ಜನನ ಮತ್ತು ಮರಣ ನೋಂದಣಿ ತಿದ್ದುಪಡಿ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಸಂವಿಧಾನದ ಪ್ರಕಾರ, ಜನನ ಮತ್ತು ಮರಣ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಅಧಿಕಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಾತ್ರವಿದೆ. ರಾಜ್ಯ ಸರ್ಕಾರಕ್ಕೆ ತಿದ್ದುಪಡಿ ಮಾಡುವ ಅಧಿಕಾರವೇ ಇಲ್ಲ ಎಂದು ವಾದಿಸಿದ ಹಿರಿಯ ವಕೀಲ ಪಿ ಪಿ ಹೆಗ್ಡೆ.
Justice Krishna S Dixit and Karnataka HC
Justice Krishna S Dixit and Karnataka HC
Published on

ಜನನ ಮತ್ತು ಮರಣ ನೋಂದಣಿ ವಿವಾದಗಳ ತೀರ್ಮಾನದಲ್ಲಿ ನ್ಯಾಯಾಂಗದ ಅಧಿಕಾರ ಮೊಟಕುಗೊಳಿಸಿ, ಅದನ್ನು ಉಪವಿಭಾಗಾಕಾರಿಗೆ ನೀಡಲು ರಾಜ್ಯ ಸರ್ಕಾರ ಮಾಡಿದ್ದ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೀದರ್ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ವಿ.ಬಿರಾದರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ, ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಸಾಂಖ್ಯಿಕ ಇಲಾಖೆಗೆ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ಕೇಂದ್ರದ ಕಾಯಿದೆಗೆ ವಿರುದ್ಧವಾಗಿ ನಿಯಮಕ್ಕೆ ತಿದ್ದುಪಡಿ ಮಾಡುವ ಮೂಲಕ ನ್ಯಾಯಾಲಯದ ಅಧಿಕಾರ ಮೊಟಕುಗೊಳಿಸಿ ಉಪವಿಭಾಗಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಇದು ಕಾನೂನು ಬಾಹಿರ ಹಾಗೂ ಸಂವಿಧಾನದ ಮೂಲಭೂತ ತತ್ವಗಳಿಗೆ ವಿರುದ್ಧವಾದ ಕ್ರಮ. ಸಂವಿಧಾನದ ಪ್ರಕಾರ, ಜನನ ಮತ್ತು ಮರಣ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಅಧಿಕಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಾತ್ರವಿದೆ. ರಾಜ್ಯ ಸರ್ಕಾರಕ್ಕೆ ತಿದ್ದುಪಡಿ ಮಾಡುವ ಅಧಿಕಾರವೇ ಇಲ್ಲ” ಎಂದರು.

Also Read
ಜನನ-ಮರಣ ನೋಂದಣಿ ತಿದ್ದುಪಡಿ ಕಾನೂನುಬಾಹಿರ: ಉಪವಿಭಾಗಾಧಿಕಾರಿ ಬೇಡ, ಮ್ಯಾಜಿಸ್ಟ್ರೇಟ್‌ ಬಳಿಯೇ ಇರಲಿ ಅಧಿಕಾರ ಎಂದ ಎಎಬಿ

”ಉಪ ವಿಭಾಗಾಧಿಕಾರಿಗೆ ನ್ಯಾಯಾಂಗದ ಅಧಿಕಾರ ನೀಡಿರುವುದು ಕಾನೂನುಬಾಹಿರ. ಇದರಿಂದ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವುದಲ್ಲದೆ, ಜನರಿಗೆ ಇನ್ನಷ್ಟು ಸಮಸ್ಯೆಯಾಗಲಿದೆ. ಹೀಗಾಗಿ, ಸಂವಿಧಾನಬಾಹಿರವಾದ ಕ್ರಮಕ್ಕೆ ತಡೆ ನೀಡಬೇಕು” ಎಂದು ಕೋರಿದರು.

ತಿದ್ದುಪಡಿಯನ್ನು ಬೆಂಗಳೂರು ವಕೀಲರ ಸಂಘ ಸೇರಿ ರಾಜ್ಯದ ಎಲ್ಲ ವಕೀಲ ಸಂಘಟನೆಗಳು ವಿರೋಧಿಸಿ, ಪ್ರತಿಭಟನೆ ನಡೆಸಿದ್ದವು. ಅಲ್ಲದೆ, ಜನನ ಮತ್ತು ಮರಣ ನೋಂದಣಿ ಪ್ರಕರಣಗಳನ್ನು ನ್ಯಾಯಾಲಯಗಳಿಂದ ಉಪವಿಭಾಗಾಕಾರಿಗೆ ವರ್ಗಾಯಿಸುವ ಸರಕಾರದ ಕ್ರಮ ಕಾನೂನಬಾಹಿರವಾಗಿದೆ. ಜತೆಗೆ ಕರ್ನಾಟಕ ಜನನ ಮತ್ತು ಮರಣ (ತಿದ್ದುಪಡಿ) ನಿಯಮ-2022 ತಿದ್ದುಪಡಿ ಮೂಲ ಕಾಯಿದೆಗೆ ವಿರುದ್ಧವಾಗಿದೆ. ಈ ಕುರಿತು ಜುಲೈ 18ರಂದು ಹೊರಡಿಸಿರುವ ತಿದ್ದುಪಡಿ ಅಧಿಸೂಚನೆ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದವು.

Also Read
ಜನನ-ಮರಣ ನೋಂದಣಿ ತಿದ್ದುಪಡಿ ಕಾಯಿದೆ ವಿರೋಧಿಸಿ ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ

‘‘ತಿದ್ದುಪಡಿಯಿಂದ ವೃತ್ತಿಪರ ವಕೀಲರಿಗೆ ತೊಂದರೆಯಾಗಲಿದ್ದು, ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆ. ಜನನ ಮತ್ತು ಮರಣ ನೋಂದಣಿ ಕಾಯಿದೆ ಸೆಕ್ಷನ್ 13(3)ರಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರವಿಲ್ಲ. ಕಾಯಿದೆ ಸೆಕ್ಷನ್ 13(3) ರ ಅನ್ವಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಅಥವಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ಗೆ ಮಾತ್ರ ಅಧಿಕಾರವಿತ್ತು. ಮೂಲ ಕಾಯಿದೆಗೆ ವಿರುದ್ಧವಾಗಿ ತಿದ್ದುಪಡಿ ಮಾಡಿ ಈಗ ಆ ಅಧಿಕಾರವನ್ನು ಉಪವಿಭಾಗಾಧಿಕಾರಿ ಅಥವಾ ಉಪ ಪ್ರಾದೇಶಿಕ ಮ್ಯಾಜಿಸ್ಟ್ರೇಟ್‌ಗೆ ನೀಡಲಾಗಿದೆ. ಈ ತಿದ್ದುಪಡಿ ಕಾಯಿದೆಯು ಕಾನೂನು ಬಾಹಿರವಾಗಿರುವುದರಿಂದ ಕೂಡಲೇ ಅದನ್ನು ವಾಪಸ್ ಪಡೆಯಬೇಕು,’’ಎಂದು ವಕೀಲರ ಸಂಘ ಕಾನೂನು ಕಾರ್ಯದರ್ಶಿಗೆ ಪತ್ರ ಬರೆದಿತ್ತು.

Kannada Bar & Bench
kannada.barandbench.com