆರಂಭವಾದ ಮೇಲೆ ಮಾಡುತ್ತೀರೋ ಅಥವಾ ಪಿಐಎಲ್ ದಾಖಲಾದಾಗ ಮಾತ್ರ ಮಾಡುತ್ತೀರೋ ಎನ್ನುವುದನ್ನು ತಿಳಿಸಿ. ಜೊತೆಗೆ ವೈಟ್ ಟಾಪಿಂಗ್ ಬಗ್ಗೆ ಸಮಗ್ರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ” ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.