IT Rules 2021, Bombay High Court 
ಸುದ್ದಿಗಳು

ಐಟಿ ನಿಯಮ 9ರ ಅಡಿಯ ನೀತಿ ಸಂಹಿತೆ ಅನುಸರಣೆಗೆ ಬಾಂಬೆ ಹೈಕೋರ್ಟ್ ತಡೆ

ಭಾರತ ಸಂವಿಧಾನದ 19ನೇ ವಿಧಿಯಡಿ ಮೇಲ್ನೋಟಕ್ಕೆ ನಿಯಮ 9 ಅರ್ಜಿದಾರರ ಹಕ್ಕುಗಳನ್ನು ಅತಿಕ್ರಮಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ನೂತನ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್‌ ಮಾಧ್ಯಮ ಸಂಹಿತೆ) ಕಾನೂನು 2021ರ ನಿಯಮ 9 (1) ಮತ್ತು (3)ರ ಕಾರ್ಯಾಚರಣೆಗೆ ಬಾಂಬೆ ಹೈಕೋರ್ಟ್‌ ತಡೆ ನೀಡಿದೆ.

ಐಟಿ ನಿಯಮ ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್‌ ಮನವಿ ಇತ್ಯರ್ಥವಾಗುವವರೆಗೆ ಐಟಿ ನಿಯಮ ಅನ್ವಯಿಸುವುದಕ್ಕೆ ಮಧ್ಯಂತರ ತಡೆ ನೀಡುವಂತೆ ಕೋರಿ ಡಿಜಿಟಲ್‌ ಸುದ್ದಿ ಪೋರ್ಟಲ್‌ ಲೀಫ್‌ಲೆಟ್‌ ಮತ್ತು ಮುಂಬೈ ಮೂಲದ ಪತ್ರಕರ್ತ ನಿಖಿಲ್‌ ಮಂಗೇಶ್‌ ವಾಗ್ಲೆ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ನೇತೃತ್ವದ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದೆ.

“ಸಂವಿಧಾನದ 19(1)(ಎ) ನೇ ವಿಧಿಯಡಿ ನಿಯಮ 9 ಅರ್ಜಿದಾರರ ಹಕ್ಕಿನ ಮೇಲೆ ಅತಿಕ್ರಮಣ ಮಾಡುತ್ತದೆ” ಎಂದು ಪೀಠ ಹೇಳಿದ್ದು, “ಇದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಮೂಲ ಕಾನೂನನ್ನು ಮೀರುತ್ತದೆ” ಎಂದು ಹೇಳಿದೆ.

ಐಟಿ ನಿಯಮಗಳಿಗೆ ಸೇರ್ಪಡೆಗೊಳಿಸಲಾಗಿರುವ ನೀತಿ ಸಂಹಿತೆಯ ಅನುಬಂಧಕ್ಕೆ ಬದ್ಧವಾಗಿರಲು, ಅನುಸರಣೆ ಮಾಡಲು ನಿಯಮ 9 (1) ಅನುವು ಮಾಡುತ್ತದೆ. ನಿಯಮ 9 (3) ಪ್ರಕಾಶಕರಿಗೆ ಸಂಬಂಧಿಸಿದಂತೆ ಮಾಡಲಾದ ಕುಂದುಕೊರತೆಗಳ ಪರಿಹಾರಕ್ಕೆ ಮೂರು ಹಂತದ ರಚನೆಯನ್ನು ಒದಗಿಸುತ್ತದೆ. ಪ್ರಸ್ತುತ ನ್ಯಾಯಾಲಯವು ನಿಯಮ 9ರ ಉಪ ಸೆಕ್ಷನ್‌ (1) ಮತ್ತು (3) ಕ್ಕೆ ತಡೆ ನೀಡಿದೆ.

ಈ ಮಧ್ಯೆ, ನಿಯಮ 9 ರ ಉಪ ಪ್ರಕರಣ (2) ಅನುಷ್ಠಾನವನ್ನು ನ್ಯಾಯಾಲಯ ತಡೆಹಿಡಿದಿಲ್ಲ. ಇದು ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಲ್ಲಂಘನೆಯಾಗಿದ್ದರೆ ಪರಿಣಾಮಾತ್ಮಕ ಕ್ರಮಗಳಿಗೆ ಅನುವು ಮಾಡುತ್ತದೆ.

ಇನ್ನು ನಿಯಮ 14 ಪ್ರಶ್ನಿಸಿರುವುದಕ್ಕೆ ಸಂಬಂಧಿಸಿದಂತೆ ಅಂತರ ಇಲಾಖಾ ಸಮಿತಿ ರಚನೆ ಮಾಡಿಲ್ಲದಿರುವುದರಿಂದ ಹಾಗೂ ಸಮಿತಿಗೆ ಯಾವುದೇ ಅಧಿಕಾರಿಗಳ ನೇಮಕ ಮಾಡಿಲ್ಲವಾದ್ದರಿಂದ ಈ ಕುರಿತು ನಿರ್ಧಾರ ಮಾಡಲು ಅಷ್ಟೇನು ತುರ್ತಿಲ್ಲ ಎಂದು ಪೀಠ ಹೇಳಿದೆ. ಮೇಲ್ವಿಚಾರಣಾ ಸಮಿತಿ ರಚಿಸಿದ ಬಳಿಕ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ನ್ಯಾಯಾಲಯ ಒದಗಿಸಿದೆ.

ನಿಯಮ 16 ಮಾಹಿತಿ ತಡೆಹಿಡಿಯಲು ಅವಕಾಶ ಮಾಡಿಕೊಡಲಿದ್ದು, ಇದು ಐಟಿ ನಿಯಮಗಳು 2009ರ ನಿಯಮ 9ಕ್ಕೆ ಸಮಾನ ವಿಚಾರವಾಗಿದೆ ಎಂದು ನ್ಯಾಯಾಲಯ ಹೇಳಿದೆ. “ಅರ್ಜಿದಾರರು 2009ರ ಕಾನೂನಿನ ನಿಯಮ 9ರಿಂದ ಸಮಸ್ಯೆ ಎದುರಿಸಿಲ್ಲದೇ ಇರುವುದರಿಂದ ನಿಯಮ 16ಕ್ಕೆ ತಡೆ ನೀಡುವಂತೆ ಅವರು ಕೋರಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಐಟಿ ನಿಯಮಗಳು 2021 ಭಾರತ ಸಂವಿಧಾನದ ಅಡಿ ದೊರೆತಿರುವ ಮೂಲಭೂತ ಹಕ್ಕುಗಳಾದ 14, 19 ಮತ್ತು 21ನೇ ವಿಧಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ವ್ಯಾಪ್ತಿ ಮೀರಿವೆ ಎಂದು ಎರಡೂ ಮನವಿಗಳಲ್ಲಿ ಆಪಾದಿಸಲಾಗಿತ್ತು.

ನ್ಯಾಯಾಂಗದ ಅಧಿಕಾರವನ್ನು ಕಾನೂನುಬಾಹಿರವಾಗಿ ಕಾರ್ಯಾಂಗಕ್ಕೆ ವರ್ಗಾಯಿಸುವ ಮೂಲಕ ಐಟಿ ನಿಯಮಗಳು - 2021 ಹೊರಡಿಸಲಾಗಿದ್ದು, ಇದು ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿರುವ ಸಾಲುಸಾಲು ತೀರ್ಪುಗಳನ್ನು ಉಲ್ಲಂಘಿಸುವ ಪ್ರಯತ್ನವಾಗಿದೆ ಎಂದು ತಗಾದೆ ಎತ್ತಲಾಗಿದೆ. ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ವಿಸ್ತೃತ ಪ್ರತಿಕ್ರಿಯೆ ಸಲ್ಲಿಸುವಂತೆ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ಮುಂದೂಡಿದೆ.