ಹಿಂದಿ ದೇಶದ ರಾಷ್ಟ್ರಭಾಷೆಯೇ? ಈ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಅವಲೋಕನವನ್ನು ತಾವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ತೆಲುಗು ಭಾಷಿಕ ಆರೋಪಿಯೊಬ್ಬರು ಪ್ರಶ್ನಿಸಿದ್ದಾರೆ. [ಗಂಗಂ ಸುಧೀರ್ ಕುಮಾರ್ ರೆಡ್ಡಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಆರೋಪಿಯ ಶಾಸನಬದ್ಧ ಹಕ್ಕುಗಳ ಕುರಿತಾದ ವಿವರಣೆ ಇದ್ದ ಹಿಂದಿಯು ರಾಷ್ಟ್ರಭಾಷೆ ಎಂದು ತಿಳಿಸಿದ್ದ ಬಾಂಬೆ ಹೈಕೋರ್ಟ್ ಮೇಲ್ಮನವಿದಾರ ಗಂಗಮ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಜಾಮೀನು ನಿರಾಕರಿಸಿತ್ತು. ಹೈದರಾಬಾದ್ ನಿವಾಸಿ ಟೂರ್ಸ್ ಮತ್ತು ಟ್ರಾವೆಲ್ ಕಂಪನಿಯ ಮಾಲೀಕರಾಗಿರುವ ರೆಡ್ಡಿ ಅವರ ಬಳಿ ವಾಣಿಜ್ಯ ಬಳಕೆ ಪ್ರಮಾಣದ ಮಾದಕವಸ್ತು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು.
ಅರ್ಜಿದಾರರಿಗೆ ರಾಷ್ಟ್ರಭಾಷೆಯಾದ ಹಿಂದಿಯಲ್ಲಿ ಅವರ ಹಕ್ಕಿನ ಬಗ್ಗೆ ತಿಳಿಸಲಾಗಿದೆ.
ಬಾಂಬೆ ಹೈಕೋರ್ಟ್
"ಅರ್ಜಿದಾರನಿಗೆ ರಾಷ್ಟ್ರೀಯ ಭಾಷೆಯಾದ ಹಿಂದಿಯಲ್ಲಿ ತನ್ನ ಹಕ್ಕಿನ ಬಗ್ಗೆ ತಿಳಿಸಲಾಗಿದೆ. ಅರ್ಜಿದಾರರನ್ನು ಮುಂಬೈನಿಂದ ಬಂಧಿಸಲಾಗಿದೆ. ಅರ್ಜಿದಾರರು ಟೂರ್ಸ್ ಮತ್ತು ಟ್ರಾವೆಲ್ ವ್ಯವಹಾರ ನಡೆಸುತ್ತಿದ್ದರು ಎಂಬ ಅಂಶ ಈ ಹಂತದಲ್ಲಿ ಅವರು ಸ್ಥಳೀಯ ಭೂ ಪ್ರದೇಶ ಮತ್ತು ಭಾಷೆ ಬಗ್ಗೆ ತಿಳಿದಿದ್ದಾರೆ ಎಂದು ನಂಬಲು ಈ ನ್ಯಾಯಾಲಯವನ್ನು ಪ್ರೇರೇಪಿಸುತ್ತದೆ. ಈ ಹಂತದಲ್ಲಿ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 50 ರ ಅಡಿಯಲ್ಲಿ ಅರ್ಜಿದಾರರ ಹಕ್ಕನ್ನು ತಿಳಿಸಲಾದ ಹಿಂದಿ ಭಾಷೆ ಬಗ್ಗೆ ಅವರಿಗೆ ಅರಿವಿತ್ತು ಎಂದು ಭಾವಿಸಬಹುದು ಎಂಬುದಾಗಿ ಹೈಕೋರ್ಟ್ ಹೇಳಿತ್ತು. ಆದರೆ ತಾನು ತೆಲುಗು ಭಾಷೆಯನ್ನಷ್ಟೇ ಬಲ್ಲವನಾಗಿದ್ದರೂ ಮಾದಕವಸ್ತು ವಿರೋಧಿ ದಳದವರು ತನ್ನ ಶಾಸನಬದ್ಧ ಹಕ್ಕುಗಳ ಬಗ್ಗೆ ಹಿಂದಿಯಲ್ಲಿ ತಿಳಿಸಿರುವುದರಿಂದ ಜಾಮೀನು ನೀಡುವಂತೆ ಆರೋಪಿ ಸುಪ್ರೀಂಕೋರ್ಟ್‌ನಲ್ಲಿ ಕೋರಿದ್ದಾರೆ.
“ಹಿಂದಿ ರಾಷ್ಟ್ರಭಾಷೆಯಲ್ಲ ಎಂಬುದನ್ನು ಗ್ರಹಿಸಲು ಹೈಕೋರ್ಟ್ ವಿಫಲವಾಗಿದೆ. ತನ್ನನ್ನು ಬಂಧಿಸಿದ್ದೇಕೆ ಎಂಬ ವಿವರಗಳನ್ನು ತನಗೆ ತಿಳಿಸಿಲ್ಲ. ಬಂಧನಕ್ಕೆ ಕಾರಣಗಳನ್ನು ತಿಳಿಸದೇ ಇದ್ದಾಗ ಆರೋಪಿಯ ಮೂಲಭೂತ ಮತ್ತು ಶಾಸನಬದ್ಧ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಆರೋಪಪಟ್ಟಿ ಸಲ್ಲಿಸಲಾಗಿದ್ದರೂ ಆರೋಪಿಗಳು 2 ವರ್ಷಗಳಿಂದ ಕಸ್ಟಡಿಯಲ್ಲಿದ್ದಾರೆ. ಆರೋಪಗಳನ್ನು ಇನ್ನಷ್ಟೇ ನಿಗದಿಪಡಿಸಬೇಕಿದ್ದು ಇನ್ನೂ ವಿಚಾರಣೆ ಆರಂಭವಾಗಿಲ್ಲ” ಎಂಬುದು ಅರ್ಜಿದಾರರ ವಾದವಾಗಿದೆ.
ಈ ಮಧ್ಯೆ, ಬಂಧಿತನಿಗೆ ಅರ್ಥವಾಗುವ ಭಾಷೆಯಲ್ಲಿ ಬಂಧನಕ್ಕೆ ಕಾರಣವಾದ ಅಂಶಗಳನ್ನು ಲಿಖಿತವಾಗಿ ತಿಳಿದುಕೊಳ್ಳುವುದು ಸಂವಿಧಾನದ 22 (5) ರ ಅಡಿಯಲ್ಲಿ ಆತನ ಮೂಲಭೂತ ಹಕ್ಕು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.