High Court of J&K and Ladakh, Jammu 
ಸುದ್ದಿಗಳು

ಎಸ್‌ಟಿ ವರ್ಗಕ್ಕೆ ಪಹಾಡಿ ಭಾಷಿಕರ ಸೇರ್ಪಡೆ ವಿರೋಧಿಸಿ ಅರ್ಜಿ: ಸರ್ಕಾರಗಳಿಗೆ ಕಾಶ್ಮೀರ ಹೈಕೋರ್ಟ್‌ ನೋಟಿಸ್‌

ಮುಂದಿನ ವಿಚಾರಣೆಯ ವೇಳೆಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡದಿದ್ದರೆ ಅರ್ಜಿದಾರರಿಗೆ ಮಧ್ಯಂತರ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.

Bar & Bench

ಪಹಾಡಿ ಭಾಷಿಕರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆಗಸ್ಟ್ 12ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌  ಈಚೆಗೆ ತಾಕೀತು ಮಾಡಿದೆ. [ ಮೊಹಮ್ಮದ್ ಅನ್ವರ್ ಚೌಧರಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಜಮ್ಮು ಮತ್ತು ಕಾಶ್ಮೀರದ ಪರಿಶಿಷ್ಟ ಪಂಗಡದ ಕೋಟಾದಲ್ಲಿ ಪಹಾಡಿ ಜನಾಂಗೀಯ ಗುಂಪು ಸೇರಿದಂತೆ ನಾಲ್ಕು ಬುಡಕಟ್ಟುಗಳಿಗೆ ಶೇ 10ರಷ್ಟು ಮೀಸಲಾತಿ ನೀಡಿರುವ ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಪರಿಶಿಷ್ಟ ಪಂಗಡಗಳ ತಿದ್ದುಪಡಿ ಕಾಯಿದೆ- 2024ನ್ನು ಪ್ರಶ್ನಿಸುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಈ ಸಂಬಂಧ ಈ ವರ್ಷದ ಏಪ್ರಿಲ್‌ನಲ್ಲಿ ನ್ಯಾಯಾಲಯ ನೋಟಿಸ್ ನೀಡಿತ್ತು. ಆದರೆ, ಜುಲೈ 3ರಂದು ಪ್ರಕರಣ ಕೈಗೆತ್ತಿಕೊಂಡಾಗ ಸರ್ಕಾರಿ ಅಧಿಕಾರಿಗಳು ಇನ್ನೂ ಪ್ರತಿಕ್ರಿಯೆ ಸಲ್ಲಿಸದಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ತಾಶಿ ರಬ್ಸ್ತಾನ್ ಮತ್ತು ಪುನೀತ್ ಗುಪ್ತಾ ಅವರಿದ್ದ ಪೀಠ ಮುಂದಿನ ವಿಚಾರಣೆಯ ವೇಳೆಗೆ ಅಧಿಕಾರಿಗಳು ಪ್ರತಿಕ್ರಿಯಿಸಲು ವಿಫಲವಾದರೆ ಅರ್ಜಿದಾರರಿಗೆ ಮಧ್ಯಂತರ ಪರಿಹಾರ  ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

ಪಹಾಡಿ ಮಾತನಾಡುವ ಜನರನ್ನು ಕೇವಲ ಭಾಷೆಯ ಆಧಾರದ ಮೇಲೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗದು. ಯಾವುದೇ ಸಮಂಜಸ ಸಮರ್ಥನೆ ಅಥವಾ ಪ್ರಾಯೋಗಿಕ ದತ್ತಾಂಶವಿಲ್ಲದೆ ಸಂಸತ್ತು 'ಪಹಾಡಿ ಜನಾಂಗೀಯ ಗುಂಪು', 'ಪಹಾಡಿ ಬುಡಕಟ್ಟು', 'ಕೊಹ್ಲಿ' ಮತ್ತು 'ಗಡ್ಡಾ ಬ್ರಾಹ್ಮಣ' ಸಮುದಾಯಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಿದೆ ಎಂದು ಅರ್ಜಿದಾರರು ವಿಚಾರಣೆ ವೇಳೆ ವಾದಿಸಿದರು.

ಜಮ್ಮು ಮತ್ತು ಕಾಶ್ಮೀರ ಆಡಳಿತವು ಹೊರಡಿಸಿದ ಶಾಸನಬದ್ಧ ಆದೇಶವನ್ನು ಸಹ ಅವರು ಪ್ರಶ್ನಿಸಿದ್ದಾರೆ, ಅದರ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಗುರುತಿಸಲ್ಪಟ್ಟಿರುವ ಪರಿಶಿಷ್ಟ ಪಂಗಡಗಳಿಗೆ ಶೇ 10ರಷ್ಟು ಮೀಸಲಾತಿ ನೀಡಿರುವ ಜೊತೆಗೆ ಹೊಸದಾಗಿ ಸೇರ್ಪಡೆಗೊಂಡ ನಾಲ್ಕು ಬುಡಕಟ್ಟುಗಳಿಗೆ ಹೆಚ್ಚುವರಿಯಾಗಿ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಗುಂಪುಗಳು ಪೂಂಚ್ ಮತ್ತು ರಾಜೌರಿಯಂತಹ ಪ್ರದೇಶಗಳಲ್ಲಿ ಮೇಲ್ಜಾತಿ ಸಮುದಾಯಗಳಾಗಿವೆ. ಈಗ ಈ ಮೇಲ್ಜಾತಿಗಳನ್ನು ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಸೇರಿಸಿರುವುದರಿಂದ ಎಸ್‌ಟಿ ವರ್ಗದಲ್ಲಿರುವ ಗುಂಪುಗಳು ಈ ಮೇಲ್ಜಾತಿ ಸಮುದಾಯಗಳ ಸದಸ್ಯರಿಂದ ತರತಮ ಎದುರಿಸಿದರೆ ಎಸ್‌ಸಿ/ ಎಸ್‌ಟಿ ಕಾಯಿದೆಯಡಿ ಪ್ರಕರಣ ದಾಖಲಿಸಲು ಸಾಧ್ಯವಾಗದು. ಹೀಗೆ ಕಾನೂನು ರಕ್ಷಣೆ ದೊರೆಯದೆ ಹೋಗುವುದರಿಂದ ಅಸ್ತಿತ್ವದಲ್ಲಿರುವ ಬುಡಕಟ್ಟುಗಳ ಸದಸ್ಯರನ್ನು ಇನ್ನಷ್ಟು ಸಂಭಾವ್ಯ ಅನ್ಯಾಯ  ಮತ್ತು ತಾರತಮ್ಯಗಳಿಗೆ ಒಡ್ಡಿದಂತಾಗುತ್ತದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಹೊಸದಾಗಿ ಸೇರ್ಪಡೆಗೊಂಡ ಸಮುದಾಯಗಳಿಗೆ ಬುಡಕಟ್ಟು ಲಕ್ಷಣಗಳಿಲ್ಲ. ಅಥವಾ ಸಾಮಾಜಿಕ ಅಸಮಾನತೆ ಮತ್ತು ಅಥವಾ ಆರ್ಥಿಕ ಅಸಮಾನತೆಯನ್ನು ಅವು ಎದುರಿಸುತ್ತಿಲ್ಲ ಎಂದು ಅರ್ಜಿದಾರರು ವಾದಿಸಿದರು.