Justice M Nagaprasanna and Karnataka HC 
ಸುದ್ದಿಗಳು

'ಬಾಲವೇ ನಾಯಿ ಅಲ್ಲಾಡಿಸಲು ಅವಕಾಶ ನೀಡಿದಂತೆ': ಜನನ-ಮರಣಗಳ ನೋಂದಣಿ ತಿದ್ದುಪಡಿ ಅಧಿನಿಯಮ ರದ್ದುಪಡಿಸಿದ ಹೈಕೋರ್ಟ್‌

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹಿಂದಿನ ವ್ಯವಸ್ಥೆಯಂತೆ ಜನನ-ಮರಣಗಳ ನೋಂದಣಿಗೆ ಸಂಬಂಧಿಸಿದಂತೆ ವ್ಯಾಜ್ಯಗಳ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಜೆಎಂಫ್‌ಸಿ ನ್ಯಾಯಾಲಯಕ್ಕೆ ಮರಳಿದಂತಾಗಿದೆ.

Bar & Bench

ಜನನ-ಮರಣಗಳ ನೋಂದಣಿಗೆ ಸಂಬಂಧಿಸಿದ ವ್ಯಾಜ್ಯಗಳ ಕುರಿತು ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗೆ ನೀಡಿದ್ದ ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ಅಧಿನಿಯಮಗಳು-2022 ಅನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಕರ್ನಾಟಕ ಜನನ ಮತ್ತು ಮರಣ (ತಿದ್ದುಪಡಿ) ಅಧಿನಿಯಮಗಳು-2022 ಜಾರಿಗೆ 2022ರ ಜುಲೈ 18ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವಂತೆ ಬೀದರ್ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ವಿ. ಬಿರಾದರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ತಿದ್ದುಪಡಿ ನಿಯಮಗಳು ಮೂಲ ಕಾಯಿದೆಗೆ ವಿರುದ್ಧವಾಗಿದ್ದು, ಕಾನೂನು ಬಾಹಿರವಾಗಿರುವುದರಿಂದ ಅಸಿಂಧುಗೊಳಿಸಲಾಗಿದೆ. 2022ರ ತಿದ್ದುಪಡಿ ನಿಯಮಗಳನ್ನು ರದ್ದುಪಡಿಸದಿದ್ದರೆ ಬಾಲವೇ ನಾಯಿಯನ್ನು ಅಲುಗಾಡಿಸಲು ಅವಕಾಶ ನೀಡಿದಂತಾಗುತ್ತದೆ. ಅಧಿಸೂಚನೆಯ ನಂತರ ಕೈಗೊಂಡಿರುವ ಕ್ರಮಗಳು ಕಾನೂನಿನ ದೃಷ್ಟಿಯಲ್ಲಿ ಅನೂರ್ಜಿತವಾಗಲಿವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು ಕೇಂದ್ರ ಸರ್ಕಾರದ ಜನನ ಮತ್ತು ಮರಣ ಕಾಯಿದೆಗೆ ವಿರುದ್ಧವಾಗಿ ನಿಯಮಕ್ಕೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ನ್ಯಾಯಾಲಯಗಳ ಅಧಿಕಾರ ಮೊಟಕುಗೊಳಿಸಿ, ಉಪವಿಭಾಗಾಧಿಕಾರಿಗಳಿಗೆ ನೀಡಿದೆ. ಇದು ಕಾನೂನುಬಾಹಿರ ಕ್ರಮ. ಮೂಲ ಕಾಯಿದೆಯ ಪ್ರಕಾರ, ಜನನ ಮತ್ತು ಮರಣ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಅಧಿಕಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಾತ್ರವಿದೆ. ಈ ರೀತಿ ತಿದ್ದುಪಡಿ ನಿಯಮ ಜಾರಿಗೆ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ವಾದಿಸಿದ್ದರು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹಿಂದಿನ ವ್ಯವಸ್ಥೆಯಂತೆ ಜನನ-ಮರಣಗಳ ನೋಂದಣಿಗೆ ಸಂಬಂಧಿಸಿದಂತೆ ವ್ಯಾಜ್ಯಗಳ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಜೆಎಂಫ್‌ಸಿ ನ್ಯಾಯಾಲಯಕ್ಕೆ ಮರಳಿದಂತಾಗಿದೆ.

ಪ್ರಕರಣದ ಹಿನ್ನೆಲೆ: ಕೇಂದ್ರ ಸರ್ಕಾರದ ಜನನ-ಮರಣಗಳ ಕಾಯಿದೆ-1969ರ ಸೆಕ್ಷನ್ 30ರ ಪ್ರಕಾರ ಜನನ-ಮರಣಗಳ ನೋಂದಣಿ ಕುರಿತ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಅಧಿಕಾರ ಜೆಎಂಎಫ್‌ಸಿ ನ್ಯಾಯಾಲಯ ಹೊಂದಿತ್ತು. ಆದರೆ, ಅಧಿಕಾರವನ್ನು ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗಳಿಗೆ ವರ್ಗಾಯಿಸಿ, ರಾಜ್ಯ ಸರ್ಕಾರ 2022ರಲ್ಲಿ ತಿದ್ದುಪಡಿ ನಿಯಮ ರೂಪಿಸಿತ್ತು. ಅದರಂತೆ ಕರ್ನಾಟಕ ಜನನ-ಮರಣಗಳ ನೋಂದಣಿ (ತಿದ್ದುಪಡಿ) ಅಧಿಯಮಗಳು-2022 ಅನ್ನು ಜಾರಿಗೊಳಿಸಿ ರಾಜ್ಯ ಸರ್ಕಾರವು 2022ರ ಜುಲೈ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.