Karnataka High Court, bescom and UPI 
ಸುದ್ದಿಗಳು

ಯುಪಿಐ ಸ್ಕ್ಯಾನರ್‌ ಮೂಲಕ ಹಣ ಸ್ವೀಕರಿಸಲು ನಿರಾಕರಿಸಿರುವ ಬೆಸ್ಕಾಂ ನಡೆ ವಿಚಿತ್ರ: ಹೈಕೋರ್ಟ್‌ ಅಸಮಾಧಾನ

“ಸರ್ಕಾರವು ಡಿಜಿಟಲ್‌ ವ್ಯವಸ್ಥೆಗೆ ಬನ್ನಿ ಎಂದು ಮನೆಯ ಮೇಲೆ ನಿಂತು ಸಾರುತ್ತಿದೆ. ನೀವು ಕರೆನ್ಸಿ ನೋಟುಗಳ ಮೂಲಕ ಹಣ ಸಂಗ್ರಹಿಸಲು ಬಯಸುತ್ತೀರಾ” ಎಂದು ಬೆಸ್ಕಾಂಗೆ ಚಾಟಿ ಬೀಸಿದ ಹೈಕೋರ್ಟ್.

Bar & Bench

ಏಕೀಕೃತ ಅಂತರ ಸಂಪರ್ಕ ಸಾಧನ ಪಾವತಿ (ಯುಪಿಐ ಸ್ಕ್ಯಾನರ್) ಮೂಲಕ ಠೇವಣಿ ಹಣ ಪಡೆಯಲು ನಿರಾಕರಿಸಿದ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದ (ಬೆಸ್ಕಾಂ) ಕ್ರಮಕ್ಕೆ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್‌, “ತರಕಾರಿ ಸೇರಿ ಎಲ್ಲಾ ಅಂಗಡಿಯವರೂ ಯುಪಿಐ ಮೂಲಕ ಹಣ ಪಡೆಯುತ್ತಾರೆ. ನೀವು ತೆಗೆದುಕೊಳ್ಳುವುದಿಲ್ಲ ಎಂದರೆ ಹೇಗೆ?” ಎಂದು ಮೌಖಿಕವಾಗಿ ಚಾಟಿ ಬೀಸಿದೆ.

ವಾಣಿಜ್ಯ ಸ್ಥಾವರಕ್ಕೆ ಹೆಚ್ಚುವರಿ ವಿದ್ಯುತ್‌ ಬೇಡಿಕೆಗೆ ಸಂಬಂಧಿಸಿದ ಭದ್ರತಾ ಠೇವಣಿ ಹಣವನ್ನು ಕೌಂಟರ್‌ನಲ್ಲಿ ಯುಪಿಐ ಸ್ಕ್ಯಾನರ್‌ ಮೂಲಕ ಪಾವತಿಸಲು ಅನುಮತಿಸಬೇಕು ಮತ್ತು ಕರ್ನಾಟಕ ವಿದ್ಯುತ್‌ಚ್ಛಕ್ತಿ ಕಾಯಿದೆ ಸೆಕ್ಷನ್‌ 47(5) ಜಾರಿ ಕೋರಿ ಬೆಂಗಳೂರಿನ ಹೊಸಕೋಟೆಯ ಸೀತಾಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ಗೌಡ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಶ್ರೀಧರ್‌ ಪ್ರಭು ಅವರು “ಹೆಚ್ಚುವರಿ ವಿದ್ಯುತ್‌ಗೆ ಠೇವಣಿ ಹಣ ಪಾವತಿಸಲು ಫಾಸ್ಟ್‌ ಟ್ರ್ಯಾಕ್‌ ತಂತ್ರಾಂಶದ ಮೂಲಕವೂ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ತಿರಸ್ಕರಿಸಿ, ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ. ಯುಪಿಐ ಸ್ಕ್ಯಾನರ್‌ ಹಾಕಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹಿಂಬರಹ ನೀಡಿದ್ದಾರೆ. ಇದರಿಂದ ವಯಸ್ಸಾದವರು, ಹಿರಿಯ ನಾಗರಿಕರಿಗೆ ಸಮಸ್ಯೆಯಾಗಿದೆ” ಎಂದರು.

ಸರ್ಕಾರದ ಪರ ವಕೀಲರು “ಠೇವಣಿ ಹಣವನ್ನು ಫಾಸ್ಟ್‌ಟ್ರ್ಯಾಕ್‌ ತಂತ್ರಾಂಶದ ಮೂಲಕ ಪಾವತಿಸಲು ಸೂಚಿಸಲಾಗಿದೆ. ಬೆಸ್ಕಾಂ ಜನಸ್ನೇಹಿ ಸೇವೆಗಳ ಫಾಸ್‌ಟ್ರ್ಯಾಕ್‌ ತಂತ್ರಾಂಶದಲ್ಲಿ ನೋಂದಣಿ ಮಾಡಿದರೆ 24 ಗಂಟೆಗಳೂ ಹಣ ಪಾವತಿಸಬಹುದು. ಇದರಲ್ಲಿ ಸ್ಕ್ಯಾನರ್/ಯುಪಿಐ/ಡಿಜಿಟಲ್‌ ವ್ಯವಸ್ಥೆ ಮೂಲಕ ಹಣ ಪಾವತಿಸಬಹುದು. 10 ಸಾವಿರ ರೂಪಾಯಿ ಮೇಲಾದರೆ ಡಿಡಿ ಸಲ್ಲಿಸಬೇಕು. ಆದರೆ, ಅರ್ಜಿದಾರರು ಬ್ಯಾಂಕ್‌ಗೆ ಹೋಗಲು ಸಿದ್ಧರಿಲ್ಲ. ಸ್ಕ್ಯಾನರ್‌ ಕೇಳುತ್ತಿದ್ದಾರೆ. ಬೆಸ್ಕಾಂ ಕೌಂಟರ್‌ಗಳಲ್ಲಿ ಯುಪಿಐ ಸ್ಕ್ಯಾನರ್‌ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳುತ್ತೇವೆ. ಆ ಪ್ರಕ್ರಿಯೆ ಚಾಲ್ತಿಯಲ್ಲಿದೆ” ಎಂದರು.

ಇದರಿಂದ ಕುಪಿತವಾದ ಪೀಠವು “ಜನರು ಹಣ ಪಾವತಿಸಲು ಬರುತ್ತಿದ್ದಾರೆ. ಆದರೆ, ನೀವು ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಕಾಸು ಕೊಡ್ತೇವೆ ಎಂದರೂ ಬೇಡ ಎನ್ನುತ್ತೀದ್ದೀರಿ. ನಮ್ಮ ನ್ಯಾಯಾಲಯದಲ್ಲೂ ನಾವು ಇ-ಪೇ ಸೌಲಭ್ಯ ಕಲ್ಪಿಸುತ್ತಿದ್ದೇವಲ್ಲವೇ? ತರಕಾರಿ ಅಂಗಡಿಯವರೂ ಯುಪಿಐ ಮೂಲಕ ಹಣ ಪಡೆಯುತ್ತಾರೆ. ನೀವು ತೆಗೆದುಕೊಳ್ಳುವುದಿಲ್ಲ ಎಂದರೆ ಹೇಗೆ? ಇದಕ್ಕಾಗಿ ನಿರ್ದೇಶನ ಕೇಳಲು ಹೈಕೋರ್ಟ್‌ಗೆ ಅರ್ಜಿ ಹಾಕಬೇಕೆ? ಸರ್ಕಾರವು ಡಿಜಿಟಲ್‌ ವ್ಯವಸ್ಥೆಗೆ ಬನ್ನಿ ಎಂದು ಮನೆಯ ಮೇಲೆ ನಿಂತು ಸಾರುತ್ತಿದೆ. ನೀವು ಕರೆನ್ಸಿ ನೋಟುಗಳ ಮೂಲಕ ಹಣ ಸಂಗ್ರಹಿಸಲು ಬಯಸುತ್ತೀರಾ” ಎಂದು ಮೌಖಿಕವಾಗಿ ಅತೃಪ್ತಿ ವ್ಯಕ್ತಪಡಿಸಿತು.

ಅಂತಿಮವಾಗಿ ನ್ಯಾಯಾಲಯವು “ಇಡೀ ಜಗತ್ತು ಯುಪಿಐ ಮೂಲಕ ಹಣ ಸ್ವೀಕರಿಸುತ್ತಿರುವಾಗ ಬೆಸ್ಕಾಂ ಯುಪಿಐ ವಿಧಾನದ ಮೂಲಕ ಹಣ ಸ್ವೀಕರಿಸಲು ಇಂಥಾ ಕಾಲದಲ್ಲೂ ನಿರಾಕರಿಸುತ್ತಿರುವುದು ವಿಚಿತ್ರ” ಎಂದು ಆದೇಶದಲ್ಲಿ ದಾಖಲಿಸಿದೆ.

“ಬೆಸ್ಕಾಂನ ಎಲ್ಲಾ ಪಾವತಿಗಳಿಗೆ ಸಂಬಂಧಿಸಿದಂತೆ ಯುಪಿಐ ಅಥವಾ ಆನ್‌ಲೈನ್‌ ವಿಧಾನದ ಮೂಲಕ ಹಣ ಪಾವತಿಸಲು ಏಕೆ ವ್ಯವಸ್ಥೆ ಮಾಡಿಲ್ಲ ಎಂಬುದರ ಕುರಿತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಆಗಸ್ಟ್‌ 9ರ ಒಳಗೆ ಅಫಿಡವಿಟ್‌ ಸಲ್ಲಿಸಬೇಕು” ಎಂದು ವಿಚಾರಣೆ ಮುಂದೂಡಿದೆ.