ಸುದ್ದಿಗಳು

ಪಾಸ್‌ಪೋರ್ಟ್‌ ಕೋರಿ ಮೆಹಬೂಬಾ ಮುಫ್ತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್

ಸಾವಂತ್ ಸಿಂಗ್ ಸಾಹ್ನಿ ಮತ್ತು ರಾಮರತ್ನಂ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಪಾಸ್‌ಪೋರ್ಟ್‌ ನೀಡುವಂತೆ ಒತ್ತಾಯಿಸಲು ಅರ್ಜಿದಾರರಿಗೆ ಸಂಪೂರ್ಣ ಹಕ್ಕು ಇಲ್ಲ ಎಂದು ನ್ಯಾಯಾಲಯ ತಿಳಿಸಿತು.

Bar & Bench

ಪಾಸ್‌ಪೋರ್ಟ್‌ ಒದಗಿಸಲು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಹಾಗೂ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಮುಫ್ತಿ ಅವರಿಗೆ ಪಾಸ್‌ಪೋರ್ಟ್‌ ಒದಗಿಸಬಾರದೆಂದು ಪೊಲೀಸ್‌ ಪರಿಶೀಲನಾ ವರದಿ ಶಿಫಾರಸು ಮಾಡಿದ ಬಳಿಕ ಶ್ರೀನಗರದ ಪಾಸ್‌ಪೋರ್ಟ್‌ ಅಧಿಕಾರಿ ಮುಫ್ತಿ ಅವರ ಪಾಸ್‌ಪೋರ್ಟ್‌ ಅರ್ಜಿಯನ್ನು ತಿರಸ್ಕರಿಸಿದ್ದರು ಎಂಬುದನ್ನು ನ್ಯಾ. ಅಲಿ ಮೊಹಮದ್‌ ಮಾಗ್ರೆ ಅವರಿದ್ದ ಪೀಠ ಗಮನಿಸಿತು.

ಇಂತಹ ಸಂದರ್ಭಗಳಲ್ಲಿ ಪಾಸ್‌ಪೋರ್ಟ್‌ ಒದಗಿಸುವ ಸಂಬಂಧ ಅರ್ಜಿದಾರರ ಪರವಾಗಿ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದಲ್ಲದೆಯೂ ವ್ಯಕ್ತಿಯೊಬ್ಬರ ಪರವಾಗಿ ಪಾಸ್‌ಪೋರ್ಟ್‌ ಒದಗಿಸುವ ನ್ಯಾಯಾಲಯದ ವ್ಯಾಪ್ತಿ ಕೂಡ ಸೀಮಿತವಾಗಿದೆ. ಪ್ರಕರಣವನ್ನು ನಿಯಂತ್ರಿಸುವ ಕಾನೂವ ವ್ಯವಸ್ಥೆಯ ಆದೇಶದ ಬೆಳಕಿನಲ್ಲಿ ಪ್ರಕರಣವನ್ನು ತ್ವರಿತವಾಗಿ ಪರಿಗಣಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದು ಅಷ್ಟೇ ಎಂದು ಪೀಠ ಹೇಳಿದೆ.

ಪ್ರಕರಣವನ್ನು ಸೋಮವಾರ ವಿಚಾರಣೆಗೆ ಪರಿಗಣಿಸಿದಾಗ ಸಹಾಯಕ ಸಾಲಿಸಿಟರ್ ಜನರಲ್ (ಎಎಸ್‌ಜಿಐ), ತಾಹಿರ್ ಮಜೀದ್ ಶಮ್ಸಿ ಅವರು ಪಾಸ್‌ಪೋರ್ಟ್‌ ಕಚೇರಿ ಶ್ರೀನಗರ ಹೊರಡಿಸಿದ ಪತ್ರವನ್ನು ನ್ಯಾಯಾಲಯಕ್ಕೆ ನೀಡಿದರು. 1967ರ ಪಾಸ್‌ಪೋರ್ಟ್‌ ಕಾಯಿದೆ ಸೆಕ್ಷನ್ 6ರ ನಿಬಂಧನೆಗಳ ಅಡಿಯಲ್ಲಿ ಅರ್ಜಿದಾರರಿಗೆ ಪಾಸ್‌ಪೋರ್ಟ್‌ ನೀಡುವಂತಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ವ್ಯಕ್ತಿಯು ಭಾರತದಿಂದ ನಿರ್ಗಮಿಸುವುದು ದೇಶದ ಭದ್ರತೆಗೆ ಧಕ್ಕೆ ತರುವಂತಿದ್ದರೆ ಅಂತಹ ವ್ಯಕ್ತಿಯ ಪಾಸ್‌ಪೋರ್ಟ್‌ ಅನ್ನು ನಿರಾಕರಿಸಬಹುದು ಎಂದು ಕಾಯಿದೆಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಕಾಯಿದೆಯ ಸೆಕ್ಷನ್ 11 ರ ಅಡಿಯಲ್ಲಿ ಆದೇಶ ಸ್ವೀಕರಿಸಿದ ದಿನದಿಂದ 30 ದಿನಗಳ ಒಳಗಾಗಿ ಪ್ರತಿವಾದಿ ಮಾಡಿದ ನಿರಾಕರಣೆ ಆದೇಶದ ವಿರುದ್ಧ ಅರ್ಜಿದಾರರು ಜಂಟಿ ಕಾರ್ಯದರ್ಶಿ (ಪಿಎಸ್ಪಿ) ಮತ್ತು ವಿದೇಶಾಂಗ ಸಚಿವಾಲಯದ ಮುಖ್ಯ ಪಾಸ್‌ಪೋರ್ಟ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಪರಿಹಾರವಿದೆ ಎಂದು ಶಮ್ಸಿ ವಿವರಿಸಿದರು.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಜಹಾಂಗೀರ್ ಇಕ್ಬಾಲ್ ಗಣೈ, ಅರ್ಜಿದಾರರ ಪಾಸ್‌ಪೋರ್ಟ್‌ ನಿರಾಕರಣೆ ಆದೇಶವನ್ನು ಪ್ರತಿವಾದಿ ಕಾಯಿದೆಯ ಸೆಕ್ಷನ್‌ ಆರರ ಅಡಿ ಉದ್ದೇಶಪೂರ್ವಕವಾಗಿ ಹೊರಡಿಸಿದ್ದು ಕಾಯಿದೆಯ ಸೆಕ್ಷನ್‌ 11ರ ವ್ಯಾಪ್ತಿ ಇದು ಬರುವುದಿಲ್ಲ ಎಂದು ವಾದಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಸಾವಂತ್‌ ಸಿಂಗ್‌ ಸಾಹ್ನಿ ಮತ್ತು ನವದೆಹಲಿಯ ಸಹಾಯಕ ಪಾಸ್‌ಪೋರ್ಟ್‌ ಅಧಿಕಾರಿ ರಾಮರತ್ನಂ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಪಾಸ್‌ಪೋರ್ಟ್‌ ನೀಡುವಂತೆ ಒತ್ತಾಯಿಸಲು ಅರ್ಜಿದಾರರಿಗೆ ಸಂಪೂರ್ಣ ಹಕ್ಕು ಇಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.